ಉಸ್ತುವಾರಿ ಸಚಿವ ಜಿಟಿಡಿ ಮೈಸೂರು ನಗರ ಪ್ರದಕ್ಷಿಣೆ
ಮೈಸೂರು

ಉಸ್ತುವಾರಿ ಸಚಿವ ಜಿಟಿಡಿ ಮೈಸೂರು ನಗರ ಪ್ರದಕ್ಷಿಣೆ

July 3, 2019

ಮೈಸೂರು,ಜು.2(ಆರ್‍ಕೆ)- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಇಂದು ಮೈಸೂ ರಿನ ಕೆ.ಆರ್ ಮತ್ತು ಎನ್.ಆರ್ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರದಕ್ಷಿಣೆ ನಡೆಸಿ ಪ್ರಮುಖ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮದ್, ಕಾರ್ಪೋರೇಟರ್ ಗಳಾದ ಬಿ.ಪಿ.ಮಂಜುನಾಥ್, ಸುನಂದಾ ಪಾಲನೇತ್ರ, ಲಕ್ಷ್ಮಿ, ಸುನೀಲ್, ಬಾಲು, ಎಸ್‍ಬಿಎಂ ಮಂಜು, ಅಶ್ವಿನಿ, ಅನಂತ, ಮುಡಾ ಅಧ್ಯಕ್ಷ ಹೆಚ್.ಎನ್.ವಿಜಯ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ಲಾ ಸೇರಿದಂತೆ ಹಲವು ಜನಪ್ರತಿನಿಧಿಗಳು ನಗರ ಪ್ರದಕ್ಷಿಣೆಗೆ ಜಿಟಿಡಿ ಅವರಿಗೆ ಸಾಥ್ ನೀಡಿರು.

ಬೆಳಿಗ್ಗೆ 7.30 ಗಂಟೆಗೆ ವಿವೇಕಾನಂದ ನಗರ ಸರ್ಕಲ್‍ಗೆ ಆಗಮಿಸಿದ ಸಚಿವರಿಗೆ 5 ರಸ್ತೆಗಳು ಕೂಡುವ ಸರ್ಕಲ್‍ನಲ್ಲಿ ನಗರ ಬಸ್ಸುಗಳು ಬೇಕಾಬಿಟ್ಟಿ ನಿಲ್ಲುವುದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾ ಗುತ್ತಿರುವುದರಿಂದ ಹಾಲಿ ಇರುವ ಹಳೆಯ ಬಸ್ ತಂಗುದಾಣವನ್ನು ನೆಲ ಸಮಗೊಳಿಸಿ 20 ಅಡಿ ಹಿಂದೆ ಖಾಲಿ ಜಾಗದ ವ್ಯವಸ್ಥೆ ಮಾಡಿದರೆ ಒಟ್ಟಿಗೆ ಐದಾರು ಬಸ್ಸುಗಳು ನಿಲ್ಲಬಹುದು ಎಂದು ಶಾಸಕ ರಾಮದಾಸ್ ತಿಳಿಸಿದರು.

ಸಂಬಂಧಿಸಿದ ನಕ್ಷೆಯನ್ನು ನೋಡಿದ ಜಿಟಿಡಿ, ಸುಗಮ ಸಂಚಾರದ ದೃಷ್ಟಿಯಿಂದ ತಕ್ಷಣವೇ ಹಳೇ ಬಸ್ ಶೆಲ್ಟರ್ ತೆಗೆದು ಪಕ್ಕವೇ ಹೊಸದನ್ನು ನಿರ್ಮಿಸಿ ಎಂದು ಸ್ಥಳದಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರಿಗೆ ಸೂಚಿಸಿದರು.

ರಾಜ ಕಾಲುವೆ ತೆರವುಗೊಳಿಸಿ: ಮುಂದೆ ಐಶ್ವರ್ಯನಗರ ಬಡಾವಣೆಗೆ ತೆರಳಿದ ಸಚಿವರು, ರಾಮದಾಸ್ ಅವರ ಸಲಹೆ ಮೇರೆಗೆ ಬಡಾವಣೆಯವರು ಒತ್ತುವರಿ ಮಾಡಿದ್ದಾರೆ. ಹಾಗಾಗಿ ಮಳೆ ನೀರು ರಾಜಕಾಲುವೆಯಲ್ಲಿ ಮುಂದೆ ಹರಿದು ಹೋಗಲು ಅವಕಾಶವಾಗದೇ ಸುತ್ತಲಿನ ಬಡಾವಣೆಗಳ ಮನೆಗೆ ನುಗ್ಗಿ ನಿವಾಸಿಗಳು ತೀವ್ರ ತೊಂದರೆಗೀಡಾಗಿದ್ದಾರೆ ಎಂಬು ದನ್ನು ಮನಗಂಡು ತಕ್ಷಣವೇ ಸರ್ವೆ ಮಾಡಿಸಿ ಸರ್ಕಾರಿ ಜಾಗ ಗುರುತಿಸಬೇಕು ಹಾಗೂ ಒತ್ತುವರಿಯಾಗಿರುವ ಮಳೆ ನೀರಿನ ರಾಜ ಕಾಲುವೆಯನ್ನು ಮುಲಾ ಜಿಲ್ಲದೆ ತೆರವುಗೊಳಿಸಿ ತಮಗೆ ವರದಿ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು.

