ನಾಡಿನ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಂದ ದಸರಾ ಉತ್ಸವ ಉದ್ಘಾಟನೆ
ಮೈಸೂರು

ನಾಡಿನ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಂದ ದಸರಾ ಉತ್ಸವ ಉದ್ಘಾಟನೆ

September 30, 2019

ಮೈಸೂರು, ಸೆ.29(ಆರ್‍ಕೆ)-ಹತ್ತು ದಿನಗಳ ಕಾಲ ನಡೆಯಲಿರುವ ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಆರಂಭವಾಯಿತು. ಚಾಮುಂಡಿ ಬೆಟ್ಟದಲ್ಲಿ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ನೆರ ವೇರಿಸುವ ಮೂಲಕ ಇಂದು ಬೆಳಿಗ್ಗೆ 9.45 ಗಂಟೆಗೆ ಶುಭ ವೃಶ್ಚಿಕ ಲಗ್ನದಲ್ಲಿ ನಾಡಿನ ಹೆಸರಾಂತ ಸಾಹಿತಿ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪ ಅವರು 2019ರ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಚಾಮುಂ ಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ ಡಾ.ಎಸ್.ಎಲ್.ಭೈರಪ್ಪ ಅವರು ನಾಡಿನ ಜನತೆಗೆ ದಸರಾ ಸಂದೇಶ ನೀಡಿ, ಶುಭ ಹಾರೈಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಾ. ಎಸ್.ಎಲ್. ಭೈರಪ್ಪ ದಂಪತಿ, ಗಣ್ಯರನ್ನು ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿಯಿಂದ ಪೂರ್ಣಕುಂಭ ಸ್ವಾಗತ ನೀಡಿ ಮಂಗಳವಾದ್ಯ, ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ನಂತರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿದ ಗಣ್ಯರು ತಾಯಿಯ ದರ್ಶನ ಪಡೆದು ವೇದಿಕೆಗೆ ಆಗಮಿಸಿದರು.

ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ ಜೋಶಿ, ಸುರೇಶ ಅಂಗಡಿ, ಡಿಸಿಎಂ ಗೋವಿಂದ ಎಂ.ಕಾರಜೋಳ, ಸಚಿವ ಸಿ.ಟಿ.ರವಿ, ಸಂಸದ ಪ್ರತಾಪಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವವಿ.ಸೋಮಣ್ಣ ಪ್ರಾಸ್ತಾವಿಕ ಭಾಷಣ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ ಮುಖ್ಯಮಂತ್ರಿಗಳು ಹಾಗೂ ದಸರಾ ಕಾರ್ಯಕ್ರಮಗಳಿಗೆ ತಮ್ಮೊಂದಿಗೆ ಶ್ರಮಿಸಿ, ಸಹಕರಿಸುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಶಾಸಕರಾದ ತನ್ವೀರ್ ಸೇಟ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷ ವರ್ಧನ್, ಸಿ.ಎಸ್.ನಿರಂಜನಕುಮಾರ್, ಉಪ ಮೇಯರ್ ಶಫಿ ಅಹಮದ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ನರೇಂದ್ರ ನಾಯ್ಕ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. 330 ಕಿ.ಮೀ.ವರೆಗೆ ಕೊಂಡೊಯ್ಯುವ ಕ್ರೀಡಾ ಜ್ಯೋತಿಯನ್ನು ಕ್ರೀಡಾಪಟುಗಳಾದ ಧನುಷ್ ಮತ್ತು ಉಷಾರಾಣಿ ಅವರಿಗೆ ಹಸ್ತಾಂತರಿಸಿದ ಮುಖ್ಯಮಂತ್ರಿಗಳು, ಚಾಮುಂಡಿ ಬೆಟ್ಟದಲ್ಲಿ ಸ್ಥಾಪಿಸಿರುವ ಪೊಲೀಸ್ ಸಹಾಯವಾಣಿ ಕಿಯೋಸ್ಕ್ ಅನ್ನು ಉದ್ಘಾಟಿಸಿದರು. ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಹಾಗೂ ನೂತನ ಅಂಗಡಿ ಮಳಿಗೆ, ಭಕ್ತಾದಿಗಳ ಕ್ಯೂಲೈನ್ ಕಟ್ಟಡವನ್ನೂ ಯಡಿಯೂರಪ್ಪ, ಡಿಸಿಎಂ ಗೋವಿಂದ ಎಂ.ಕಾರಜೋಳ ಉದ್ಘಾಟಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್.ಆರ್.ಜನ್ನು ಗಣ್ಯರನ್ನು ಸ್ವಾಗತಿಸಿದರೆ, ಡಿಸಿ ಅಭಿರಾಂ ಜಿ.ಶಂಕರ್ ವಂದಿಸಿದರು. ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಪ್ರಾದೇಶಿಕ ಆಯುಕ್ತ ವಿ.ಯಶವಂತ, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಪಂ ಸಿಇಓ ಕೆ.ಜ್ಯೋತಿ, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಆಕಾಶವಾಣಿಯ ಮಂಜು ನಾಥ ಅವರು ಕಾರ್ಯಕ್ರಮ ನಿರೂಪಿಸಿದರು. ದಸರಾ ಉದ್ಘಾಟನೆಗೊಳ್ಳುತ್ತಿದ್ದಂತೆಯೇ ಮೈಸೂರಿನಲ್ಲಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು, ನಾಡಿನ ಕಲೆ, ಸಂಸ್ಕೃತಿ, ಕ್ರೀಡೆ, ಸಂಗೀತ ಹಾಗೂ ಪರಂಪರೆ ಅನಾವರಣಗೊಂಡಿವೆ.

