ಮೈಸೂರು, ಜೂ.20(ಪಿಎಂ)- ಮೈಸೂರಿನ ಚಾಮುಂಡಿಬೆಟ್ಟ ಪಾದದ ಬಳಿಯಿ ರುವ ತಾವರೆಕಟ್ಟೆ ಗ್ರಾಮಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಾವರೆಕಟ್ಟೆ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮ ಸ್ಥರ ಮನವಿ ಆಲಿಸಿ ಗ್ರಾಮದಲ್ಲಿನ ಕುಡಿ ಯುವ ನೀರಿನ ಬವಣೆ ನೀಗಿಸುವ ಸಂಬಂಧ ಶಾಶ್ವತ ಪರಿಹಾರ ಕಂಡು ಹಿಡಿಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಗ್ರಾಮಕ್ಕೆ ಸಮೀಪದ ಎಸ್‍ಡಿಎಂ-ಐಎಂಡಿ ಕಾಲೇಜಿನವರೆಗೆ ಕಾವೇರಿ ನೀರು ಪೂರೈಕೆ ಆಗುತ್ತಿದ್ದು, ಅಲ್ಲಿಂದ ಗ್ರಾಮದವರೆಗೆ ನೀರು ಪೂರೈಕೆ ಮಾಡಲು ಅವಕಾಶವಿದೆ. ಟ್ಯಾಂಕ್ ನಿರ್ಮಿಸಿ ಪೈಪ್ ಲೈನ್ ಅಳವಡಿಸಿ ನೀರು ಸರಬರಾಜು ಮಾಡಬಹುದು ಎಂದು ಮಾಜಿ ಶಾಸಕ ವಾಸು, ಸಚಿವರ ಗಮನಕ್ಕೆ ತಂದರು.
ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಗ್ರಾಮಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಬಗ್ಗೆ ಒಂದು ಗಂಟೆಯೊಳಗೆ ಅಂದಾಜು ಪಟ್ಟಿ ಸಿದ್ಧಪಡಿಸಿ ತಮ್ಮೊಂದಿಗೆ ಚರ್ಚೆ ಮಾಡುವಂತೆ ಸೂಚನೆ ನೀಡಿದರು.
ಡಿಸಿ ಮೇಲೆ ಸಿಡಿಮಿಡಿ: ಗ್ರಾಮದಲ್ಲಿನ ಗ್ರಾಮಸ್ಥರ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಖಾತೆ ಮಾಡುವುದನ್ನು ಸ್ಥಗಿತಗೊಳಿಸ ಲಾಗಿದೆ. ತಾತ, ಅಪ್ಪ ಸಾವನ್ನಪ್ಪಿದ ಬಳಿಕ ಅವರ ಮುಂದಿನ ಪೀಳಿಗೆಯವರ ಹೆಸ ರಿಗೂ ಖಾತೆ ಮಾಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಈ ವೇಳೆ ಅರಣ್ಯ ಇಲಾಖೆ ಆಕ್ಷೇಪದ ಹಿನ್ನೆಲೆ ಯಲ್ಲಿ ಸಮಸ್ಯೆಯಾಗಿದೆ ಎಂದು ಜಿಲ್ಲಾಧಿ ಕಾರಿ ಅಭಿರಾಂ ಜಿ.ಶಂಕರ್ ಅಸಹಾಯ ಕತೆ ವ್ಯಕ್ತಪಡಿಸಿದಾಗ, ಸಿಡಿಮಿಡಿಗೊಂಡ ಸಚಿವರು, ಕೂಡಲೇ ಈ ಸಮಸ್ಯೆ ಬಗೆ ಹರಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭ ತಾವರೆಕಟ್ಟೆ ಕೆರೆಯ ಪುನಶ್ಚೇತನ ನೆಪದಲ್ಲಿ ಕೆರೆ ಹೂಳಿನ ಮಣ್ಣನ್ನು ಇಟ್ಟಿಗೆ ಕಾರ್ಖಾನೆಗಳಿಗೆ ರವಾನಿಸಲಾಗಿದೆ ಎಂದು ಗ್ರಾಮಸ್ಥರು ಸಚಿವರ ಬಳಿ ದೂರಿ ದಾಗ, ಹೂಳು ಮಣ್ಣು ಉತ್ತಮ ಗೊಬ್ಬರ ವಾಗಲಿದೆ. ಅದನ್ನು ರೈತರಿಗೆ ಕೊಡ ಬಹು ದಿತ್ತು ಎಂದು ಅಭಿಪ್ರಾಯಪಟ್ಟ ಸಚಿವರು, ಈ ಸಂಬಂಧ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಡಿಸಿ ಅವರಿಗೆ ಸೂಚಿಸಿದರು.
ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ತಾವರೆಕಟ್ಟೆ ಗ್ರಾಮದ ನೀರಿನ ಬವಣೆ ನೀಗಿಸಲು ಈಗಾಗಲೇ ಕೊಳವಿ ಬಾವಿ ನಿರ್ಮಿಸಲಾಗಿದೆ. ಆದಾಗ್ಯೂ ಕಾವೇರಿ ನೀರು ಪೂರೈಸಿ ಶಾಶ್ವತ ಪರಿ ಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಕೋರಿದ ಹಿನ್ನೆಲೆಯಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಖಾತೆ ಮಾಡುವ ಕುರಿತಂತೆ ಉದ್ಭವಿಸಿರುವ ಸಮಸ್ಯೆಯನ್ನು ಇಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಿದ್ದೇನೆ ಎಂದರು.
ಇದಕ್ಕೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರಿಯಾಗಿ ಮಳೆ-ಬೆಳೆ ಆಗುತ್ತಿಲ್ಲ. ಒಂದು ಕಡೆ ಬರಗಾಲ ವಿದ್ದರೆ, ಮತ್ತೊಂದು ಕಡೆ ಅತಿವೃಷ್ಟಿ ಎದುರಿಸುವಂತಾಗಿದೆ. ಈ ಸಮಸ್ಯೆಯಿಂದ ಮುಕ್ತಗೊಳ್ಳಲು ದೇವರ ಅನುಗ್ರಹ ಮುಖ್ಯ. ಹೀಗಾಗಿ ತಾಯಿ ಚಾಮುಂಡೇ ಶ್ವರಿ ದರ್ಶನದೊಂದಿಗೆ ಇಂದಿನ ಕಾರ್ಯ ಆರಂಭಿಸಿದ್ದೇನೆ ಎಂದು ತಿಳಿಸಿದರು.
ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ಎಸಿ ಹೆಚ್.ಎನ್.ಶಿವೇಗೌಡ, ತಹಸೀ ಲ್ದಾರ್ ಮಹೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ವೆಂಕ ಟೇಶ್, ಅಧೀಕ್ಷಕ ಅಭಿಯಂತರ ವೀರ ಭದ್ರ, ಎಇಇ ಸಿದ್ದಿಕ್, ಚಾಮುಂಡಿ ಬೆಟ್ಟ ಗ್ರಾಪಂನ ಅಧ್ಯಕ್ಷೆ ಗೀತಾ, ಸದಸ್ಯ ಎಂ. ಮಹದೇವಸ್ವಾಮಿ, ಪಿಡಿಓ ಪೂರ್ಣಿಮಾ ಸೇರಿದಂತೆ ಮತ್ತಿತರರು ಹಾಜರಿದ್ದರು.