ಜಿಪಂ, ತಾಪಂ ವಾರ್ಷಿಕ ಅಭಿವೃದ್ಧಿ ಧನ ಹೆಚ್ಚಳ
ಮೈಸೂರು

ಜಿಪಂ, ತಾಪಂ ವಾರ್ಷಿಕ ಅಭಿವೃದ್ಧಿ ಧನ ಹೆಚ್ಚಳ

July 12, 2019

ಬೆಂಗಳೂರು, ಜು.11(ಕೆಎಂಶಿ)- ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ನೀಡಲಾಗುತ್ತಿರುವ ವಾರ್ಷಿಕ ಅಭಿವೃದ್ಧಿ ಧನ ಹೆಚ್ಚಳ ಮಾಡುವ ಮಹತ್ವದ ನಿರ್ಧಾರವನ್ನು ಸಂಪುಟ ಸಭೆ ಕೈಗೊಂಡಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇ ಗೌಡ, ಪ್ರಸಕ್ತ ಜಿಲ್ಲಾ ಪಂಚಾಯಿತಿಗಳಿಗೆ ನಾಲ್ಕು ಕೋಟಿ, ತಾಲೂಕು ಪಂಚಾಯಿತಿಗಳಿಗೆ ಒಂದು ಕೋಟಿ ರೂ. ವಾರ್ಷಿಕ ಅನುದಾನ ನೀಡಲಾಗುತ್ತಿದೆ.

ಪ್ರಸಕ್ತ ಆರ್ಥಿಕ ವರ್ಷದಿಂದಲೇ ಜಿಲ್ಲಾ ಪಂಚಾ ಯಿತಿಗಳ ಭೌಗೋಳಿಕ ವಿಸ್ತೀರ್ಣ ಮತ್ತು ವಿಸ್ತರಣೆಗೆ ಅನುಗುಣವಾಗಿ ಕನಿಷ್ಠ ನಾಲ್ಕು ಕೋಟಿ ರೂ.ನಿಂದ ಗರಿಷ್ಠ ಎಂಟು ಕೋಟಿ ರೂ.ವರೆಗೂ ಹೆಚ್ಚಳ ಮಾಡಲಾಗಿದೆ. ತಾಲೂಕು ಪಂಚಾಯಿತಿಗಳಿಗೆ ಹಾಲಿ ನೀಡಲಾಗು ತ್ತಿರುವ 1 ಕೋಟಿ ವಾರ್ಷಿಕ ಅನುದಾನ ವನ್ನು 2 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ತಾಲೂಕು ಪಂಚಾಯಿತಿಗಳ ಭೌಗೋಳಿಕ ವಿಸ್ತರಣೆ ಮತ್ತು ಜನಸಂಖ್ಯೆ ಆಧರಿಸಿ, ಕನಿಷ್ಠ 2 ಕೋಟಿ ರೂ.ನಿಂದ 3 ಕೋಟಿ ರೂ.ಗೆ ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳ ಲಾಗಿದೆ ಎಂದು ಸಚಿವರು ತಿಳಿಸಿದರು. ಆಲೂಗೆಡ್ಡೆ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಿತ್ತನೆ ಬೀಜ, ಗೊಬ್ಬರ ಹಾಗೂ ಸಾಂಕ್ರಾಮಿಕ ರೋಗ ಸಿಂಪಡಣೆಗಾಗಿ ಹೆಕ್ಟೇರಿಗೆ 14700 ರೂ. ಪ್ರೋತ್ಸಾಹ ಧನ ನೀಡುವ ಮಹತ್ತರ ತೀರ್ಮಾ ನವನ್ನು ಇದೇ ಸಂದರ್ಭದಲ್ಲಿ ಕೈಗೊಳ್ಳಲಾ ಗಿದೆ. ಆಲೂಗೆಡ್ಡೆ ಕೃಷಿ ಪದ್ಧತಿ ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿರುವ ಹಿನ್ನೆಲೆ ಯಲ್ಲಿ 2 ಹೆಕ್ಟೇರಿಗೆ ಸೀಮಿತವಾಗಿ ಪ್ರೋತ್ಸಾಹ ಧನ ನೀಡಲಾಗುವುದು. ಬಿತ್ತನೆ ಬೀಜಕ್ಕಾಗಿ 7500 ರೂ. ಔಷಧಿ ಮತ್ತು ಗೊಬ್ಬರಕ್ಕಾಗಿ 7200 ರೂ ಪ್ರತಿ ಹೆಕ್ಟೇರಿಗೆ ನೀಡಲಾಗುವುದು. ಈ ಮೊದಲು ರಾಜ್ಯದ ವಿವಿಧ ಭಾಗಗಳಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತಿತ್ತು. ಹಾಸನದಲ್ಲಿ ಹೆಚ್ಚು, ಉಳಿದಂತೆ ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಈ ಕೃಷಿಯತ್ತ ಅವರು ಮತ್ತೆ ಮರಳಿ ಬರಬಹುದು. ಇದೇ ರೀತಿ ಸಿರಿಧಾನ್ಯ ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹೆಕ್ಟೇರ್‍ಗೆ ಹತ್ತು ಸಾವಿರ ಪ್ರೋತ್ಸಾಹಧನ ನೀಡಲಾಗು ವುದು. ಗರಿಷ್ಠ 2 ಹೆಕ್ಟೇರ್‍ವರೆಗೂ ರೈತರು ಸಹಾಯಧನ ಪಡೆಯಬಹುದಾಗಿದೆ.

