ಕೆ.ಆರ್.ಸಂಚಾರ ಠಾಣೆಯಲ್ಲಿ ಅರಿವು ಕೇಂದ್ರ, ಸಿಬ್ಬಂದಿ ವಿಶ್ರಾಂತಿ ಕೊಠಡಿ ಉದ್ಘಾಟನೆ
ಮೈಸೂರು

ಕೆ.ಆರ್.ಸಂಚಾರ ಠಾಣೆಯಲ್ಲಿ ಅರಿವು ಕೇಂದ್ರ, ಸಿಬ್ಬಂದಿ ವಿಶ್ರಾಂತಿ ಕೊಠಡಿ ಉದ್ಘಾಟನೆ

December 29, 2019

ಮೈಸೂರು,ಡಿ.28(ಆರ್‍ಕೆ)-ಮೈಸೂರು ಕೆ.ಆರ್. ಸಂಚಾರ ಠಾಣೆಯಲ್ಲಿ ಸಂಚಾರ ನಿಯಮಗಳ ಅರಿವು ಕೇಂದ್ರ ಹಾಗೂ ಸಿಬ್ಬಂದಿ ವಿಶ್ರಾಂತಿ ಕೊಠಡಿಯನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಶನಿವಾರ ಉದ್ಘಾಟಿಸಿದರು.

ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜೆಎಲ್‍ಬಿ ರಸ್ತೆಯ ಕೆ.ಆರ್. ಸಂಚಾರ ಠಾಣೆ ಆವರಣದಲ್ಲಿ ಅರಿವು ಕೇಂದ್ರವನ್ನು ಆರಂಭಿಸಲಾಗಿದೆ.

ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಬದಲು ಸಂಚಾರ ಪೊಲೀಸರು ಗುಲಾಬಿ ಹೂ ನೀಡಿ ನಿಯಮ ಪಾಲಿಸುವಂತೆ ಅರಿವು ಮೂಡಿಸುವುದು, ಇತರರ ಪ್ರಾಣ ಉಳಿಸುವ ಸಂಬಂಧವೂ ಜಾಗೃತಿ ಮೂಡಿಸುವ ದೃಶ್ಯಾ ವಳಿಯ ಬಿಂಬವನ್ನು ಕೇಂದ್ರದ ಪ್ರವೇಶ ಸ್ಥಳದಲ್ಲಿ ಅಳವಡಿ ಸಲಾಗಿದೆ. ಕೇಂದ್ರದ ಒಳಗೆ ಹೋಗುತ್ತಿದ್ದಂತೆಯೇ ಸುತ್ತ ಗೋಡೆಗಳಲ್ಲಿ ಸಂಚಾರ ನಿಯಮ ಸೂಚಿಸುವ ಚಿಹ್ನೆಗಳು ನಿಮ್ಮನ್ನು ಸ್ವಾಗತಿಸಲಿವೆ. ಒಂದೆಡೆ ದೊಡ್ಡ ಪರದೆಯಲ್ಲಿ ಕುಡಿದು ವಾಹನ ಚಾಲನೆ ಮಾಡಿದರೆ, ಹೆಲ್ಮೆಟ್ ರಹಿತ ವಾಹನ ಚಾಲನೆ, ಮೊಬೈಲ್‍ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡಿದರೆ, ಅತಿವೇಗ, ಅಜಾಗರೂಕತೆ ಚಾಲನೆಯಿಂದಾಗುವ ಅಪಘಾತಗಳ ಬಗ್ಗೆ ವಿಡಿಯೋ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಗುತ್ತಿದೆ.

