ಮೌಲ್ಯಮಾಪಕರ ಎಡವಟ್ಟು…ಆಕೆಯ ಅತೀವ ವಿಶ್ವಾಸ ಗಣಿತದಲ್ಲಿ 100ಕ್ಕೆ 100 ಅಂಕ ತಂದು ಕೊಟ್ಟಿತು!
ಮೈಸೂರು

ಮೌಲ್ಯಮಾಪಕರ ಎಡವಟ್ಟು…ಆಕೆಯ ಅತೀವ ವಿಶ್ವಾಸ ಗಣಿತದಲ್ಲಿ 100ಕ್ಕೆ 100 ಅಂಕ ತಂದು ಕೊಟ್ಟಿತು!

May 15, 2019

ಮೈಸೂರು: ಉತ್ತರ ಪತ್ರಿಕೆ ಫೋಟೋ ಕಾಪಿಗೆ ಅರ್ಜಿ ಹಾಕಿದ ವೇಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಗಣಿತ ವಿಷಯ ದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಹೆಚ್ಚುವರಿಯಾಗಿ 30 ಅಂಕ ಬಂದಿದೆ.

ಮೈಸೂರಿನ ವಿದ್ಯಾರಣ್ಯಪುರಂನ ಶ್ರೀ ರಾಮಲಿಂಗೇಶ್ವರ ದೇವ ಸ್ಥಾನ ಬಳಿಯ ನಿವಾಸಿ ವಿ.ಮೋಹನ್ ಅವರ ಪುತ್ರಿ ಎಂ.ಮೇಘನಾ ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆ ವಿದ್ಯಾರ್ಥಿನಿ. ಫಲಿತಾಂಶ ಪ್ರಕಟವಾದಾಗ ಸಂಸ್ಕøತದಲ್ಲಿ 125, ಇಂಗ್ಲೀಷ್‍ನಲ್ಲಿ 98, ಕನ್ನಡದಲ್ಲಿ 99, ವಿಜ್ಞಾನದಲ್ಲಿ 97, ಸಮಾಜ ವಿಜ್ಞಾನ ವಿಷಯದಲ್ಲಿ 99 ಅಂಕ ಬಂದಿತ್ತಾದರೂ, ಗಣಿತ ವಿಷಯದಲ್ಲಿ ಕೇವಲ 70 ಅಂಕ ಗಳಿಸಿದ್ದಳು.

ಪ್ರತಿಭಾವಂತ ವಿದ್ಯಾರ್ಥಿನಿಯಾದ ಮೇಘನಾಳಿಗೆ ತಾನು ಗಣಿತ ವಿಷಯದಲ್ಲೂ ನಿಖರ ಉತ್ತರವನ್ನೇ ಬರೆದಿದ್ದು, ನೂರಕ್ಕೆ ನೂರು ಅಂಕಗಳು ಬರಲೇಬೇಕು. ಎಲ್ಲೋ ಸಮಸ್ಯೆಯಾಗಿದೆ ಎಂದು ಅಂದುಕೊಂಡು, 405 ರೂ. ಶುಲ್ಕ ಪಾವತಿಸಿ ಗಣಿತ ವಿಷಯದ ಉತ್ತರ ಪತ್ರಿಕೆ ಫೋಟೋ ಪ್ರತಿ ಕೋರಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಅರ್ಜಿ ಸಲ್ಲಿಸಿದ್ದಳು.

ಅದರಂತೆ ಮಂಡಳಿಯು ಆಕೆಯ ಉತ್ತರ ಪತ್ರಿಕೆಯ ಪ್ರತಿಯನ್ನು ಕಳುಹಿಸಿಕೊಟ್ಟಿತು. ಅದನ್ನು ನೋಡಿದಾಗ ಪ್ರತೀ ಪುಟದ ಅಂಕಗಳನ್ನು ಕೂಡಿಸಿದಾಗ 100 ಅಂಕಗಳು ಬಂದಿರುವುದು ಪಕ್ಕಾ ಆಯಿತು. ಉತ್ತರ ಪತ್ರಿಕೆಯ ಪ್ರತೀ ಪುಟಗಳಲ್ಲಿ ನೀಡಿರುವ ಅಂಕಗಳನ್ನು ಕೂಡುವಾಗ ಮೌಲ್ಯಮಾಪಕರು 30 ಅಂಕಗಳು ಬಿಟ್ಟು ಹೋಗಿ ಕೇವಲ 70 ಅಂಕ ಎಂದು ನಮೂದಿಸಿರುವುದು ದೃಢಪಟ್ಟಿತು.

ಅದರಂತೆ ಮೇಘನಾ 625 ಅಂಕಗಳಿಗೆ 618 ಅಂಕಗಳನ್ನು ಗಳಿಸಿ ಸದ್ವಿದ್ಯಾ ಶಾಲೆಯ 3ನೇ ಟಾಪರ್ ಎನಿಸಿಕೊಂಡಿದ್ದಾಳೆÉ. ಈ ಕುರಿತು ‘ಮೈಸೂರು ಮಿತ್ರ’ನಿಗೆ ತನ್ನ ಸಂತಸ ಹಂಚಿಕೊಂಡ ಆಕೆ, ನನಗೆ ಗಣಿತದಲ್ಲಿ 100 ಅಂಕ ಬಂದೇ ಬರುತ್ತದೆ ಎಂಬ ನಂಬಿಕೆ ಇತ್ತು. ಆ ವಿಶ್ವಾಸದಿಂದಲೇ ಅಪ್ಪನಿಗೆ ಹೇಳಿ ಉತ್ತರ ಪತ್ರಿಕೆಯ ಫೋಟೋ ಕಾಪಿಗೆ ಅರ್ಜಿ ಸಲ್ಲಿಸಿದೆ. ನಾನಂದುಕೊಂಡದ್ದೇ ನಿಜವಾಯಿತು. ನನಗೀಗ ಸಂತೋಷ, ಜೊತೆಗೆ ಸಮಾಧಾನವಾಗಿದೆ ಎಂದಳು. ನಾನು ಸದ್ವಿದ್ಯಾ ಕಾಲೇಜಿನಲ್ಲೇ ಪಿಯುಸಿ ಸೈನ್ಸ್ ಓದಿ, ಒಳ್ಳೆಯ ಅಂಕ ಪಡೆದು ಮುಂದೆ ಏರೋನಾಟಿಕ್ ಇಂಜಿನಿಯರ್ ಆಗಬೇಕೆಂಬ ಆಸೆ ಇದೆ. ಕಷ್ಟಪಟ್ಟು ಓದಿ ಗುರಿ ಮುಟ್ಟುವವರೆಗೆ ಪ್ರಯತ್ನಿಸುತ್ತೇನೆ ಎಂದು ಮೇಘನಾ ತಿಳಿಸಿದಳು. ಬಿಲ್ಡಿಂಗ್ ಕಂಟ್ರಾಕ್ಟರ್ ಆದ ಆಕೆಯ ತಂದೆ ವಿ.ಮೋಹನ್ ಸಹ ತನ್ನ ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, ಮಗಳ ಓದಿಗೆ ಸಂಪೂರ್ಣ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.

Translate »