ಮೈಸೂರು: ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ವಿಂಗಡಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪುರ ಠಾಣೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, 3 ಲಾರಿಗಳನ್ನು ವಶಪಡಿಸಿ ಕೊಂಡಿದ್ದಾರೆ. ಡಿ.ಸಾಲುಂಡಿ ಗ್ರಾಮದ ಚಿಕ್ಕಬುದ್ದಿ ಅವರು 1 ಎಕರೆ ಜಮೀನನ್ನು ಮೈಸೂರಿನ ಉದಯಗಿರಿ ನಿವಾಸಿ ಮಹ ಮ್ಮದ್ ಹುಸೇನ್ ಅವರಿಗೆ ಭೋಗ್ಯಕ್ಕೆ ನೀಡಿದ್ದರು. ಆ ಜಮೀ ನನ್ನು ತ್ಯಾಜ್ಯ ಸಂಗ್ರಹ ಹಾಗೂ ವಿಂಗಡಣೆಗೆ ಬಳಸಿಕೊಳ್ಳಲಾಗು ತ್ತಿತ್ತು. ಕೇರಳದಿಂದ ಲಾರಿಯಲ್ಲಿ ತ್ಯಾಜ್ಯವನ್ನು ತರಿಸಿಕೊಂಡು, ಇಲ್ಲಿ ವಿಂಗಡಣೆ ಮಾಡಿ, ಉಳಿದ ತ್ಯಾಜ್ಯವನ್ನು ಅಲ್ಲಿಯೇ ರಾಶಿ ಹಾಕಲಾಗಿತ್ತು. ಇದರಿಂದ ಭೀತಿಗೊಂಡ ನಿವಾಸಿಗಳು, ಪೊಲೀಸ ರಿಗೆ ದೂರು ನೀಡಿದ್ದರು. ಈ ಬಗ್ಗೆ ಮೂರು ದಿನಗಳ ಹಿಂದೆ ಜಯಪುರ ಠಾಣೆ ಸಬ್‍ಇನ್‍ಸ್ಪೆಕ್ಟರ್, ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಮಾರಕ ವಾಗುವ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಜಮೀನು ಮಾಲೀಕ ಚಿಕ್ಕಬುದ್ದಿ ಹಾಗೂ ಜಮೀನು ಭೋಗ್ಯಕ್ಕೆ ಪಡೆದು ತ್ಯಾಜ್ಯ ವಿಂಗಡಣೆ ನಡೆಸುತ್ತಿದ್ದ ಮಹಮ್ಮದ್ ಹುಸೇನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀ ಸರು, ಪರಿಶೀಲನೆ ಸಂದರ್ಭದಲ್ಲಿದ್ದ 3 ಲಾರಿಗಳನ್ನು ವಶಪಡಿಸಿ ಕೊಂಡಿದ್ದಾರೆ. ಆ ಲಾರಿಗಳಲ್ಲಿ ಘನತ್ಯಾಜ್ಯ ಹಾಗೂ ಬಯೋ ಮೆಡಿಸಿನ್ ವೇಸ್ಟ್ ತುಂಬಿರುವುದಾಗಿ ತಿಳಿದುಬಂದಿದೆ.