ಕ್ರೀಡಾ ಸ್ಫೂರ್ತಿ ಮೆರೆದ ಜಿಪಂ ಸದಸ್ಯರು, ಸಿಬ್ಬಂದಿ ವರ್ಗ
ಮೈಸೂರು

ಕ್ರೀಡಾ ಸ್ಫೂರ್ತಿ ಮೆರೆದ ಜಿಪಂ ಸದಸ್ಯರು, ಸಿಬ್ಬಂದಿ ವರ್ಗ

December 29, 2019

ಮೈಸೂರು, ಡಿ.28(ಪಿಎಂ)- ಮೈಸೂರು ಜಿಲ್ಲಾ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಗ್ರಾಮೀಣ ಕ್ರೀಡೆ ಗಳು ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದರು.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ಆಶ್ರಯದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಕ್ರೀಡಾಕೂಟದಲ್ಲಿ ಸದಸ್ಯರು ಹಾಗೂ ಸಿಬ್ಬಂದಿ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಪುರುಷರಿಗೆ ಕ್ರಿಕೆಟ್, ವಾಲಿಬಾಲ್, 100 ಮೀ. ಓಟ, ಶಾಟ್‍ಫುಟ್, ಹಗ್ಗಿ-ಜಗ್ಗಾಟ, ಸ್ಲೋ ಸೈಕಲ್ ರೇಸ್, ಲಗೋರಿ, ಮೂರು ಕಾಲಿನ ಓಟ, ಬಲೂನ್ ಊದುವ ಸ್ಪರ್ಧೆ, ಏಮಿಂಗ್ ಸರ್ಕಲ್, ಕ್ವಿಜ್, ಬಾಲ್ ಇನ್ ದಿ ಬ್ಯಾಸ್ಕೆಟ್, ಮಡಿಕೆ ಹೊಡೆಯುವ ಸ್ಪರ್ಧೆಗಳು ನಡೆದವು. ಮಹಿಳೆಯರಿಗೆ ಹಿಮ್ಮುಖ ನಡಿಗೆ, ಥ್ರೋಬಾಲ್, ಅಳಿ ಗುಳಿ ಮನೆ, ಶಾಟ್‍ಫುಟ್, ಹಗ್ಗ-ಜಗ್ಗಾಟ, ಹೂ ಕಟ್ಟುವ ಸ್ಪರ್ಧೆ, ಲಗೋರಿ, ರಾಗಿ ಬೀಸುವ ಸ್ಪರ್ಧೆ, ಬಲೂನ್ ಊದುವ ಸ್ಪರ್ಧೆ, ಅವರೇಕಾಳು ಸುಲಿಯುವ ಸ್ಪರ್ಧೆ, ಕ್ವಿಜ್, ಬಾಲ್ ಇನ್ ದಿ ಬ್ಯಾಸ್ಕೆಟ್, ಮಡಿಕೆ ಹೊಡಿ ಯುವ ಸ್ಪರ್ಧೆಗಳು ನಡೆದವು.

ಕಲ್ಲಿನಲ್ಲಿ ರಾಗಿ ಬೀಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್ ಮಾತನಾಡಿ, ಕಳೆದ 3 ವರ್ಷಗಳಿಂದ ಈ ಕ್ರೀಡಾ ಕೂಟ ಆಯೋಜಿಸಲಾಗುತ್ತಿದೆ. ವಿಶೇಷವಾಗಿ ಈ ಬಾರಿ ಗ್ರಾಮೀಣ ಕ್ರೀಡೆಗಳಿಗೂ ಆದ್ಯತೆ ನೀಡಲಾಗಿದೆ. ಗ್ರಾಮೀಣ ಕ್ರೀಡೆಗಳು ನಶಿಸುವ ಹಂತ ತಲುಪಿದ್ದು, ಈ ಹಿನ್ನೆಲೆಯಲ್ಲಿ ಅವುಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಆ ಮೂಲಕ ನಮ್ಮ ನೆಲದ ಕ್ರೀಡೆಗಳು ಮುಂದಿನ ಪೀಳಿಗೆಗೆ ರವಾನೆಯಾಗಬೇಕು ಎಂದು ತಿಳಿಸಿದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್ ಮಾತನಾಡಿ, ರಾಗಿ ಬೀಸುವುದು, ಮಡಿಕೆ ಹೊಡೆಯುವುದು ಸೇರಿದಂತೆ ನಮ್ಮ ಗ್ರಾಮೀಣ ಕ್ರೀಡೆಗಳನ್ನೂ ಆಯೋಜಿಸಿ ಅವುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಕ್ರೀಡೆ ಗಳಲ್ಲಿ ಪಾಲ್ಗೊಳ್ಳಲು ನೋಂದಾಯಿಸಿದ್ದಾರೆ. ಪಂಚಾ ಯತ್ ರಾಜ್ ಕುರಿತಂತೆ ಕ್ವಿಜ್ ಸಹ ಏರ್ಪಡಿಸಲಾ ಗಿದೆ. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಲಾಗುವುದು ಎಂದು ಹೇಳಿದರು.

ಮಹಿಳೆಯರ ವಿಭಾಗದ ಫಲಿತಾಂಶ: ಸದಸ್ಯರ ಅವರೆಕಾಯಿ ಬಿಡಿಸುವ ಸ್ಪರ್ಧೆಯಲ್ಲಿ ಸಾವಿತ್ರಮ್ಮ, ಲತಾ ಸಿದ್ದಶೆಟ್ಟಿ, ಜಯಮ್ಮ ಕ್ರಮವಾಗಿ ಮೂರು ಸ್ಥಾನ ಗಳನ್ನು ಪಡೆದುಕೊಂಡರು. ಸಿಬ್ಬಂದಿ ವರ್ಗದ ಅವರೆ ಕಾಯಿ ಬಿಡಿಸುವ ಸ್ಪರ್ಧೆಯಲ್ಲಿ ಸೀತಾ, ಕುಮುದಾ ವಲ್ಲಿ, ವಿದ್ಯಾಶ್ರೀ, ರುಕ್ಮಿಣಿ, ಸದಸ್ಯರ ರಾಗಿ ಬೀಸುವ ಸ್ಪರ್ಧೆಯಲ್ಲಿ ಸಾವಿತ್ರಮ್ಮ ಮತ್ತು ನಾಗರತ್ನ ಜೋಡಿ, ಮಧು ಕುಂಬ್ರಳ್ಳಿ ಸುಬ್ಬಣ್ಣ ಮತ್ತು ಹೆಚ್.ಇ.ಜಯಲಕ್ಮಿ ರಾಜಣ್ಣ ಜೊಡಿ, ರುದ್ರಮ್ಮ ಮತ್ತು ಭಾಗ್ಯ ಜೋಡಿ, ಸಿಬ್ಬಂದಿಯ ರಾಗಿ ಬೀಸುವ ಸ್ಪರ್ಧೆಯಲ್ಲಿ ವಿದ್ಯಾಶ್ರೀ ಮತ್ತು ಪ್ರಿಯಾಂಕ ಜೋಡಿ, ಲತಾ ಮತ್ತು ಸೀತಾ ಜೋಡಿ, ನಾಗರತ್ನ ಮತ್ತು ಜ್ಯೋತಿ ಮಾಲಾ ಜೋಡಿ ಕ್ರಮವಾಗಿ ಮೂರು ಸ್ಥಾನಗಳನ್ನು ಪಡೆದುಕೊಂಡರು.

Translate »