ಚಾಮುಂಡಿಬೆಟ್ಟವನ್ನು ಜಾತ್ರಾ ಸ್ಥಳ ಮಾಡಲು ಹೋಗಬೇಡಿ, ಪವಿತ್ರ ಯಾತ್ರಾ ಸ್ಥಳವಾಗಿಯೇ ಉಳಿಸಿ

ಮೈಸೂರು: ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟವನ್ನು ಪವಿತ್ರ ಯಾತ್ರಾ ಸ್ಥಳವಾಗಿಯೇ ಉಳಿಸಿ. ಯಾವುದೇ ಕಾರಣಕ್ಕೂ ಜಾತ್ರಾ ಸ್ಥಳವಾಗಿಸಬೇಡಿ ಎಂದು ನಾಡಿನ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ, ಇಂದಿಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗಂಭೀರ ಸಲಹೆ ನೀಡಿದ್ದಾರೆ. ಚಾಮುಂಡಿಬೆಟ್ಟದಲ್ಲಿ 2019ರ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಯಾತ್ರಾ ಸ್ಥಳವೆಂದರೆ ನಿಸರ್ಗದ ನಡುವೆ ಪ್ರಶಾಂತ ವಾತಾವರಣ. ಅಲ್ಲಿನ ಗುಡಿಯಲ್ಲಿರುವ ದೇವರ ಸನ್ನಿಧಿಯಲ್ಲಿ ಕುಳಿತು ಶಾಂತಿ ಯಿಂದ, ಭಕ್ತಿಪೂರ್ವಕವಾಗಿ ಏಕಾಗ್ರಚಿತ್ತ ಮನಸ್ಸಿನಿಂದ ಧ್ಯಾನಾಸಕ್ತರಾಗಿ ಕೆಲ ಸಮಯ ಕಳೆಯಲು ಪೂರಕ ವಾತಾವರಣ ಬೇಕು ಎಂದರು. ಭಕ್ತಾದಿಗಳಿಗೆ ಬೇಕಾದ ರಸ್ತೆ, ನೀರು, ಶೌಚಾಲಯ, ದಾಸೋಹಗಳಂತಹ ಮೂಲ ಸೌಕರ್ಯಗಳನ್ನು ಮಾತ್ರ ಒದಗಿಸಬೇಕೇ ಹೊರತು, ಅಭಿವೃದ್ಧಿ ಹೆಸರಲ್ಲಿ ಅಂಗಡಿ ಮುಂಗಟ್ಟು, ಪಾರ್ಕಿಂಗ್ ಲಾಟ್‍ಗಳನ್ನು ಮಾಡಿಬಿಟ್ಟರೆ ಯಾತ್ರಾ ಸ್ಥಳವು ಜಾತ್ರೆಯಾಗುತ್ತದೆ. ಚಾಮುಂಡಿಬೆಟ್ಟದಲ್ಲೂ ಅಂಗಡಿ ಮಳಿಗೆ, ಪಾರ್ಕಿಂಗ್ ಲಾಟ್ ಕಟ್ಟಡ ನಿರ್ಮಿಸಲು ಮೈಸೂರಿನ ಪ್ರಜ್ಞಾವಂತ ನಾಗರಿಕರು ಬೇಡ ಎಂದು ವಿರೋಧಿಸಿದರಾದರೂ, ಸರ್ಕಾರ ಮನಸ್ಸು ಮಾಡಿದರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಈಗ ತಲೆ ಎತ್ತಿರುವ ಕಟ್ಟಡಗಳೇ ಸಾಕ್ಷಿ ಎಂದರು. ಚಾಮುಂಡಿಬೆಟ್ಟ ಈಗ ಮೈಸೂರಿನ ಒಂದು ಬಡಾವಣೆ (ಎಕ್ಸ್‍ಟೆನ್ಷನ್)ಯಂತಾಗಿದೆ. ಬೇಕಾದ್ದೆಲ್ಲಾ ಅಲ್ಲಿಯೇ (ಮೈಸೂರಲ್ಲಿ) ಸಿಗುವಾಗ ಚಾಮುಂಡೇಶ್ವರಿ ಸನ್ನಿಧಿಯನ್ನು ವ್ಯಾಪಾರೀ ಸ್ಥಳವನ್ನೇಕೆ ಮಾಡಬೇಕು. ಬೆಟ್ಟವನ್ನು ಧಾರ್ಮಿಕ ಯಾತ್ರಾ ಸ್ಥಳವಾಗಿಯೇ ಉಳಿಸುವುದು ಸೂಕ್ತ ಎಂದು ಭೈರಪ್ಪ ಅಭಿಪ್ರಾಯಪಟ್ಟರು.

