ಪುಲ್ವಾಮ ದಾಳಿಗೆ ಗುಪ್ತಚರ ವೈಫಲ್ಯವೇ ಕಾರಣ
ಮೈಸೂರು

ಪುಲ್ವಾಮ ದಾಳಿಗೆ ಗುಪ್ತಚರ ವೈಫಲ್ಯವೇ ಕಾರಣ

May 15, 2019

ಮೈಸೂರು: ಪುಲ್ವಾಮದಲ್ಲಿ ಸೈನಿಕರ ಮೇಲಿನ ದಾಳಿ, ಶ್ರೀಲಂಕಾದಲ್ಲಿ ಚರ್ಚ್ ಹಾಗೂ ನ್ಯೂಜಿ ಲೆಂಡ್‍ನಲ್ಲಿ ಮಸೀದಿ ಮೇಲಿನ ದಾಳಿ ಗುಪ್ತಚರ ಇಲಾಖೆ ವೈಫಲ್ಯವನ್ನು ಎತ್ತಿ ಹಿಡಿದಿವೆ. ಮಾಹಿತಿಯನ್ನು ಮೊದಲು ನೀಡಿ ಶಹಬ್ಬಾಸ್‍ಗಿರಿ ಪಡೆಯಬೇಕೆಂಬ ಹಂಬಲ ಗುಪ್ತದಳದಲ್ಲಿರುವ ಕೆಲವರಲ್ಲಿರುವ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೆಯಾಗದೆ ಅನಾಹುತಕ್ಕೆ ಎಡೆ ಮಾಡಿಕೊಡುತ್ತವೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ವಿಷಾದಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಡಾ. ಡಿ.ವಿ.ಗುರು ಪ್ರಸಾದ್ ಅವರ `ಗೂಢಚರ್ಯೆಯ ಆ ದಿನಗಳು’ ಕೃತಿ ಕುರಿತು ಸಂವಾದ ಹಾಗೂ ಅಪರಾಧ ವರದಿಗಾರಿಕೆ ಒಂದು ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜ್ಯ ಗುಪ್ತ ದಳದ ಮುಖ್ಯಸ್ಥರಾಗಿದ್ದ ವೇಳೆ ಎದುರಿಸಿದ ಸಮಸ್ಯೆ, ಸವಾಲು, ನಕ್ಸಲ್ ಸಮಸ್ಯೆ ಸೇರಿ ದಂತೆ ವಿವಿಧ ಮಹತ್ತರ ಸನ್ನಿವೇಶಗಳ ಕುರಿತ ಮಾಹಿತಿಯುಳ್ಳ ಕೃತಿಯೇ `ಗೂಢ ಚರ್ಯೆಯ ಆ ದಿನಗಳು’ ಚರಿತ್ರೆಯಿಂದ ಪಾಠ ಕಲಿಯಬಹುದಾಗಿದ್ದು, ಪ್ರತಿ ಯೊಂದು ಅಂಶಗಳು ಇತಿಹಾಸದಲ್ಲಿ ದಾಖಲಾಗಬೇಕು. ಆಗ ಮಾತ್ರ ಹಿಂದೆ ಆಗಿರುವ ತಪ್ಪು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬಹುದು. ಈ ಹಿನ್ನೆಲೆಯಲ್ಲಿಯೇ ಪುಸ್ತಕ ಬರೆಯಲಾಗಿದೆ ಎಂದರು.

ಗುಪ್ತದಳದ ವೈಫಲ್ಯ: ಭಾರತ ಸೇರಿ ದಂತೆ ಎಲ್ಲಾ ರಾಷ್ಟ್ರಗಳಲ್ಲಿಯೂ ಗುಪ್ತದಳ ಇರುತ್ತದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟ ದಲ್ಲಿ ಗುಪ್ತದಳ ಕಾರ್ಯ ನಿರ್ವಹಿಸಲಿದೆ. ಅಮೇರಿಕಾದ ಕಾಲ್‍ಟನ್ ಟವರ್ ಮೇಲಿನ ದಾಳಿ ಸೇರಿದಂತೆ ಬಹುತೇಕ ಪ್ರಕರಣಗಳಲ್ಲಿ ಗುಪ್ತದಳ ವೈಫಲ್ಯ ಎದ್ದು ಕಾಣುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಮಾಹಿತಿ ಸಮರ್ಪಕವಾಗಿ ವಿನಿಮಯ ವಾಗದೇ ಇರುವುದೇ ಭದ್ರತಾ ವೈಫಲ್ಯಕ್ಕೆ ಕಾರಣವಾಗುತ್ತದೆ. ಕೆಲವರು ಶಹಬ್ಬಾಸ್ ಗಿರಿ ಪಡೆದುಕೊಳ್ಳಲು ಹವಣಿಸುತ್ತಾರೆ. ಮುಖ್ಯಸ್ಥರಿಗೇ ಮಾಹಿತಿ ನೀಡಬೇಕೆಂಬ ಹಠ ಹೊಂದಿರುತ್ತಾರೆ. ಇಂತಹ ವರ್ತನೆ ಒಮ್ಮೊಮ್ಮೆ ಮಾರಕವಾಗಬಹುದು ಎಂದರು.