ಅದೇ ರೀತಿ ರಾಮಾನುಜ ರಸ್ತೆ 6ನೇ ಕ್ರಾಸ್ ಬಳಿಯ ರಾಜ ಕಾಲುವೆ (ದೊಡ್ಡ ಮೋರಿ) ಯನ್ನು ಅಕ್ಕಪಕ್ಕದ ಮನೆಯವರು ಒತ್ತುವರಿ ಮಾಡಿಕೊಂಡಿರುವುದನ್ನು ತೋರಿಸಿದ ಶಾಸಕ ರಾಮದಾಸ್ ಅವರು, ಈ ಸಮಸ್ಯೆ ಬಗೆಹರಿಸದಿದ್ದರೆ ಇಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರವಾಗಲಿದೆ ಎಂದರು.

ತಕ್ಷಣವೇ ಸ್ಥಳದಲ್ಲಿದ್ದ ತಹಸೀಲ್ದಾರ್ ಟಿ.ರಮೇಶ್ ಬಾಬು ಅವರಿಗೆ ಆದೇಶಿಸಿದ ಸಚಿವರು, ರಾಜ ಕಾಲುವೆ ಸೇರಿದಂತೆ ಮೈಸೂರು ನಗರದಾದ್ಯಂತ ಸರ್ಕಾರಿ ಜಾಗ ಒತ್ತುವರಿಯನ್ನು ಅವರು ಎಷ್ಟೇ ಪ್ರಭಾವ ಶಾಲಿಯಾಗಿದ್ದರೂ ತೆರವುಗೊಳಿಸಿ ತಮಗೆ ವರದಿ ನೀಡುವಂತೆ ತಿಳಿಸಿದರು.

ತ್ಯಾಜ್ಯ ವಿಲೇವಾರಿ: ಅಲ್ಲಿಂದ ವಿದ್ಯಾರಣ್ಯ ಪುರಂನ ಸೂಯೇಜ್ ಫಾರಂಗೆ ತೆರಳಿದ ಅವರು, ಅಲ್ಲಿನ ಎಕ್ಸೆಲ್ ಪ್ಲಾಂಟ್‍ನಲ್ಲಿ ಬೆಟ್ಟದಂತೆ ರಾಶಿ ಬಿದ್ದಿರುವ ಕಸದ ರಾಶಿ ಹಾಗೂ ದುರ್ವಾಸನೆ ಕಂಡು, ಒಂದು ತಿಂಗಳೊಳಗಾಗಿ ಟೆಂಡರ್ ಕರೆದು ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಪ್ರಕ್ರಿಯೆ ಆರಂಭಿಸಬೇಕೆಂದು ಮೈಸೂರು ಮಹಾನಗರ ಪಾಲಿಕೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಹೇಶ್ ಅವರಿಗೆ ಸೂಚಿಸಿದರು.

ಟೆಂಡರ್ ಪಡೆಯುವ ಸಂಸ್ಥೆ ಈ ಹಿಂದೆ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ವರದಿ ಪಡೆದು ಅರ್ಹರಾಗಿದ್ದಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳುವ ಜೊತೆಗೆ ಏಕಕಾಲದಲ್ಲಿ ಕನಿಷ್ಠ 10 ಜೆಸಿಬಿ ಯಂತ್ರಗಳಲ್ಲಿ ಕೆಲಸ ಮಾಡುವಂತಿರ ಬೇಕು ಎಂದೂ ಜಿ.ಟಿ. ದೇವೇಗೌಡರು ತಾಕೀತು ಮಾಡಿದರು.

ಕೆಸರೆ, ರಾಯನಕೆರೆ: ವಿದ್ಯಾರಣ್ಯಪುರಂನ ಎಕ್ಸೆಲ್ ಪ್ಲಾಂಟ್‍ನಲ್ಲಿ 7 ಲಕ್ಷ ಟನ್‍ನಷ್ಟು ತ್ಯಾಜ್ಯ ಸಂಗ್ರಹವಾಗಿರುವುದರಿಂದ ಅದರ ಒತ್ತಡ ತಪ್ಪಿಸಲು ಉದ್ದೇಶಿತ ಕೆಸರೆ ಮತ್ತು ರಾಯನಕೆರೆಯಲ್ಲಿ ತ್ಯಾಜ್ಯ ವಿಲೇವಾರಿ, ಸಂರಕ್ಷಣಾ ಕೇಂದ್ರಗಳನ್ನು ಸ್ಥಾಪಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

