ಮೇ 24 ರಿಂದ ಮೈಸೂರಲ್ಲಿ ಮಾವು, ಹಲಸು ಮೇಳ
ಮೈಸೂರು

ಮೇ 24 ರಿಂದ ಮೈಸೂರಲ್ಲಿ ಮಾವು, ಹಲಸು ಮೇಳ

May 15, 2019

ಮೈಸೂರು: `ಹಸಿದು ಹಲಸು ತಿನ್ನು… ಉಂಡು ಮಾವು ತಿನ್ನು…’ ಎಂಬ ಗಾದೆ ಮಾತಿದೆ. ಇದನ್ನು ಕೇಳಿದರೆ ಸಾಕು ಈ ಹಣ್ಣುಗಳ ಮಹತ್ವ ಏನೆಂಬುದು ಅರಿವಿಗೆ ಬಾರದಿರದು.

ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಹಲಸಿನ ಘಮಲು ಕೂಡ ಸೂಸತೊಡಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಈ ಹಣ್ಣುಗಳ ಬೆಳೆಗಾರ ರಿಗೆ ಉತ್ತಮ ದರ ದೊರಕುವಂತೆ ಮಾಡುವುದು ಹಾಗೂ ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶದೊಂದಿಗೆ ತೋಟಗಾರಿಕೆ ಇಲಾಖೆ ಅನೇಕ ವರ್ಷಗಳಿಂದ ಮಾವು ಮತ್ತು ಹಲಸು ಮೇಳ ಏರ್ಪಡಿಸುತ್ತಿದೆ.

ಅದೇ ರೀತಿ ಈ ಸಾಲಿನ ಮಾವು ಮತ್ತು ಹಲಸು ಮೇಳ ಮೇ 24ರಿಂದ 28ರವರೆಗೆ ಕರ್ಜನ್ ಪಾರ್ಕ್ ಆವರಣ ದಲ್ಲಿ ನಡೆಯಲಿದೆ. ಕಳೆದ ವರ್ಷ ಜೂ.1ರಿಂದ 5ರವರೆಗೆ ಆಯೋಜಿಸಿದ್ದ ಮೇಳದಲ್ಲಿ 70ರಿಂದ 80 ಟನ್ ಮಾವಿನ ಹಣ್ಣು ಮಾರಾಟವಾಗಿದ್ದರೆ, 4ರಿಂದ 5 ಟನ್ ಹಲಸಿನ ಹಣ್ಣು ಮಾರಾಟವಾಗಿತ್ತು. ಜೊತೆಗೆ ಮೇಳಕ್ಕೆ 10 ಸಾವಿರಕ್ಕೂ ಹೆಚ್ಚು ಗ್ರಾಹಕರು ಭೇಟಿ ನೀಡಿದ್ದರು ಎನ್ನುತ್ತಿವೆ ತೋಟಗಾರಿಕೆ ಇಲಾಖೆ ಅಂಕಿ ಅಂಶಗಳು.

ಏರಲಿದೆಯೇ ಬೆಲೆ?: ಇಳುವರಿ ಕಡಿಮೆ ಯಾದ ಹಿನ್ನೆಲೆಯಲ್ಲಿ ಈ ಬಾರಿಯ ಮೇಳದಲ್ಲಿ ಹಣ್ಣುಗಳ ಬೆಲೆಯಲ್ಲಿ ಕಳೆದ ವರ್ಷಗಿಂತ ಏರಿಕೆಯಾಗುವ ಸಂಭವ ಇದೆ ಎನ್ನಲಾಗಿದೆ. ಸದ್ಯ ಬೆಲೆ ನಿಗದಿ ಪ್ರಕ್ರಿಯೆ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಯಾವ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತವಾಗಿ ಸ್ವಾಭಾವಿಕವಾಗಿ ಮಾಗಿಸಿದ ಅಥವಾ ಪರಿಸರ ಸ್ನೇಹಿ ಎಥೇಲಿನ್ ಉಪಚಾರ ದಿಂದ ಮಾಗಿಸಿದ ಮಾವಿನ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ಗ್ರಾಹಕರು ಯೋಗ್ಯ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಮೇಳದಿಂದ ಸಾಧ್ಯವಾಗಲಿದೆ ಎನ್ನುತ್ತವೆ ತೋಟಗಾರಿಕೆ ಇಲಾಖೆಯ ಮೂಲಗಳು.

