ಬೆಂಗಳೂರಿನಲ್ಲಿ ಭಾರತದ ಬೃಹತ್ ಕೊರೊನಾ ಸೋಂಕಿತರ ಆರೈಕೆ ಕೇಂದ್ರ ಸಜ್ಜು
ಮೈಸೂರು

ಬೆಂಗಳೂರಿನಲ್ಲಿ ಭಾರತದ ಬೃಹತ್ ಕೊರೊನಾ ಸೋಂಕಿತರ ಆರೈಕೆ ಕೇಂದ್ರ ಸಜ್ಜು

July 6, 2020

ಬೆಂಗಳೂರು, ಜು.5- ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ ಜಂಟಿಯಾಗಿ 10,100 ಹಾಸಿಗೆಗಳ ಬೃಹತ್ ಕೋವಿಡ್ ಆರೈಕೆ ಕೇಂದ್ರವನ್ನು ನಿರ್ಮಾಣ ಮಾಡಿವೆ. ರೋಗಿಗಳು ಚಿಕಿತ್ಸೆ ಪಡೆಯಲು ಇದು ಸಿದ್ಧವಾಗಿದೆ.

ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕೋವಿಡ್ ಸೋಂಕಿತರ ಆರೈಕೆ ಕೇಂದ್ರ ಸಜ್ಜಾಗಿದ್ದು, ಈ ಕೇಂದ್ರವು ಭಾರತದಲ್ಲೇ ಬೃಹತ್ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವಾಗಿದೆ. ದೆಹಲಿಯಲ್ಲಿ 10 ಸಾವಿರ ಹಾಸಿಗೆಯ ಕೇಂದ್ರ ನಿರ್ಮಾಣ ಮಾಡಲಾಗಿದೆ.

ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‍ಕುಮಾರ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಆರೋಗ್ಯ ಇಲಾಖೆ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮುಂತಾದವರು ಭಾನುವಾರ ಈ ಕೇಂದ್ರದಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.

 

10,100 ಹಾಸಿಗೆಗಳ ವ್ಯವಸ್ಥೆ: 10,100 ಹಾಸಿಗೆಯ ವ್ಯವಸ್ಥೆ ಹೊಂದಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಲಕ್ಷಣ ರಹಿತ ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಮತ್ತು ವಯಸ್ಕರ ಮನರಂಜನೆಗಾಗಿ ಎಲ್‍ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆಕ್ಸಿಜನ್ ವ್ಯವಸ್ಥೆ ಹೊಂದಿರುವ ಪ್ರತ್ಯೇಕ ಹಾಸಿಗೆಗಳ ವಿಭಾಗ ಮಾಡಲಾಗಿದೆ.

150 ವೈದ್ಯರಿಂದ ಕೆಲಸ: ಬೆಂಗಳೂರಿನಲ್ಲಿರುವ ಈ ಬೃಹತ್ ಕೋವಿಡ್ ಆರೈಕೆ ಕೇಂದ್ರದಲ್ಲಿ 150 ನುರಿತ ವೈದ್ಯರು, ಶುಶ್ರೂಷಕರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಸೂಕ್ತ ಆಹಾರ, ಶೌಚಾ ಲಯ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಹಾಸಿಗೆಯ ಕೊರತೆ: ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಈ ವಾರ ಪ್ರತಿದಿನ 500ಕ್ಕೂ ಅಧಿಕ ಪ್ರಕರಣಗಳೂ ದಾಖಲಾಗುತ್ತಿವೆ. ಕೋವಿಡ್ ಸೋಂಕಿತರ ಆರೈಕೆಗೆ ಹಾಸಿಗೆಯ ಕೊರತೆ ಎದುರಾಗ ಬಾರದು ಎಂದು ಈ ಕೇಂದ್ರ ನಿರ್ಮಾಣ ಮಾಡಲಾಗಿದೆ.

Translate »