ಮೈಸೂರಲ್ಲಿ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ
ಮೈಸೂರು

ಮೈಸೂರಲ್ಲಿ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ

September 19, 2018

ಮೈಸೂರು: ಸಾಹಸ ಸಿಂಹ, ಅಭಿನಯ ಭಾರ್ಗವ ಇತ್ಯಾದಿ ಬಿರುದಾಂಕಿತ, ಅಪಾರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಡಾ.ವಿಷ್ಣುವರ್ಧನ್ ಅವರ 69ನೇ ಜನ್ಮದಿನವನ್ನು ಮೈಸೂರಿನಲ್ಲಿ ಮಂಗಳವಾರ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಡಾ.ವಿಷ್ಣುವರ್ಧನ್ ಉದ್ಯಾನ ವನದ ಮುಖ್ಯ ದ್ವಾರದಲ್ಲಿ ಅಖಿಲ ಕರ್ನಾ ಟಕ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಆಚರಿಸಿ, ಸಂಭ್ರಮಿಸಲಾಯಿತು.

ರಂಗಕರ್ಮಿ, ಸಿನಿಮಾ ನಟ ಮಂಡ್ಯ ರಮೇಶ್ ವಿಷ್ಣುವರ್ಧನ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಕೇಕ್ ಕತ್ತರಿಸಿ ಹಂಚಲಾಯಿತು.

ಬಳಿಕ ಮಾತನಾಡಿದ ಮಂಡ್ಯ ರಮೇಶ್, ಡಾ.ವಿಷ್ಣುವರ್ಧನ್ ಶ್ರೇಷ್ಠ ನಟ. ಸಜ್ಜನಿಕೆಯ ಮೇರು ವ್ಯಕ್ತಿತ್ವ ಹೊಂದಿದ್ದರು. ಸದಾ ಸಹಾಯಹಸ್ತ ನೀಡುತ್ತಿದ್ದ ಹೃದಯವಂತ. ಇವರು ಮೂಲತಃ ಮೈಸೂರಿನವರಾ ದರೂ ದೇಶ-ವಿದೇಶಗಳಲ್ಲಿ ಅಭಿಮಾನಿ ಗಳನ್ನು ಸಂಪಾದಿಸಿದ್ದಾರೆ. ಕನ್ನಡ ನೆಲ-ಜಲ, ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತಿದ್ದರು ಎಂದು ಸ್ಮರಿಸಿದರು.
ಸ್ಮಾರಕ ನಿರ್ಮಾಣಕ್ಕೆ ಇಚ್ಛಾಸಕ್ತಿ ಕೊರತೆ: ಡಾ.ವಿಷ್ಣುವರ್ಧನ್ ಭೌತಿಕವಾಗಿ ಇಲ್ಲವಾ ದರೂ ಅಪಾರ ಅಭಿಮಾನಿಗಳ ಹೃದಯ ದಲ್ಲಿ ಉಸಿರಾಗಿ ನೆಲೆಸಿದ್ದಾರೆ. ಇಂತಹ ಮಹಾನ್ ವ್ಯಕ್ತಿತ್ವವನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ವಿಷ್ಣು ಸ್ಮಾರಕ ನಿರ್ಮಿಸಬೇಕೆಂಬುದು ನಮ್ಮೆಲ್ಲರೂ ಆಗ್ರಹವಾಗಿದೆ. ಆದರೆ ಈ ಬಗ್ಗೆ ಸರ್ಕಾ ರಕ್ಕೆ ಇಚ್ಛಾಸಕ್ತಿ ಕೊರತೆ ಇದೆ ಎಂದು ಮಂಡ್ಯ ರಮೇಶ್ ಮಾಧ್ಯಮದವರ ಎದುರು ಬೇಸರ ವ್ಯಕ್ತಪಡಿಸಿದರು.

ಸ್ಮಾರಕಕ್ಕಾಗಿ ಸರ್ಕಾರದ ಗಮನ ಸೆಳೆಯುತ್ತೇನೆ: ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಸಿ.ಹೆಚ್.ವಿಜಯಶಂಕರ್ ಮಾತನಾಡಿ, ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಹಾಗೂ ಪ್ರತಿಮೆ ನಿರ್ಮಾಣ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

ಡಾ.ವಿಷ್ಣುವರ್ಧನ್ ಅಪರೂಪದ ಕಲಾವಿದರು, ಮಾತ್ರವಲ್ಲ ಮಾನವತಾವಾದಿ ಆಗಿದ್ದವರು. ಅವರ ಜೀವನದ ಆದರ್ಶ ಸಮಾಜಕ್ಕೆ ಮಾದರಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್‍ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅಪರೂಪದ ಮಾಣಿಕ್ಯಗಳು. ಈ ಇಬ್ಬರು ಮೇರು ನಟರು ಪರಸ್ಪರ ಅಣ್ಣತಮ್ಮಂದಿರಂತೆ ಬದುಕಿ ಕನ್ನಡ ಚಿತ್ರರಂಗದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ.

ಡಾ.ವಿಷ್ಣುವರ್ಧನ್ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವಂತಹ ಹೃದಯ ವಂತರು. ಅದೇ ದಾರಿಯಲ್ಲಿ ವಿಷ್ಣುವರ್ಧನ್ ಅವರ ಪತ್ನಿ ಭಾರತೀ ವಿಷ್ಣುವರ್ಧನ್ ಸಾಗುತ್ತಿದ್ದಾರೆ ಎಂದು ತಿಳಿಸಿದರು.

ಬಳಗದ ಜಿಲ್ಲಾಧ್ಯಕ್ಷ ಎಂ.ಡಿ.ಪಾರ್ಥ ಸಾರಥಿ, ಸಮಾಜಸೇವಕ ಕೆ.ರಘುರಾಂ ವಾಜಪೇಯಿ, ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‍ಗೌಡ, ಯುವ ಮುಖಂಡ ವಿಕ್ರಂ ಅಯ್ಯಂಗಾರ್, ಜೆಡಿಎಸ್ ಮುಖಂಡ ರಾದ ಅಜಯ್‍ಶಾಸ್ತ್ರಿ, ಪ್ರಶಾಂತ್, ಬಸವರಾಜು, ಜಯಸಿಂಹ, ಕರುಣಾಮಯಿ ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್ ರಾಜೇಶ್, ಕಾಂಗ್ರೆಸ್ ಮುಖಂಡರಾದ ವಿನಯ್ ಕಣಗಾಲ್, ಕಡಕೊಳ ಜಗದೀಶ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.

Translate »