ಏ.5ರಿಂದ ಮೈಸೂರಲ್ಲಿ `ಆರೋಗ್ಯವೇ ಭಾಗ್ಯ’  ಕುರಿತ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ
ಮೈಸೂರು

ಏ.5ರಿಂದ ಮೈಸೂರಲ್ಲಿ `ಆರೋಗ್ಯವೇ ಭಾಗ್ಯ’ ಕುರಿತ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ

April 2, 2019

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಸಹಯೋಗ ದೊಂದಿಗೆ ಸೌಖ್ಯ ಫೌಂಡೇಷನ್ ವತಿಯಿಂದ ಮೈಸೂರಿನ ರಿಯೋ ಮೆರಿಡಿಯನ್ ಹೋಟೆಲ್‍ನಲ್ಲಿ ಏ.5ರಿಂದ ಮೂರು ದಿನಗಳ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಿಎಸ್‍ಎಸ್ ಸಂಸ್ಥೆಯ ಶ್ರೀಹರಿ ತಿಳಿಸಿದರು.

ಆರೋಗ್ಯವೇ ಭಾಗ್ಯ ವಿಷಯ ಕುರಿತ ಈ ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಮಲೇ ಷಿಯಾ ಮತ್ತು ಇಂಡೋನೇಷಿಯಾ ಇನ್ನಿತರ ರಾಷ್ಟ್ರಗಳ ತಜ್ಞರು ಸೇರಿದಂತೆ 400ಕ್ಕೂ ಹೆಚ್ಚಿನ ಆಸಕ್ತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಹಿಂದೆಲ್ಲ ಕೊಚ್ಚಿನ್ ನಗರದಲ್ಲಿ ನಡೆಯುತ್ತಿದ್ದ ಈ ಸಮ್ಮೇಳನ ಈಗ ಮೈಸೂರಿನಲ್ಲಿ ನಡೆಯುತ್ತಿದೆ. ವೈದ್ಯರು ತಮ್ಮ ಸಂಶೋಧನೆಯ ಮಾಹಿತಿ ನೀಡಲಿದ್ದಾರೆ. ಈವರೆಗೂ ಇಂಗ್ಲಿಷ್ ಔಷಧಿಗಳ ಮೊರೆ ಹೋಗಿದ್ದವರು ಈಗ ಆಯುರ್ವೇದ, ಸಿದ್ಧ, ಯುನಾನಿ ಮೊದಲಾದವುಗಳತ್ತಲೂ ಗಮನ ಹರಿಸುತ್ತಿದ್ದು, ಕಾಯಿಲೆ ಬರುವ ಮುನ್ನವೇ ಆಹಾರ ಮೊದಲಾದವುಗಳ ವಿಷಯಗಳಲ್ಲಿ ವಹಿಸಬೇಕಾದ ಜಾಗೃತಿ ಬಗ್ಗೆ, ಈ ಪದ್ಧತಿಗಳ ಅನುಕೂಲಗಳ ಬಗ್ಗೆ ಸಮ್ಮೇಳನ ಮಹತ್ವದ ಅರಿವು ಮೂಡಿಸಲಿದೆ ಎಂದರು.
ಏ.7ರಂದು ಮಾನಸಗಂಗೋತ್ರಿ ಬಿ.ಎನ್.ಬಹದ್ದೂರ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸೈನ್ಸಸ್‍ನಲ್ಲಿ ಪೌಷ್ಠಿಕಾಂಶ ಮತ್ತು ಪರಿಸರ ಔಷಧ ಹಾಗೂ ಆರೋ ಗ್ಯದ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಸಾದ್, ಜಯಕೃಷ್ಣ, ಬಿಂದು, ಲಸಿತಾ ಉಪಸ್ಥಿತರಿದ್ದರು.

Translate »