ಅಲ್ಲದೆ, ಪೊಲೀಸ್ ಆಯುಕ್ತ, ಸಂಚಾರ ವಿಭಾಗದ ಎಸಿಪಿ, ಸಂಚಾರ ನಿಯಮ ಪಾಲನೆ ಸಂಬಂಧ ಮಾಹಿತಿ ನೀಡುವ ದೃಶ್ಯ. ಮೈಸೂರು ನಗರದ ವಾಹನ ಸಂಚಾರ ದಟ್ಟಣೆ, ಏಕಮುಖ ಸಂಚಾರ, ಸಿಗ್ನಲ್ ಲೈಟ್ ಸರ್ಕಲ್‍ಗಳಲ್ಲಿ ಅನು ಸರಿಸಬೇಕಾದ ಕ್ರಮ, ನೋ ಪಾರ್ಕಿಂಗ್ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪರದೆ ಮೇಲೆ ವಿವರಿಸಲು ವ್ಯವಸ್ಥೆ ಮಾಡಲಾಗಿದೆ. ಕುಳಿತು ವಿಡಿಯೋ ವೀಕ್ಷಿಸಲು ಆಸನದ ವ್ಯವಸ್ಥೆ, ವಿದ್ಯುತ್ ದೀಪ, ಕುಡಿಯುವ ನೀರಿನ ವ್ಯವಸ್ಥೆಯನ್ನು ಅರಿವು ಕೇಂದ್ರದಲ್ಲಿ ಒದಗಿಸಲಾಗಿದ್ದು, ಸಿಸಿಟಿವಿ, ಪೊಲೀಸರು ತೆಗೆಯುವ ಫೋಟೋಗಳ ಆಧಾರ ದಲ್ಲಿ ನಜರ್‍ಬಾದಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರುವ ಸಂಚಾರ ಕಮಾಂಡ್ ಸೆಂಟರ್, ಟ್ರಾಫಿಕ್ ಆಟೋ ಮೇಷನ್ ಸೆಂಟರ್‍ಗಳಲ್ಲಿ ವಾಹನಗಳ ನೋಂದಣಿ ಸಂಖ್ಯೆಯ ಆರ್‍ಸಿ ಮಾಲೀಕರಿಗೆ ನೋಟಿಸ್ ಜಾರಿಯಾಗುವ ಪ್ರಕ್ರಿಯೆ ಬಗ್ಗೆಯೂ ಈ ಕೇಂದ್ರದಲ್ಲಿ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗಲಿದೆ. ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೂ ತೆರೆದಿರುವ ಅರಿವು ಕೇಂದ್ರದಲ್ಲಿ ಸಾರ್ವಜನಿಕರು ಸಂಚಾರ ನಿಯಮಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ವಿಶ್ರಾಂತಿ ಕೊಠಡಿ: ಕೆ.ಆರ್.ಸಂಚಾರ ಠಾಣೆ ಆವರಣ ದಲ್ಲೇ ಸಿಬ್ಬಂದಿ ವಿಶ್ರಾಂತಿ ಪಡೆಯಲು ಕೊಠಡಿಯೊಂ ದನ್ನು ಸಿದ್ಧಪಡಿಸಲಾಗಿದ್ದು, ಮಂಚ, ಹಾಸಿಗೆ, ಶೌಚಾ ಲಯ, ಸೋಫಾ, ಚೇರ್‍ಗಳನ್ನು ಒದಗಿಸಲಾಗಿದೆ. ಡಿಸಿಪಿ ಎಂ.ಮುತ್ತುರಾಜ್, ಸಂಚಾರ ವಿಭಾಗದ ಎಸಿಪಿ ಎಸ್.ಎನ್. ಸಂದೇಶ್‍ಕುಮಾರ್, ಕೆ.ಆರ್.ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಆರ್.ಜಗದೀಶ್, ಸಬ್‍ಇನ್‍ಸ್ಪೆಕ್ಟರ್ ವರಗುಡಿ ಶಿವಕುಮಾರ್, ದೇವರಾಜ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಸೂರಜ್, ಎನ್‍ಆರ್ ಸಂಚಾರ ಠಾಣೆಯ ದಿವಾಕರ, ವಿ.ವಿ.ಪುರಂನ ಬಿ.ಜಿ. ಪ್ರಕಾಶ್, ಸಿದ್ದಾರ್ಥನಗರದ ಬಸವರಾಜು ಉಪಸ್ಥಿತರಿದ್ದರು.

Translate »