ಕಳೆದ ವರ್ಷದ ಮೇಳದಲ್ಲಿ ಒಟ್ಟು 36 ಮಳಿಗೆಗಳಲ್ಲಿ ಮಾವು ಮತ್ತು ಹಲಸು ಮಾರಾಟವಾಗಿದ್ದವು. ವಿವಿಧ ತಳಿಗಳ ಮಾವು ಮತ್ತು ಹಲಸಿನ ಹಣ್ಣುಗಳು ಗ್ರಾಹ ಕರನ್ನು ಸೆಳೆದು ಮೇಳ ಯಶಸ್ವಿಯಾಗಿತ್ತು. ಬಾದಾಮಿ 50 ರೂ., ರಸಪುರಿ 40 ರೂ., ಮಲ್ಲಿಕಾ 50 ರೂ., ಸೆಂದೂರಾ 25 ರೂ., ತೋತಾಪುರಿ 20 ರೂ., ಬಾಗನಪಲ್ಲಿ 40 ರೂ., ದಶೇರಿ 50 ರೂ., ಆಮ್ರಪಾಲಿ 60 ರೂ., ಸಕ್ಕರೆ ಗುತಿ 60 ರೂ. ಹಾಗೂ ರಾಜೇಶ್ವರಿ 35 ರೂ. ದರವನ್ನು ಕೆಜಿಯೊಂದಕ್ಕೆ ಕಳೆದ ವರ್ಷ ನಿಗದಿ ಮಾಡಲಾಗಿತ್ತು. ಅದೇ ರೀತಿ ವಿವಿಧ ತಳಿಯ ಹಲಸಿಗೆ 5 ತೊಳೆಗೆ 10 ರೂ. ನಿಗದಿ ಮಾಡಲಾಗಿತ್ತು.

ಸಭೆ: ಮೈಸೂರಿನ ಕರ್ಜನ್ ಪಾರ್ಕ್ ಆವರಣದಲ್ಲಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಸಭಾಂ ಗಣದಲ್ಲಿ ಇಲಾಖೆ ವತಿಯಿಂದ ಮಾವು ಬೆಳೆಗಾರರು, ವರ್ತಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ಮಾವು ಮಾಗಿಸುವ ಸಂಬಂಧ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಬಳಿಕ ಮಾವು ಮತ್ತು ಹಲಸು ಮೇಳ ಆಯೋಜಿ ಸುವ ಸಂಬಂಧ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಂತಿಮವಾಗಿ ಮೇ 24ರಿಂದ 28ರವರೆಗೆ ಮೇಳ ನಡೆಸಲು ನಿರ್ಧರಿಸಲಾಯಿತು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಯೂ ಆದ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಎಸ್. ಚಿದಂಬರ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ (ರಾಜ್ಯ ವಲಯ) ಅಭಿಬಾ ನಿಷಾದ್, ಉಪ ನಿರ್ದೇಶಕ ಸಂಜಯ್, ಎಪಿಎಂಸಿ ಕಾರ್ಯ ದರ್ಶಿ ಗಿರೀಶ್, ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ಸೇರಿದಂತೆ ಮೈಸೂರು, ಮಂಡ್ಯ ಹಾಗೂ ರಾಮನಗರದ ಮಾವು ಹಾಗೂ ಹಲಸು ಬೆಳೆಗಾರರು ಪಾಲ್ಗೊಂಡಿದ್ದರು.

Translate »