ಮೈಸೂರು, ಆ.30(ಎಂಟಿವೈ)- ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಸೆ.20ರಂದು ಬೆಟ್ಟದ ಮೇಲೆ ನಿರ್ಮಿಸಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಉದ್ಘಾಟನೆ ಹಾಗೂ ವಾಣಿಜ್ಯ ಸಂಕಿರ್ಣಕ್ಕೆ ಬೀದಿ ಬದಿ ವ್ಯಾಪಾರಿ ಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈ ಗೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ವೇಳೆ ಚಾಮುಂಡಿಬೆಟ್ಟದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಕ್ರಮ ಕೈಗೊಂಡಿ ದ್ದರು. ಇಂತಹ ದೊಡ್ಡ ಮಟ್ಟದ ಯೋಜನೆ ಅನು ಷ್ಠಾನಗೊಳಿಸುವುದು ಸುಲಭದ ಮಾತಲ್ಲ. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಟಿ.ದೇವೇಗೌಡರು ಈ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸ ಬಾಕಿ ಇವೆ. ಶೀಘ್ರ ಭಕ್ತರ ಸೇವೆಗೆ ಸಮರ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಬಾಕಿಯಿರುವ ಕಾಮಗಾರಿಯನ್ನು ಸೆ.18ರೊಳಗೆ ಪೂರ್ಣಗೊಳಿ ಸುವಂತೆ ಸೂಚನೆ ನೀಡಿದ್ದೇನೆ. ಸೆ.20ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡವನ್ನು ಉದ್ಘಾಟಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಕಾರುಗಳ ನಿಲುಗಡೆಯೊಂದಿಗೆ 116 ವಾಣಿಜ್ಯ ಮಳಿಗೆ, ಭಕ್ತರು ಪಾರ್ಕಿಂಗ್ ಸ್ಥಳದಿಂದ ದೇವಾಲಯಕ್ಕೆ ಸಾಗಲು 500 ಮೀಟರ್ ಉದ್ದದ ಮೇಲ್ಚಾವಣಿ ಪಾದಚಾರಿ ಮಾರ್ಗದ ಕಾಮಗಾರಿ ಪೂರ್ಣವಾಗಿದೆ. ಕೈಗೆತ್ತಿಕೊಂಡಿರುವ ಹೆಚ್ಚುವರಿ ಕಾಮಗಾರಿ ಪೂರ್ಣಗೊಳಿಸಲು ಬೇಕಾದ ಹಣವನ್ನು ಬಿಡುಗಡೆ ಮಾಡುತ್ತೇವೆ. ಇದಲ್ಲದೆ ಬಾಕಿ ಉಳಿದಿರುವ ಏಳು ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚನೆ ನೀಡುತ್ತೇನೆ. ವ್ಯಾಪಾರಿಗಳನ್ನು ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರ ಮಾಡಿ, ಅಲ್ಲಿರುವ ಖಾಲಿ ಜಾಗವನ್ನು ಸ್ವಚ್ಛಗೊಳಿಸಲಾಗುವುದು. ಇದರಿಂದ ದೇವಾಲಯ ಸೌಂದರ್ಯ ಹೆಚ್ಚುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ. ಸಿಇಒ ಕೆ.ಜ್ಯೋತಿ, ಉಪವಿಭಾಗಾಧಿಕಾರಿ ಹೆಚ್.ಎನ್. ಶಿವೇಗೌಡ, ತಹಶೀಲ್ದಾರ್ ಟಿ.ರಮೇಶ್ ಬಾಬು, ಚಾಮುಂಡಿಬೆಟ್ಟದ ಪ್ರಭಾರ ಆಡಳಿತಾಧಿಕಾರಿ ಯತೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.