ಇಂದಿನಿಂದ `ಮಹಾಜನ’ದಲ್ಲಿ ಅಂತರ ಕಾಲೇಜು ಸ್ಪರ್ಧೆ `ಮಹಮ್’
ಮೈಸೂರು

ಇಂದಿನಿಂದ `ಮಹಾಜನ’ದಲ್ಲಿ ಅಂತರ ಕಾಲೇಜು ಸ್ಪರ್ಧೆ `ಮಹಮ್’

February 7, 2020

ಮೈಸೂರು,ಫೆ.6(ಪಿಎಂ)- ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ವತಿಯಿಂದ ಫೆ.7 ರಿಂದ 9ರವರೆಗೆ ಕಾಲೇಜಿನ ಆವರಣ ದಲ್ಲಿ ರಾಷ್ಟ್ರ ಮಟ್ಟದ ಅಂತರ ಕಾಲೇಜು `ಮಹಮ್-2020’ ಉತ್ಸವ ಏರ್ಪಡಿಸಲಾಗಿದೆ. ಈ ಬಗ್ಗೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಉತ್ಸವದ ಅಧ್ಯಾಪಕ ಸಂಯೋಜಕ ಡಾ.ಹೆಚ್.ಆರ್.ತಿಮ್ಮೇಗೌಡ, ಕಾಲೇಜಿನ ಇತಿ ಹಾಸದಲ್ಲೇ ಇಂಥ ಉತ್ಸವ ಇದೇ ಪ್ರಥಮ. 22 ಬಗೆಯ ಸ್ಪರ್ಧೆಗಳು ನಡೆಯಲಿವೆ. ಫೆ.7ರ ಬೆಳಿಗ್ಗೆ 9.30ಕ್ಕೆ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಉತ್ಸವಕ್ಕೆ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಚಾಲನೆ ನೀಡಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅತಿಥಿಯಾಗಿ ದ್ದರೆ, ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್ ಅಧ್ಯಕ್ಷತೆ ವಹಿ ಸಲಿದ್ದಾರೆ. ಸಂಜೆ 7ಕ್ಕೆ ಕಾಲೇಜಿನ ಜಗದೀಶ್ ಪ್ರಸಾದ್ ಕ್ರೀಡಾಂಗಣದಲ್ಲಿ ರಿಯಾಲಿಟಿ ಶೋದಲ್ಲಿ `ಕನ್ನಡ ಕೋಗಿಲೆ’ ಖ್ಯಾತಿಯ ರಕ್ಷಿತ್ ಪಾಣತ್ತಲೆ ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ. ನಂತರ `ಮೈಸೂರು ಎಕ್ಸ್‍ಪ್ರೆಸ್ ಬ್ಯಾಂಡ್’ನಿಂದ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. ಫೆ.8ರ ಸಂಜೆ 7ಕ್ಕೆ ಕನ್ನಡ ಚಲನಚಿತ್ರದ ಹಿನ್ನೆಲೆ ಗಾಯಕ ಸಂಜಿತ್ ಹೆಗ್ಡೆ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ರಸಪ್ರಶ್ನೆ, ಚರ್ಚಾಸ್ಪರ್ಧೆ, ಅಪರಾಧ ಪತ್ತೆ ಹಚ್ಚುವಿಕೆ, ಅತ್ಯುತ್ತಮ ವ್ಯವಸ್ಥಾಪಕ, ಮಾನವ ಸಂಪನ್ಮೂಲ, ಮಾರ್ಕೆಟಿಂಗ್, ಹಣಕಾಸು ಹಾಗೂ ಉದ್ಯಮ ಪರಿಣತಿ ವಿಭಾಗ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳ 50ಕ್ಕೂ ಹೆಚ್ಚು ಕಾಲೇಜುಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಹಲವು ಕಾಲೇಜುಗಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿವೆ. ವಿಜೇತ ವಿದ್ಯಾರ್ಥಿ ಹಾಗೂ ತಂಡಗಳಿಗೆ ಪಾರಿತೋಷಕ, ಪ್ರಮಾಣಪತ್ರ, ನಗದು ಬಹುಮಾನ ನೀಡಲಾಗುವುದು ಎಂದರು.

ಫೆ.9ರ ಮಧ್ಯಾಹ್ನ 3ಕ್ಕೆ ವಿವೇಕಾನಂದ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ನಟ `ಮುಖ್ಯಮಂತ್ರಿ’ ಚಂದ್ರು ಸಮಾರೋಪ ಭಾಷಣ ಮಾಡಲಿ ದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅತಿಥಿಯಾಗಿರುವರು. ಸಂಜೆ 7ಕ್ಕೆ ಜಗದೀಶ್ ಪ್ರಸಾದ್ ಕ್ರೀಡಾಂಗಣದಲ್ಲಿ ಮುಂಬೈನ ಡಿಜೆ ಶಾನ್ ಹಾಗೂ ಡಿಜೆ ಪ್ರಾಚ್ ಎಂದೇ ಖ್ಯಾತರಾಗಿರುವ ಪ್ರೀತಿ ಚೌಹಾಣ್ ಪಾಪ್ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮವಿದೆ ಎಂದು ಪ್ರಾಂಶುಪಾಲ ಎಸ್.ವೆಂಕಟರಾಮು ತಿಳಿಸಿದರು. ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಟಿ.ವಿಜಯಲಕ್ಷ್ಮಿ ಮುರುಳೀಧರ್, ಉಪ ಪ್ರಾಂಶುಪಾಲರಾದ ಬಿ.ಆರ್. ಜಯಕುಮಾರಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರವಿ ಅಯ್ಯರ್ ಗೋಷ್ಠಿಯಲ್ಲಿದ್ದರು.

Translate »