ದಿ.ವಿಷ್ಣುವರ್ಧನ್ ಸ್ಮಾರಕಕ್ಕೆ ಆಗಸ್ಟ್ ನಲ್ಲಿ ಶಿಲಾನ್ಯಾಸ
ಮೈಸೂರು

ದಿ.ವಿಷ್ಣುವರ್ಧನ್ ಸ್ಮಾರಕಕ್ಕೆ ಆಗಸ್ಟ್ ನಲ್ಲಿ ಶಿಲಾನ್ಯಾಸ

July 6, 2020

ಮೈಸೂರು, ಜು.5(ಆರ್‍ಕೆಬಿ)- ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಎಂದೇ ಹೆಸರಾಗಿದ್ದ, ನಾಯಕನಟರಾಗಿದ್ದ ವಿಷ್ಣು ವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯದ ರೂಪುರೇಷೆಗಳು ಅಂತಿಮಗೊಂಡಿದ್ದು, ಸ್ಮಾರಕ ನಿರ್ಮಾಣ ಕಾಮಗಾರಿಗೆ ಆಗಸ್ಟ್ ನಲ್ಲಿ ಚಾಲನೆ ದೊರೆಯಲಿದೆ.

ಮೈಸೂರು ಸಮೀಪದ ಉದ್ಬೂರು ಗೇಟ್ ಬಳಿ ಹಾಲಾಳು ಗ್ರಾಮದ ಸರ್ವೆ ನಂ. 8ರಲ್ಲಿನ ಒಟ್ಟು ಆರೂವರೆ ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಜಾಗದ ಸುತ್ತಲೂ ಫೆನ್ಸಿಂಗ್ ಮಾಡಲಾಗಿದೆ. ಕಳೆದ ವಾರ ಕೊರೆದ ಬೋರ್ ವೆಲ್‍ನಲ್ಲಿ ನೀರು ಸಹ ಬಂದಿದೆ. ಸ್ಮಾರಕ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷರೂ ಆದ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ `ಮೈಸೂರು ಮಿತ್ರ’ನಿಗೆ ಭಾನುವಾರ ತಿಳಿಸಿದರು.

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮೊದಲು ಸಾಕಷ್ಟು ಅಡೆಗಡೆಗಳು ಎದುರಾದವು. ಸ್ಮಾರಕಕ್ಕಾಗಿ ಬೃಹತ್ ಪ್ರತಿಭಟನೆಗಳನ್ನೇ ನಡೆಸಬೇಕಾಯಿತು. ಕೊನೆಗೂ ಸ್ಮಾರಕ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ಸರ್ಕಾರದಿಂದ ಈಗಾಗಲೇ 11 ಕೋಟಿ ರೂ. ಸಹ ಬಿಡುಗಡೆಯಾಗಿದೆ ಎಂದು ಹೇಳಿದರು.

ತಮ್ಮ ಪ್ರೀತಿಯ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಅನೇಕ ಅಡ್ಡಿ ಅತಂಕಗಳು ಎದುರಾದ ಬಗ್ಗೆ ಅಭಿ ಮಾನಿಗಳು ಬೇಸರಗೊಂಡಿದ್ದರು. ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಮುಂದಿನ ತಿಂಗಳು ಶಿಲಾನ್ಯಾಸ ನೆರವೇರಲಿರುವ ಸುದ್ದಿ ಕೇಳಿ ಬಹಳ ಹರ್ಷಗೊಂಡಿದ್ದಾರೆ. ಆದಷ್ಟೂ ಬೇಗ ಸ್ಮಾರಕ ನಿರ್ಮಾಣ ಗೊಂಡು ಪ್ರಸಿದ್ಧ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಬೇಕು ಎಂಬ ಬಯಕೆ ಹೊಂದಿದ್ದಾರೆ.

7 ವರ್ಷಗಳ ಹೋರಾಟ: `ವಂಶವೃಕ್ಷ’ ದಿಂದ `ಆಪ್ತರಕ್ಷಕ’ನವರೆಗೆ 200ಕ್ಕೂ ಹೆಚ್ಚು ಯಶಸ್ವಿ ಚಿತ್ರಗಳ ನಾಯಕ ನಟ ರಾಗಿದ್ದ ವಿಷ್ಣುವರ್ಧನ್ 2009ರ ಡಿಸೆಂಬರ್ 3ರಂದು ನಿಧನರಾದರು. 2013ರಲ್ಲಿ ಬೆಂಗಳೂರಿನ ಮೈಲಸಂದ್ರದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಮಂಜೂರಾಯಿತು. ನಂತರ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು, ಹುಟ್ಟೂರು ಮೈಸೂರಿನಲ್ಲಿಯೇ ವಿಷ್ಣು ಸ್ಮಾರಕ ನಿರ್ಮಾಣಗೊಳ್ಳಲಿ ಎಂದು 2016ರಲ್ಲಿ ಪ್ರಸ್ತಾಪಿಸಿದರು. 2017ರಲ್ಲಿ ಸರ್ಕಾರದಿಂದ ಮೈಸೂರಿನಲ್ಲಿ ಭೂಮಿ ಮಂಜೂರಾಯಿತು. ಆದರೆ, ಖಾಸಗಿ ವ್ಯಕ್ತಿಗಳಿಂದ ಅಡ್ಡಿಯಾಗಿ ನ್ಯಾಯಾಲಯದ ಮೆಟ್ಟಿಲೇರಿತು. ಜಾಗ ವಿಷ್ಣು ಸ್ಮಾರಕಕ್ಕೇ ಸೇರಿದ್ದೆಂದು ನ್ಯಾಯಾಲಯ 2019ರಲ್ಲಿ ತೀರ್ಪು ನೀಡಿತು. ಕಳೆದ ವರ್ಷ ಜು.1ರಂದು ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆಯೂ ನಡೆಯಿತು. 7 ವರ್ಷಗಳ ಸತತ ಹೋರಾಟದ ಫಲವಾಗಿ ವಿಷ್ಣು ಸ್ಮಾರಕ ನಿರ್ಮಾಣ ಕೈಗೂಡು ತ್ತಿದೆ ಎಂದು ನಿಟ್ಟುಸಿರು ಬಿಟ್ಟರು

Translate »