ಅರಮನೆಯಲ್ಲಿ ಯುವರಾಜ ಯದುವೀರ್ ಖಾಸಗಿ ದರ್ಬಾರ್
ಮೈಸೂರು

ಅರಮನೆಯಲ್ಲಿ ಯುವರಾಜ ಯದುವೀರ್ ಖಾಸಗಿ ದರ್ಬಾರ್

September 30, 2019

ಮೈಸೂರು,ಸೆ.29(ಎಂಟಿವೈ)- ದಸರಾ ಮಹೋತ್ಸವದ ವೇಳೆ ಅರಮನೆಯಲ್ಲಿ ನಡೆ ಯಲಿರುವ ಖಾಸಗಿ ದರ್ಬಾರ್ ಭಾನುವಾರ ಆರಂಭವಾಯಿತು. ನವರಾತ್ರಿಯ ಮೊದಲ ದಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿವಿಧ ಧಾರ್ಮಿಕ ಕೈಂಕರ್ಯ ಗಳಲ್ಲಿ ಪಾಲ್ಗೊಂಡು, ರತ್ನಖಚಿತ ಸಿಂಹಾ ಸನರೂಢರಾಗಿ ಗಮನ ಸೆಳೆದರು.

ಅರಮನೆಯ ದರ್ಬಾರ್ ಹಾಲ್‍ನಲ್ಲಿ ಇಂದು ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ನವರಾತ್ರಿಯ ಅಂಗವಾಗಿ ನಡೆದ ವಿವಿಧ ಪೂಜಾ ಕೈಂಕರ್ಯಗಳಲ್ಲಿ ರಾಜವಂಶಸ್ಥ ರಾದ ಪ್ರಮೋದಾದೇವಿ ಒಡೆಯರ್, ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಸಕ್ರಿಯವಾಗಿ ಪಾಲ್ಗೊಂಡು, ಯದು ವಂಶದ ಸಾಂಪ್ರದಾಯಿಕ ಆಚರಣೆಗಳಲ್ಲಿ ಪ್ರಮುಖ ವಾದ ಖಾಸಗಿ ದರ್ಬಾರ್‍ಗೆ ಚಾಲನೆ ನೀಡಿದರು.

ಅರಮನೆಯ ನೆಲಮಾಳಿಗೆಯಲ್ಲಿದ್ದ ಚಿನ್ನದ ಸಿಂಹಾಸನದ ಬಿಡಿಭಾಗಗಳನ್ನು ಸೆ.24 ರಂದು ತಂದು ದರ್ಬಾರ್ ಹಾಲ್‍ನಲ್ಲಿ ಜೋಡಿಸಲಾಗಿತ್ತು. ಸಿಂಹಾಸನಕ್ಕೆ ಇಂದು ಮುಂಜಾನೆ 5.10ರಿಂದ 5.30ರೊಳಗೆ ಸಲ್ಲುವ ಶುಭ ಗಳಿಗೆಯಲ್ಲಿ `ಸಿಂಹ’ ಜೋಡಣೆ ನಡೆಯಿತು. ಬಳಿಕ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಬೆಳಿಗ್ಗೆ 8.05 ರಿಂದ 8.55ರೊಳಗೆ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಯಿತು. ನಂತರ ವಾಣಿ ವಿಲಾಸ ದೇವರ ಮನೆಯಲ್ಲಿ ತ್ರಿಷಿಕಾ ಕುಮಾರಿ ಒಡೆ ಯರ್ ಅವರಿಗೆ ಚಾಮುಂಡಿ ತೊಟ್ಟಿಯಿಂದ ತಂದ ಕಂಕಣ ತಂದು ಧಾರಣೆ ಮಾಡ ಲಾಯಿತು. ಕೆಲ ಪೂಜಾ ಕಾರ್ಯ ಜರುಗಿದ ನಂತರ ಪಟ್ಟದ ಆನೆ ವಿಕ್ರಮ, ಸಾಲಾನೆ ಗೋಪಿ, ಪಟ್ಟದ ಕುದುರೆ, ಪಟ್ಟದ ಹಸು, ಒಂಟೆ, ಅರಮನೆ ಆನೆಗಳಾದ ಪ್ರೀತಿ, ಸೀತಾ, ರೂಬಿ ಹಾಗೂ ಚಂಚಲ ಆನೆಯನ್ನು ಸವಾರಿ ತೊಟ್ಟಿಗೆ ಕರೆತರಲಾಯಿತು. ನಂತರ ಅರಮನೆಯ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ಹಾಗೂ ಶ್ರೀ ಕೋಡಿ ಕಾಲಭÉೈರವ ಸ್ವಾಮಿ ದೇವಾಲಯದ ಕಳಸದೊಂದಿಗೆ ದೇವರನ್ನು ತರಲಾಯಿತು. ಅರಮನೆಯ ಪುರೋಹಿತರು ಕಂಕಣ ಧರಿಸಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಹರಸಿದರು. ಬೆಳಿಗ್ಗೆ 9.45ಕ್ಕೆ ಸವಾರಿ ತೊಟ್ಟಿಯಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದರ್ಬಾರ್ ಹಾಲ್‍ಗೆ ಕಟ್ಟಿಗೆಯವರು, ಜೋಪಾದರು, ದೀವಟಿಗೆಯವರು ಸಕಲ ಬಿರುದು ಬಾವಲಿಯೊಂದಿಗೆ ಬಹುಪರಾಕ್ ಹಾಕಿ ದರ್ಬಾರ್ ಹಾಲ್‍ಗೆ ಕರೆತಂದರು. ಸಿಂಹಾಸನಾರೋಹಣಕ್ಕೂ ಮುನ್ನ 9.50ರಿಂದ 10.35ರವರೆಗೆ ಕಳಸ ಪೂಜೆ ಸೇರಿದಂತೆ ಧಾರ್ಮಿಕ ಕೈಂಕರ್ಯ ನಡೆದವು. ಸಿಂಹಾಸನದ ಸಮೀಪವೇ ನಡೆದ ಕಳಸ ಪೂಜೆಯಲ್ಲಿ ಯುದುವೀರ ಅವರು ಪಾಲ್ಗೊಂಡರು. ನಂತರ ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಸಿಂಹಾಸನದ ಸಿಂಹಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ, ರತ್ನಖಚಿತ ಸಿಂಹಾಸನವೇರಿ ವೀರಾಜಮಾನರಾದರು.