ವೈಫಲ್ಯಗಳು ಹಿಂದೆಯೂ ನಡೆದಿವೆ, ಮುಂದೆಯೂ ನಡೆಯುತ್ತವೆ. ಭಯೋ ತ್ಪಾದಕರು ದಾಳಿ ನಡೆಸುವ ಎಚ್ಚರಿಕೆ ಯನ್ನು ಭಾರತ ಶ್ರೀಲಂಕಾಗೆ ನೀಡಿತ್ತು. ಆದರೆ ಅದನ್ನು ಶ್ರೀಲಂಕಾ ಗಂಭೀರವಾಗಿ ಪರಿಗಣಿಸದಿದ್ದ ಕಾರಣ 250ಕ್ಕೂ ಹೆಚ್ಚು ಮಂದಿ ಹತರಾದರು. ಗುಪ್ತಚರ ಇಲಾಖೆ ನೀಡುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಮುಂಜಾಗ್ರತಾ ಕ್ರಮ ಕೈಗೊಂ ಡರೆ ಶೇ.90ರಷ್ಟು ಅನಾಹುತಗಳನ್ನು ತಡೆಯಬಹುದು. ಆದರೆ ಶೇ.10ರಷ್ಟು ವ್ಯತ್ಯಾಸವಾದರೂ ಅದು ಗುಪ್ತಚರ ಇಲಾಖೆಯ ವೈಫಲ್ಯವೇ ಆಗಲಿದೆ. ಕೆಲ ವೊಮ್ಮೆ ಕರಾರುವಾಕ್ಕಾಗಿ ಎಲ್ಲಾ ಮಾಹಿತಿ ಯನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದರು.
ಧರ್ಮ ಸಂಕಟ: ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತೀವ್ರ ಬರ, ವೀರಪ್ಪನ್‍ನಿಂದ ಡಾ.ರಾಜ್‍ಕುಮಾರ್ ಅಪಹರಣ, ಮಾಜಿ ಸಚಿವ ನಾಗಪ್ಪ ಹತ್ಯೆ, ನಕ್ಸಲ್ ಸಮಸ್ಯೆ ಸೇರಿದಂತೆ ಕೆಲ ಸಮಸ್ಯೆ ಸರ್ಕಾರದ ಮೇಲೆ ಪ್ರಭಾವ ಬೀರಿತ್ತು. ಎಸ್.ಎಂ.ಕೃಷ್ಣ ಅವಧಿಗೂ ಮುನ್ನವೇ ಚುನಾವಣೆಗೆ ಹೋದರು. ಆ ಸಂದರ್ಭ ದಲ್ಲಿ ಲೋಕಸಭಾ ಚುನಾವಣೆಯೊಂದಿಗೆ ವಿಧಾನಸಭಾ ಚುನಾವಣೆ ನಡೆಸಬೇಕೆಂಬ ಮಾತುಗಳು ಚರ್ಚೆಗೆ ಬಂದಿದ್ದವು. ಅಂದು ಗುಪ್ತಚರ ಇಲಾಖೆ ಕಾಂಗ್ರೆಸ್‍ಗೆ ಬಹುಮತ ಬರುವುದಿಲ್ಲ ಎಂದು ವರದಿ ಕೊಟ್ಟಿತ್ತು. ಆದರೂ ಲೋಕಸಭಾ ಚುನಾ ವಣೆಯೊಂದಿಗೆ ವಿಧಾನಸಭಾ ಚುನಾ ವಣೆಯೂ ನಡೆಯಿತು. ಕಾಂಗ್ರೆಸ್‍ಗೆ ನಿರೀಕ್ಷೆಯಂತೆ ಕಡಿಮೆ ಸ್ಥಾನ ಬಂದಿತು.

ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ನೇತೃತ್ವ ವನ್ನು ಧರ್ಮಸಿಂಗ್ ಅವರಿಗೆ ನೀಡಿತು. ಈ ಅವಧಿಯಲ್ಲಿ ಸಂಪದ್ಭರಿತ ಮಳೆ ಯಾಗಿ ರಾಜ್ಯದಲ್ಲಿ ಸುಭಿಕ್ಷ ವಾತಾವರಣ ನಿರ್ಮಾಣವಾಗಿತ್ತು. ವೀರಪ್ಪನ್ ಹತ್ಯೆಯಾಯಿತು. ಎಸ್‍ಎಂಕೆ ಎದುರಿಸಿದ್ದ ಸಮಸ್ಯೆಗಳು ಧರ್ಮ ಸಿಂಗ್ ಕಾಲದಲ್ಲಿ ನಿವಾರಣೆಯಾದವು.

