ಅಕ್ರಮ ಮರಳು ದಂಧೆ; 3 ವಾಹನ ವಶ
ಕೊಡಗು

ಅಕ್ರಮ ಮರಳು ದಂಧೆ; 3 ವಾಹನ ವಶ

October 3, 2018

ವಿರಾಜಪೇಟೆ: ಯಾವುದೇ ಪರವಾನಗಿ ಇಲ್ಲದೆ ಸರಕಾರದ ನಿಯಮ ವನ್ನು ಗಾಳಿಗೆ ತೂರಿ ಮರಳು ದಂಧೆಯಲ್ಲಿ ತೊಡಗಿದ್ದ ಮೂರು ಪಿಕಪ್ ಜೀಪ್‍ಗಳನ್ನು ಮರಳು ಸಮೇತ ವಿರಾಜಪೇಟೆ ತಹಶಿಲ್ದಾರ್ ಆರ್.ಗೋವಿಂದ ರಾಜು ಮತ್ತು ಇತರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರಿಶ್ಚನ್ ಕಾಲೋನಿ ಬಳಿಯಿರುವ ತೋಡುವಿನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ತಹಶಿಲ್ದಾರ್ ಮತ್ತು ಪೊಲೀಸರು ಮರಳು ತುಂಬಿದ ಕೆ.ಎ-12, ಎ.9069 ಹಾಗೂ ಕೆ.ಎ-12, ಎ.4006 ಮತ್ತು ಕೆ.ಎ-12,ಬಿ. 5541 ನಂವರಿನ ಮೂರು ಪಿಕಪ್ ಜೀಪುಗಳನ್ನು ವಶಪಡಿಸಿ ಕೊಂಡಿದ್ದಾರೆ. ಅಧಿಕಾರಿಗಳು ಬರುವುದನ್ನು ಕಂಡ ಕೂಡಲೇ ಜೀಪಿಗೆ ಮರಳು ತುಂಬಿಸುತ್ತಿದ್ದವರು ಪರಾರಿಯಾಗಿದ್ದಾರೆ.

ಈ ಸಂಬಂಧ ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ದಾಳಿ ನಡೆಸಿದ ಸಂದರ್ಭ ಕಂದಾಯ ಪರಿವೀಕ್ಷಕ ಪಳಂಗಪ್ಪ, ಗ್ರಾಮಲೆಕ್ಕಿಗ ಸಾಧಿಕ್, ಕೃಷ್ಣ, ಜಾಗೃತ್, ಮತ್ತು ಹರೀಶ್ ಅವರುಗಳು ಭಾಗವಹಿಸಿದ್ದರು.

Translate »