ವಿಜಾಪುರದ ಆಲ ಮೇಲು ಹಾಗೂ ಹಾಸನದ ಸೋಮನಹಳ್ಳಿ ಬಳಿ ತೋಟಗಾರಿಕೆ ಕಾಲೇಜು ಪ್ರಾರಂಭಿಸಲು ಸಂಪುಟ ಸಮ್ಮತಿ ನೀಡಿದೆ. ಸರ್ಕಾರ ಉಳಿಸಿಕೊಳ್ಳುವ ಒಂದು ಭಾಗವಾಗಿ ಇಂದಿನ ಸಂಪುಟ ಸಭೆಯಲ್ಲಿ ಮೈತ್ರಿ ಶಾಸಕರ ಕ್ಷೇತ್ರಗಳ ಕೆರೆಗಳನ್ನು ಭರ್ತಿ ಮಾಡುವುದು ಮತ್ತು ಕುಡಿಯುವ ನೀರಿನ ಪೂರೈಕೆಯ ಬಹಳಷ್ಟು ಯೋಜನೆಗಳಿಗೆ ಸಂಪುಟ ಸಮ್ಮತಿಸಿದೆ. ಒಂದು ವೇಳೆ ಸರ್ಕಾರ ಉರುಳಿದರೂ, ಬರುವ ಸರ್ಕಾರ ಇಂತಹ ಯೋಜನೆಗಳನ್ನು ರದ್ದು ಮಾಡುವ ಅಥವಾ ಪುನರ್ ಪರಿಶೀಲನೆ ಮಾಡದ ರೀತಿಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಮೇಲುಕೋಟೆಯ ಕಲ್ಯಾಣಿಯನ್ನು 37 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲು ತೀರ್ಮಾನ ಕೈಗೊಂಡಿದ್ದರೆ, ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ಅರ್ಕಾವತಿ ನದಿ ಪಾತ್ರದಿಂದ ಅಲ್ಲಿನ ಕೆಲವು ಭಾಗಗಳಿಗೆ ಏತ ನೀರಾವರಿ ಮೂಲಕ ಕುಡಿ ಯುವ ನೀರು ಒದಗಿಸಲು 28 ಕೋಟಿ ರೂ. ಬಿಡು ಗಡೆಗೆ ಸಂಪುಟ ಸಮ್ಮತಿಸಿದೆ. ಅದೇ ರೀತಿ ಮಂಡ್ಯ ಜಿಲ್ಲೆಯ ಕೆಲವು ಗ್ರಾಮಗಳಿಗಾಗಿ 30 ಕೋಟಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ, ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಅಲ್ಲಿನ ಕೆರೆಗಳನ್ನು ತುಂಬಿಸಲು 70 ಕೋಟಿ ರೂ. ಬಿಡುಗಡೆ ಮಾಡಿದೆ. ಹಾಸನ ಜಿಲ್ಲಾ ಕಾಟೇನಹಳ್ಳಿ ಮೂರನೇ ಹಂತದ ಏತ ನೀರಾ ವರಿ ಮೂಲಕ ದಂಡಿಗಾನಹಳ್ಳಿ ಶಾಖಾ ನಾಲಾ ಮೂಲಕ 2.6 ಟಿಎಂಸಿ ನೀರು ಬಳಕೆ ಮಾಡಿ ಕೊಂಡು ಕೃಷಿ ಬೆಳೆಗೆ ನೀರು ಹರಿಸುವ ಯೋಜನೆಗೆ 147 ಕೋಟಿ ರೂ. ಒದಗಿಸಿದೆ.

Translate »