ಮೈಸೂರಲ್ಲಿ ರೌಡಿಗಳ ಮೇಲೆ ತೀವ್ರ ನಿಗಾ
ಮೈಸೂರು

ಮೈಸೂರಲ್ಲಿ ರೌಡಿಗಳ ಮೇಲೆ ತೀವ್ರ ನಿಗಾ

January 6, 2019

ಮೈಸೂರು: ರೌಡಿಗಳ ಮೇಲೆ ತೀವ್ರ ನಿಗಾವಹಿಸಿರುವ ಪೊಲೀಸರು, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಮೈಸೂರು ನಗರದಲ್ಲಿ ರೌಡಿ ಚಟುವಟಿಕೆಯನ್ನು ಸಂಪೂರ್ಣ ಹತ್ತಿಕ್ಕಲು ಕಾರ್ಯರೂಪಕ್ಕೆ ಬಂದಿರುವ ರೌಡಿ ಪ್ರತಿಬಂಧಕ ದಳವು ರೌಡಿಶೀಟರ್‍ಗಳ ಚಲನ-ವಲನಗಳ ಮೇಲೆ ನಿಗಾ ವಹಿಸಿದೆಯಲ್ಲದೆ, ಪ್ರತೀ ತಿಂಗಳು ಪರೇಡ್ ನಡೆಸಿ ಕಟ್ಟೆಚ್ಚರ ನೀಡುತ್ತಿದೆ ಎಂದು ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

ಕಾನೂನು ರೀತ್ಯಾ ಕ್ರಮ ಜರುಗಿಸಿದ ನಂತರವೂ ಪದೇ ಪದೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸ ಲಾಗುತ್ತಿದೆ ಎಂದಿರುವ ಅವರು, ಮೈಸೂರು ರೌಡಿ ಚಟುವಟಿಕೆ ಮುಕ್ತ ನಗರವನ್ನಾಗಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ರೌಡಿ ಶೀಟರ್‍ಗಳು ಸಾರ್ವಜನಿಕರಿಗೆ ತೊಂದರೆ ಕೊಟ್ಟಲ್ಲಿ, ಹಫ್ತಾ ವಸೂಲಿ, ಬಲವಂತ ರಿಯಲ್ ಎಸ್ಟೇಟ್ ದಂಧೆ, ಭೂ ಕಬಳಿಕೆ, ಹಲ್ಲೆ, ಬೆದರಿಕೆ, ಬ್ಲಾಕ್‍ಮೇಲ್ ಮಾಡಿದಲ್ಲಿ ಸಾರ್ವಜನಿಕರು ಸಿಸಿಬಿ ಘಟಕದಲ್ಲಿರುವ ರೌಡಿ ಪ್ರತಿಬಂಧಕ ದಳದ ಪೊಲೀಸ್ ಇನ್ಸ್‍ಪೆಕ್ಟರ್‍ರನ್ನು ಮೊಬೈಲ್ ದೂರವಾಣಿ ಸಂಖ್ಯೆ 9480802266 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ. 0821-2418339ಗೆ ಸಂಪರ್ಕಿಸುವಂತೆ ಕೋರಲಾಗಿದೆ.

ಇತ್ತೀಚೆಗೆ ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ವೇಳೆ 4ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಮಹೇಶ ಎಂಬುವರ ಮೇಲೆ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿದ್ದ ಆರೋಪಿಗಳಾದ ಲೋಕನಾ ಯಕ ನಗರದ ಅರ್ಜುನ ಅಲಿಯಾಸ್ ಮಲ್ಲಿಕಾರ್ಜುನ ಮತ್ತು ಕುಂಬಾರಕೊಪ್ಪಲಿನ ಡಿ.ಎಸ್.ದೀಪಕ್ ಗೌಡ ಅಲಿಯಾಸ್ ಮೋಹನ್ ವಿರುದ್ಧ ಮೇಟಗಳ್ಳಿ ಠಾಣೆಯಲ್ಲಿ ಒಂದು ತಿಂಗಳ ಹಿಂದಷ್ಟೇ ರೌಡಿಶೀಟರ್ ತೆರೆಯ ಲಾಗಿದ್ದು, ಅವರ ಚಲನ-ವಲನಗಳ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಎನ್.ಆರ್. ಉಪವಿಭಾಗದ ಎಸಿಪಿ ಸಿ.ಗೋಪಾಲ್ ತಿಳಿಸಿದ್ದಾರೆ.

ಈ ಇಬ್ಬರ ಮೇಲೆ ಹಿಂದೆಯೂ ಎರಡು ಹಲ್ಲೆ, ಬೆದರಿಕೆ ಪ್ರಕರಣಗಳು ಮೇಟಗಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ ಎಂದ ಅವರು, ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

Translate »