ಹುಣಸೂರು ಉಪ ಚುನಾವಣೆಯಲ್ಲಿ ಜಿಟಿಡಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ
ಮೈಸೂರು

ಹುಣಸೂರು ಉಪ ಚುನಾವಣೆಯಲ್ಲಿ ಜಿಟಿಡಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ

December 14, 2019

ಮೈಸೂರು,ಡಿ.13(ಪಿಎಂ)-ಶಾಸಕ ಜಿ.ಟಿ.ದೇವೇಗೌಡರು ಸಮಯ ಸಾಧಕ ರಾಜಕಾರಣ ಮಾಡುತ್ತಿದ್ದು, ಹುಣಸೂರು ಉಪಚುನಾವಣೆಯಲ್ಲಿ ತಮ್ಮ ಜೆಡಿಎಸ್ ಪಕ್ಷಕ್ಕೂ ಕೆಲಸ ಮಾಡದೇ ಕಾಂಗ್ರೆಸ್ ಪರ ವಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹೇಮಂತ್‍ಕುಮಾರ್ ಗೌಡ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹುಣ ಸೂರಿನಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಜಿ.ಟಿ. ದೇವೇಗೌಡರು, ಇದೀಗ ಬಿಜೆಪಿ ಅಭ್ಯರ್ಥಿ ಸೋಲಿಗೆ ಸಿ.ಪಿ.ಯೋಗೀಶ್ವರ್ ಕಾರಣ ಎನ್ನುತ್ತಿ ರುವುದು ಖಂಡನೀಯ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಇವರು ನಿಂತಾಗ ನಾವೂ ಪರೋಕ್ಷ ವಾಗಿ ಸಹಕರಿಸಿದೆವು. ವಿಶ್ವನಾಥ್ ಕೂಡ ಸಹಕರಿಸಿದ್ದರು. ಅದೇ ವಿಶ್ವನಾಥ್ ಅವರನ್ನು ಸೋಲಿಸಲು ಜಿ.ಟಿ.ದೇವೇ ಗೌಡರು ಮುಂದಾಗಬಾರದಿತ್ತು ಎಂದು ಅಭಿಪ್ರಾಯಪಟ್ಟರು.

ಸ್ವಂತ ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ. ಈಗಲಾದರೂ ಒಂದು ಪಕ್ಷ ಆಯ್ಕೆ ಮಾಡಿ ಕೊಂಡು ರಾಜಕೀಯ ಮಾಡಲಿ ಎಂದು ಹೇಳಿದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಜಿ.ಎಂ.ಮಹೇಶ್ ಗೆಜ್ಜಗಳ್ಳಿ, ಪಕ್ಷದ ಜಿಲ್ಲಾ ಮುಖಂಡರಾದ ಗೋಪಾಲರಾವ್, ಅರುಣ್‍ಕುಮಾರ್ ಗೌಡ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »