ಬಂದೂಕು, ಶಸ್ತ್ರ ಠೇವಣಿ ಮಾಡಲು ಸೂಚನೆ
ಚಾಮರಾಜನಗರ

ಬಂದೂಕು, ಶಸ್ತ್ರ ಠೇವಣಿ ಮಾಡಲು ಸೂಚನೆ

August 13, 2018

ಚಾಮರಾಜನಗರ:  ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪಟ್ಟಣ ವ್ಯಾಪ್ತಿಯ ಎಲ್ಲಾ ಶಸ್ತ್ರ ಬಂದೂಕು ಪರವಾನಗಿ ದಾರರು ಶಸ್ತ್ರ ಬಂದೂಕುಗಳನ್ನು ಸಂಬಂಧಪಟ್ಟ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶಿಸಿದ್ದಾರೆ.

ಚುನಾವಣಾ ಘೋಷಿತ ಪ್ರದೇಶದಲ್ಲಿ ಹೊರಗಿನ ಅಥವಾ ಯಾವುದೇ ವ್ಯಕ್ತಿಗಳು ಶಸ್ತ್ರ ಬಂದೂಕುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಸೆ.3ರವರೆಗೂ ಜಾರಿಯಲ್ಲಿರುತ್ತದೆ. ಸದರಿ ಆದೇಶವನ್ನು ಉಲ್ಲಂಘಿಸಿದಲ್ಲಿ ಆಮ್ರ್ಸ್ ಆಕ್ಟ್ 1959ರ ರೀತ್ಯಾ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಬ್ಯಾಂಕ್‍ಗಳು, ಸರ್ಕಾರಿ ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧ ಗಳನ್ನು ಹೊಂದಿರುವ ಶಸ್ತ್ರ, ಬಂದೂಕುಗಳಿಗೆ ಹಾಗೂ ವೈಯಕ್ತಿಕವಾಗಿ ಜೀವ ಬೆದರಿಕೆ ಹೊಂದಿರುವವರು ಆಯುಧಗಳನ್ನು ಅತ್ಯಗತ್ಯವಾಗಿ ಅವರಲ್ಲೇ ಇಟ್ಟುಕೊಳ್ಳುವ ಅನಿವಾರ್ಯತೆಯ ಸಕಾರಣಗಳೊಂದಿಗೆ ಸಂಬಂಧಿಸಿದ ವ್ಯಾಪ್ತಿ ಪ್ರದೇಶದ ಪೋಲಿಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶದಲ್ಲಿ ತಿಳಿಸಿದ್ದಾರೆ.

Translate »