ಆದರೆ ಸುಗಮ ಆಡಳಿತ ನಡೆಸಲು ಸಾಧ್ಯ ವಾಗಲಿಲ್ಲ. ಕೆಲ ತಿಂಗಳವರೆಗೂ ಧರ್ಮ ಸಿಂಗ್ ಸಚಿವ ಸಂಪುಟದಲ್ಲಿ ಕೇವಲ 10 ಸಚಿವರಷ್ಟೇ ಕಾರ್ಯನಿರ್ವಹಿಸಿದರು. ಹೆಚ್ಚುವರಿ ಖಾತೆ ಹೊಂದಿದ್ದರಿಂದ ಅಭಿವೃದ್ಧಿ ಕಡೆಗಣಿಸಲ್ಪಟ್ಟಿತ್ತು. ಅಧಿಕಾರಿಗಳ ವರ್ಗಾವಣೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆಗಿಂತ ಗಲಾಟೆ, ಗದ್ದಲಗಳೇ ಹೆಚ್ಚಾಗಿದ್ದವು. ಈ ಬಗ್ಗೆ ತಮ್ಮ `ಗೂಢಚರ್ಯೆಯ ಆ ದಿನಗಳು’ ಕೃತಿಯಲ್ಲಿ ಪ್ರಸ್ತಾಪಿಸಿರುವುದಾಗಿ ಹೇಳಿದರು.

ಗುಪ್ತದಳದ ಚುನಾವಣಾ ಸಮೀಕ್ಷೆಯೇ ಪಕ್ಕಾ: ರಾಜ್ಯ ಸರ್ಕಾರದ ಗುಪ್ತಚರ ಇಲಾಖೆ ಚುನಾವಣಾ ಸಂಬಂಧ ಸಮೀಕ್ಷೆ ನಡೆಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿ ಸಿದ ಡಾ.ಡಿ.ವಿ.ಗುರುಪ್ರಸಾದ್, ಖಾಸಗಿ ಸುದ್ದಿ ವಾಹಿನಿ ಹಾಗೂ ಇನ್ನಿತರೆ ಸಂಸ್ಥೆ ಗಳು ನಡೆಸುವ ಚುನಾವಣಾ ಸಂಬಂಧ ಸಮೀಕ್ಷೆ ನೂರಕ್ಕೆ ನೂರು ನೈಜತೆಯಿಂದ ಕೂಡಿರುವುದಿಲ್ಲ. ಆದರೆ ಗುಪ್ತಚರ ಇಲಾಖೆ ನೀಡುವ ವರದಿ ಸತ್ಯಕ್ಕೆ ಹತ್ತಿರ ವಾಗಿರುತ್ತದೆ. ಏಕೆಂದರೆ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಪ್ತಚರ ಸಿಬ್ಬಂದಿ ಇರುತ್ತಾರೆ. ಪ್ರತಿದಿನ ಅವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಜನರೊಂದಿಗೆ ಬೆರೆತು ಮಾಹಿತಿ ಕಲೆ ಹಾಕುತ್ತಾರೆ. ಇದರ ಆಧಾರ ದಲ್ಲಿಯೇ ಸತ್ಯಕ್ಕೆ ಹತ್ತಿರವಾದ ವರದಿಯನ್ನು ಗುಪ್ತಚರ ದಳ ನೀಡುತ್ತದೆ ಎಂದು ತಿಳಿಸಿದರು.

ಫೋನ್ ಕದ್ದಾಲಿಕೆ: ಇತ್ತೀಚಿನ ಅಪರಾಧ ಪ್ರಕರಣಗಳಲ್ಲಿ ಶೇ.80ರಷ್ಟು ಪ್ರಕರಣಗಳು ಫೋನ್ ಕದ್ದಾಲಿಕೆಯಿಂದ ಪತ್ತೆಯಾಗು ತ್ತಿವೆ. ಕಾನೂನಿನ ಪ್ರಕಾರ ಪೊಲೀಸರನ್ನು ಹೊರತುಪಡಿಸಿ, ಯಾವುದೇ ಖಾಸಗಿ ಸಂಘ- ಸಂಸ್ಥೆ ಅಥವಾ ವ್ಯಕ್ತಿಗೆ ಫೋನ್ ಕದ್ದಾಲಿಕೆಗೆ ಅನುಮತಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಜೆ.ಬಿ.ರಂಗಸ್ವಾಮಿ ಮಾತನಾಡಿ, ಅಪರಾಧ ವರದಿಗಾರಿಕೆ ರೋಚಕವಾಗಿರದೇ ಸತ್ಯಾಂಶದಿಂದ ಕೂಡಿರಬೇಕು. ಅಪರಾಧ ವರದಿಗಾರರಿಗೆ ಕಾನೂನಿನ ಅರಿವು ಅಗತ್ಯ. ಅಪ್ರಾಪ್ತರ ಹೆಸರು, ಭಾವಚಿತ್ರ ಪ್ರಕಟಿಸ ಬಾರದು. ಅಲ್ಲದೆ ದೌರ್ಜನ್ಯಕ್ಕೊಳಗಾದ ಮಹಿಳೆಯರ ಚಿತ್ರವನ್ನು ಪ್ರಕಟಿಸುವುದ ರಿಂದ ಪತ್ರಕರ್ತರಿಗೂ ಕಾನೂನು ತೊಡಕು ಎದುರಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಉಪಾಧ್ಯಕ್ಷ ಸುಬ್ರಹ್ಮಣ್ಯ, ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಇದ್ದರು.

Translate »