ಅವರವರ ಭಾವಕ್ಕೆ: ದೇವರಿದ್ದಾನೋ ಇಲ್ಲವೋ ಎಂಬುದು ಅವರವರ ನಂಬಿಕೆ, ಭಾವನೆಗೆ ಬಿಟ್ಟದ್ದು. ಆದರೆ ಕೆಲ ಸಾಹಿತಿಗಳು ದೇವರಿಲ್ಲ ಎಂದು ಹೇಳುತ್ತಿರುವುದು ದಾಷ್ರ್ಯದ ಮಾತುಗಳಾಗುತ್ತವೆ. ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗ ಕೆಲವರು ನನ್ನನ್ನು ಕೇಳಿದರು. ‘ಸಾರ್, ನೀವು ದಸರಾ ಉದ್ಘಾಟನೆಗೆ ಒಪ್ಪಿಕೊಂಡಿದ್ದೀರಾ, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ತೀರ್ಥ ತೆಗೆದು ಕೊಳ್ಳಬೇಕು. ನೀವು ಅದನ್ನು ಮಾಡುತ್ತೀರಾ’ ಎಂದು ಪ್ರಶ್ನಿಸಿದರು ಎಂದು ಹೇಳಿದರು.

ನಾನು ವಿದ್ಯಾರ್ಥಿಯಾಗಿದ್ದಾಗ ಆಗಿಂದಾಗ್ಗೆ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿಕೊಂಡು ದೇವಸ್ಥಾನಕ್ಕೆ ಬರುತ್ತಿದ್ದೆ. ಈಗ ವಯಸ್ಸಾಗಿದೆ. ವರ್ಷಕ್ಕೊಮ್ಮೆ ಕಾರಿನಲ್ಲಿ ಬಂದು ಹೋಗುತ್ತೇನೆ. ನನ್ನ ಮೂವರು ಮೊಮ್ಮಕ್ಕಳನ್ನು ಅವರಿಗೆ 3 ತಿಂಗಳು ತುಂಬುವ ಮೊದಲು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬಂದು ದೇಗುಲದ ಹೊಸ್ತಿಲ ಮೇಲೆ ಮಲಗಿಸಿ ತೀರ್ಥ ಹಾಕಿಸಿ ಕೊಂಡು ಹೋಗಿದ್ದೇನೆ. ದೇವರೇ ಇಲ್ಲ ಎನ್ನುವುದು ಸರಿಯಲ್ಲ. ಅದು ಜನರ ನಂಬಿಕೆಗೆ ಬಿಟ್ಟದ್ದು. ಹಾಗಂತ ಸಾಹಿತಿಗಳು ದೇವರನ್ನು ನಂಬುವುದಿಲ್ಲ ಎಂಬ ಕೆಲವರ ಅಭಿಪ್ರಾಯ ಸರಿಯಲ್ಲ ಎಂದು ಇದೇ ಸಂದರ್ಭ ‘ಸೂಜಿ’ಯ ಕಥೆಯೊಂದನ್ನು ಹೇಳುವ ಮೂಲಕ ನಿದರ್ಶನ ನೀಡಿದರು.