ಸಿಂಹಾಸನವೇರಿದ ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥÀ ದೇವಾಲಯ, ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ, ನಂಜನ ಗೂಡಿನ ಶ್ರೀ ಶ್ರೀಕಂಠೇಶ್ವರ ದೇವಾಲಯ, ಅರಮನೆಯ ಆವರಣದಲ್ಲಿರುವ ಎಲ್ಲಾ ದೇವಾಲಯಗಳು ಸೇರಿದಂತೆ 23 ದೇವಾಲಯಗಳಿಂದ ತಂದಿದ್ದ ಪ್ರಸಾದವನ್ನು ನೀಡಿ, ತೀರ್ಥ ಪ್ರೋಕ್ಷಣೆ ಮಾಡಿ ಶುಭ ಕೋರಲಾಯಿತು. ದೇವಾಲಯಗಳಿಂದ ಆಗಮಿಸಿದ್ದ ಅರ್ಚಕರಿಂದ ಪ್ರಸಾದ ವಿನಿಯೋಗವಾದ ಬಳಿಕ ಸಿಂಹಾಸನದ ಮುಂದೆ ಪರದೆಯನ್ನು ಬಿಟ್ಟು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ದೃಷ್ಟಿ ತೆಗೆಯಲಾಯಿತು. ನಂತರ ಯದುವೀರ್ ಅವರು ಸಿಂಹಾಸನದ ಮೇಲೆ ಎದ್ದುನಿಂತು ಸೆಲ್ಯೂಟ್ ಹೊಡೆದು ಹೊಗಳು ಭಟರು ಹಾಗೂ ದೀವಟಿಗೆಕಾರರಿಂದ ಗೌರವ ಹಾಗೂ ಬಹುಪರಾಕ್ ಪಡೆದು ಸವಾರಿ ತೊಟ್ಟಿಯತ್ತ ತೆರಳಿದರು. ಅಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಯದುವೀರರ ಪಾದ ಪೂಜೆ ಮಾಡಿದರು. ಈ ವೇಳೆ ಪ್ರಮೋದಾದೇವಿ ಒಡೆಯರ್, ಅವರ ಮೊಮ್ಮಗ ಆದ್ಯವೀರ ನರಸಿಂಹರಾಜ ಒಡೆಯರ್ ಹಾಗೂ ರಾಜವಂಶದ ಪ್ರಮುಖರು ಉಪಸ್ಥಿತರಿದ್ದು ಖಾಸಗಿ ದರ್ಬಾರ್ ಅನ್ನು ಕಣ್ತುಂಬಿಕೊಂಡರು.

ಪೊಲೀಸ್ ಬ್ಯಾಂಡ್‍ನವರು ನುಡಿಸಿದ ಚಾಮರಾಜ ಒಡೆಯರ್ ವಿರಚಿತ ಗೀತೆಗಳ ಸಂಗೀತ ಖಾಸಗಿ ದರ್ಬಾರ್‍ನ ಕಳೆ ಹೆಚ್ಚಿಸಿತ್ತು. ಯದುವಂಶದ ಜಯಚಾಮರಾಜ ಒಡೆಯರ್ ರಚಿತ ಗೀತೆಯಾದ `ಕಾಯೋ ಶ್ರೀ ಗೌರಿ’ ಗೀತೆಯನ್ನು ನುಡಿಸಿದ ವೇಳೆ ಸಿಂಹಾಸನದಲ್ಲಿ ಆಸೀನರಾಗಿದ್ದ ಯದುವೀರ ಒಡೆಯರ್ ಎದ್ದು ನಿಂತು ಸೆಲ್ಯೂಟ್ ಹೊಡೆದು ಗಮನ ಸೆಳೆದರು. ಖಾಸಗಿ ದರ್ಬಾರ್ ಸುಸೂತ್ರವಾಗಿ ನೆರವೇರಲಿ ಎಂಬ ದೃಷ್ಟಿಯಿಂದ ಹೆಚ್ಚಿನ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಖಾಸಗಿ ದರ್ಬಾರ್ ವೀಕ್ಷಿಸಲೆಂಬ ಮಹದಾಸೆಯಿಂದ ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದ ಹಲವಾರು ಪ್ರವಾಸಿಗರು ಅರಮನೆ ಗೇಟ್‍ನಿಂದಲೇ ವಾಪಸಾಗಬೇಕಾಯಿತು. ರಾಜಮನೆತನದ ಸಂಬಂಧಿಗಳನ್ನು ಹೊರತುಪಡಿಸಿ ಬೇರಾರಿಗೂ ದರ್ಬಾರ್ ಹಾಲ್‍ಗೆ ಪ್ರವೇಶ ಇರಲಿಲ್ಲ.

Translate »