ಬೆಳೆ ಪರಿಹಾರದ ಹಣ ಸಾಲಕ್ಕೆ ಮುಟ್ಟುಗೋಲು ಹಾಕಿಕೊಂಡರೆ ಬ್ಯಾಂಕ್‍ಗಳಿಗೆ ನೋಟಿಸ್ಸರ್ಕಾರದ ಎಚ್ಚರಿಕೆ
ಮೈಸೂರು

ಬೆಳೆ ಪರಿಹಾರದ ಹಣ ಸಾಲಕ್ಕೆ ಮುಟ್ಟುಗೋಲು ಹಾಕಿಕೊಂಡರೆ ಬ್ಯಾಂಕ್‍ಗಳಿಗೆ ನೋಟಿಸ್ಸರ್ಕಾರದ ಎಚ್ಚರಿಕೆ

October 29, 2019

ಬೆಂಗಳೂರು, ಅ.28(ಕೆಎಂಶಿ)- ಬೆಳೆ ಪರಿಹಾರಕ್ಕೆ ನೀಡಿದ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲ ಮನ್ನಾಕ್ಕೆ ಮುಟ್ಟುಗೋಲು ಹಾಕಿಕೊಂಡರೆ ಅಂತಹ ಆಡಳಿತ ಮಂಡಳಿಗಳಿಗೆ ಸರ್ಕಾರ ನೋಟಿಸ್ ನೀಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಹಾರ ಧನವನ್ನು ಯಾವುದೇ ಸಾಲಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ. ಈ ಸಂಬಂಧ ಎಲ್ಲಾ ಬ್ಯಾಂಕ್‍ಗಳಿಗೆ ನೋಟಿಸ್ ನೀಡಲು ಡಿಸಿಗಳಿಗೆ ಸೂಚಿಸಲಾಗಿದೆ. ಬೆಳೆ ಪರಿಹಾರ ಧನವನ್ನು ಬ್ಯಾಂಕ್‍ಗಳು ಸಾಲದ ಬಾಕಿ ಹಣಕ್ಕೆ ಮುಟ್ಟುಗೋಲು ಹಾಕಿಕೊಳ್ಳುತ್ತಿವೆ ಎಂಬ ದೂರುಗಳು ರೈತರಿಂದ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಿಗೆ ನೋಟಿಸ್ ನೀಡಲು ಹೇಳಿದ್ದೇನೆ. ಹಿಂಗಾರು ಹಂಗಾಮಿನ ಬರ ಪರಿಹಾರ ಧನ 1045 ಕೋಟಿ ರೂ. ಬಂದಿದ್ದು, ರೈತರ ಖಾತೆಗಳಿಗೆ ವರ್ಗಾವಣೆ ಮಾಡಲು ಸೂಚಿಸಲಾಗಿದೆ. 2ನೇ ಹಂತದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರು, ಬೆಳೆ ನಷ್ಟವಾದವರಿಗೂ ಪರಿಹಾರ ನೀಡಲಾಗುವುದು. ಆಸ್ತಿ-ಪಾಸ್ತಿ ಹಾಗೂ ಬೆಳೆ ಹಾನಿ ಬಗ್ಗೆ ಅಂದಾಜು ಮಾಡ ಲಾಗುತ್ತಿದೆ ಎಂದರು. ನೆರೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಇದುವರೆಗೂ ಡಿಸಿಗಳ ಖಾತೆಗಳಿಗೆ 6,449.93 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಪರಿಹಾರ ಕಾಮಗಾರಿಗಳಿಗೆ ಎಷ್ಟು ಬೇಕಾದರೂ ಹಣವನ್ನು ವೆಚ್ಚ ಮಾಡಬಹುದು. ಒಂದು ವೇಳೆ ನೀಡಿದ ಹಣ ಸಾಲದಿದ್ದರೆ, ಸರ್ಕಾರ ಮತ್ತೆ ಬಿಡುಗಡೆ ಮಾಡುತ್ತದೆ. 2ನೇ ಹಂತದಲ್ಲಿ ಉಂಟಾಗಿರುವ ನೆರೆ ಇಳಿಮುಖವಾಗಿದ್ದು, ಒಂದೆರಡು ದಿನದಲ್ಲಿ ತಹಬದಿಗೆ ಬರಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ನಂತರ ನಷ್ಟದ ಅಂದಾಜಿನ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ ಎಂದು ಹೇಳಿದರು.

Translate »