ವಿಜ್ಞಾನಿಗಳೇ: ಜಗತ್ತಿನ ಸೃಷ್ಟಿಯ ಬ್ರಹ್ಮಾಂಡವನ್ನು ಅರಿಯಲು ವಿಜ್ಞಾನಿಗಳು ನಡೆಸಿದ ಸಂಶೋಧನೆಯೇ ನಿಂತು ಹೋಗಿದೆ. ನಕ್ಷತ್ರಗಳ ನಡುವೆ ವಿಶ್ವ ಹೇಗೆ ವಿಸ್ತಾರವಾಯಿ ತೆಂಬುದೇ ತಿಳಿಯದೆ ವಿಜ್ಞಾನಿಗಳೇ ಸುಮ್ಮನಾಗಿರುವಾಗ ಸಾಹಿತಿಗಳು, ವಿಚಾರವಂತರು ದೇವರೇ ಇಲ್ಲ ಎನ್ನುವುದು ಸರಿಯಲ್ಲ ಎಂದ ಅವರು, ವಿಜ್ಞಾನಿಗಳನ್ನು ಕೇಳಿದ್ರೆ ಗ್ಯಾಲಾಕ್ಸಿ ವಿಸ್ತೀರ್ಣ ನೋಡಿದ್ರೆ ಊಹೆಯನ್ನೂ ಮಾಡಕ್ಕಾಗಲ್ಲ ಅಷ್ಟು ಇದೆ ಎನ್ನುತ್ತಾರೆ. ಕೆಲವು ಸಾಹಿತಿಗಳು ದೇವರೇ ಇಲ್ಲ ಎಂದು ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಹಲವಾರು ಜಿಜ್ಞಾಸೆ ಗಳಿವೆ. ದೇವರನ್ನು ಸಾಕಾರ-ನಿರಾಕಾರ ರೂಪದಲ್ಲಿ ನೋಡುವವರಿದ್ದಾರೆ ಎಂದು ನುಡಿದರು.

ಕಾಲ ಪಕ್ವವಾಗಿದೆ: ಹಿಂದೆ ಬಸವಣ್ಣ ಹೇಳಿದ ಕಾಯಕ ಹಾಗೂ ಜಾತಿ ವಿನಾಶಕ್ಕೆ ಈಗ ಕಾಲ ಪಕ್ವವಾಗಿದೆ. ಮುಂಜಾನೆ ತಂಪೊತ್ತಿನಲ್ಲಿ ಹೊಲ ಉಳುತ್ತಿದ್ದ ರೈತ ತನ್ನ ಕೃಷಿ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ. ಆದರೆ ಚುನಾವಣೆ ವೇಳೆ ನಮ್ಮ ರಾಜಕಾರಣಿಗಳು ಅವರಿಗೆ ಹಲವು ಸೌಲಭ್ಯಗಳನ್ನು ನೀಡಿ ಕಾಯಕವನ್ನು ಮರೆಸಿದ್ದಾರೆ. ಹಾಗೆಯೇ ಅಂತರ್ಜಾತಿ ವಿವಾಹಗಳಿಗೆ ಇಂದಿನ ಯುವಕರೇ ಆಸಕ್ತಿ ತೋರುತ್ತಿದ್ದಾರೆಯಾದ್ದರಿಂದ ಇದು ಜಾತಿ ನಾಶಕ್ಕೆ ಪಕ್ವ ಕಾಲ. ಹಾಗೆಂದು ಪ್ರತಿಭಟನೆ ಮಾಡಿ ಹಕ್ಕು ಪ್ರತಿ ಪಾದಿಸುವುದೂ ಸರಿಯಲ್ಲ ಎಂದರು.

ಸ್ತ್ರೀಗೆ ಮೊದಲ ಆದ್ಯತೆ: ಇಂದಿಗೂ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ದೇವರ ವಿಚಾರದಲ್ಲಿ ಹೆಣ್ಣು ದೇವರಿಗೆ ಮೊದಲ ಪೂಜೆ ಮಾಡಲಾಗುತ್ತದೆ. ಮಾತೃವಿಗೆ ಮೊದಲ ವಂದನೆ ಇರುವಾಗ ಕೆಲವರು ಮಹಿಳೆಯರನ್ನು ಸಮಾಜ ತುಳಿಯುತ್ತಿದೆ ಎಂಬ ವಾದ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಲಿಂಗಾಯತ-ವೀರಶೈವ, ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ಮಹಿಳೆಯರಿಗೆ ನಿಷೇಧದಂತಹ ವಿಚಾರಗಳಲ್ಲಿ ಕೆಲ ವಿಚಾರವಂತರೆನಿಸಿಕೊಂಡವರು ಮಧ್ಯ ಪ್ರವೇಶಿಸಿ ತಾವೇ ಪ್ರವೀಣರಂತೆ ವರ್ತಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

Translate »