1 ಲಕ್ಷ ಸಸಿ ಬೆಳೆಸಿ: ಅದೇ ವೇಳೆ ಸೂಯೇಜ್ ಫಾರಂನಲ್ಲಿ ಗಿಡ ನೆಡುವ ಮೂಲಕ 5000 ಸಸಿ ಬೆಳೆಸುವ ಪಾಲಿಕೆ ಯೋಜನೆಗೆ ಚಾಲನೆ ನೀಡಿದ ಸಚಿವರು, ಈ ಸ್ಥಳದಲ್ಲಿ 1 ಲಕ್ಷ ಸಸಿ ಬೆಳೆಸಿ ಬೃಹತ್ ನರ್ಸರಿ ಸೆಂಟರ್ ಮಾಡಿ ಎಂದು ಸಲಹೆ ನೀಡಿದರು.

ಪಾರ್ಕಿಂಗ್ ಜಂಕ್ಷನ್:ಲಲಿತ ಮಹಲ್ ರಸ್ತೆಯ ರಾಣಾ ಪ್ರತಾಪ್ ಸಿಂಹ ಸರ್ಕಲ್ ನಲ್ಲಿ ಗಾಲ್ಫ್ ಕ್ಲಬ್‍ಗೆ ಹೋಗುವ ಕಡೆ ಎಡಬದಿ ಮೂಲೆ ಜಾಗವನ್ನು ಪಾರ್ಕಿಂಗ್ ಜಂಕ್ಷನ್ ಆಗಿ ಮಾಡಿ ಕಾರಂಜಿಕೆರೆಗೆ ಬರುವವರ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಜಿ.ಟಿ. ದೇವೇ ಗೌಡರು ತಿಳಿಸಿದರು.

ಪಾರಂಪರಿಕ ರಸ್ತೆ: ಅಲ್ಲಿನ ಮೃಗಾಲಯ -ಕಾರಂಜಿಕೆರೆ ನಡುವಿನ ಲೋಕರಂಜನ್ ಮಹಲ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿ ಎಂದು ಸಿದ್ದಾರ್ಥ ನಗರ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಅರುಣ ಕುಮಾರಿ ಅವರಿಗೆ ನಿರ್ದೇಶನ ನೀಡಿದ ಸಚಿವರು, ಫೆನ್ಸಿಂಗ್ ತೆರವುಗೊಳಿಸಿ ಅಗಲೀ ಕರಣ ಮಾಡಿ ಈ ರಸ್ತೆಯನ್ನು ಪಾರಂಪರಿಕ ರಸ್ತೆಯಾಗಿ ಪರಿವರ್ತಿಸಿ ಎಂದು ಪಾಲಿಕೆ ಅಧಿ ಕಾರಿಗಳಿಗೆ ಸಲಹೆ ನೀಡಿದರು.

ಗುದ್ದಲಿಪೂಜೆ: ನಂತರ ಬನ್ನೂರು ರಸ್ತೆಯ ಡೈರಿ ಸರ್ಕಲ್‍ನಿಂದ ಕುರು ಬಾರಹಳ್ಳಿ ಸರ್ಕಲ್‍ವರೆಗೆ ಮುಡಾದಿಂದ 3.9 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿ ರುವ 4 ಪಥದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಇದೇ ವೇಳೆ ಗುದ್ದಲಿಪೂಜೆ ನೆರವೇರಿಸಿದರು.

ಮನವಿ ಸಲ್ಲಿಕೆ: ಕುರುಬಾರಹಳ್ಳಿ ಸರ್ಕಲ್‍ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಬೇಕೆಂದು ಒತ್ತಾಯಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಬಳಗದ ಅಧ್ಯಕ್ಷ ಪುನೀತ್ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ವೋಲ್ವೋ ಬಸ್ಸಿನಲ್ಲಿ: ಬೆಳಿಗ್ಗೆಯಿಂದ ಪಾಲಿಕೆ ಮಿನಿ ಬಸ್ಸಿನಲ್ಲಿ ಪ್ರದಕ್ಷಿಣೆ ಹಾಕಿದ ಸಚಿವರು, ಜನಜನಪ್ರತಿನಿಧಿಗಳು, ಉಪ ಹಾರದ ನಂತರ ಕೆಎಸ್‍ಆರ್‍ಟಿಸಿ ವೋಲ್ವೋ ಐರಾವತ ಬಸ್ಸಿನಲ್ಲಿ ಒಟ್ಟಾಗಿ ತೆರಳಿ ಎನ್.ಆರ್. ಕ್ಷೇತ್ರದಲ್ಲಿ ಪ್ರದಕ್ಷಣಿ ಹಾಕಿದರು. ಒತ್ತಡದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ನಿಗದಿಯಾಗಿದ್ದ ಸಚಿವರ ಚಾಮರಾಜ ಕ್ಷೇತ್ರದ ಪರಿಶೀಲನೆಯನ್ನು ನಾಳೆ (ಜು.3)ಗೆ ಮುಂದೂಡಲಾಗಿದೆ.

Translate »