ಮೈಸೂರು: ಇರ್ವಿನ್ ರಸ್ತೆ ಅಗಲೀಕರಣ ಪ್ರಕ್ರಿಯೆ ಆರಂಭಿಸಿರುವ ಮೈಸೂರು ಮಹಾನಗರ ಪಾಲಿಕೆಯು ಈಗಾಗಲೇ ರಸ್ತೆಯ ಇಕ್ಕೆಲಗಳ 34 ಕಟ್ಟಡಗಳನ್ನು ಭಾಗಶಃ ನೆಲಸಮ ಗೊಳಿಸಿದೆ. ಲಷ್ಕರ್ ಪೊಲೀಸ್ ಠಾಣೆ ಸರ್ಕಲ್‍ನಿಂದ ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ನಡುವೆ ಸುಮಾರು 85 ಮಾಲೀಕರ ಕಟ್ಟಡಗಳ ಪೈಕಿ 50 ಆಸ್ತಿಗಳನ್ನು ಪಾಲಿಕೆ ಖರೀದಿಸಿ, ನೋಂದಣಿ ಮಾಡಿಸಿದ್ದು, ಆ ಪೈಕಿ 34 ಕಟ್ಟಡಗಳ ಭಾಗಶಃ ನೆಲಸಮಗೊಳಿಸಲಾಗಿದೆ ಎಂದು ಪಾಲಿಕೆ ಅಭಿವೃದ್ಧಿ ಅಧಿಕಾರಿ ನಾಗರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ಪ್ರತೀ ದಿನ ದರ ಪಾವತಿಸಿ ಮಾಲೀಕರಿಂದ ಖರೀದಿಸಿ ಆಸ್ತಿಗಳ ನೋಂದಣಿ ಕಾರ್ಯ ನಡೆಯುತ್ತಿದ್ದು, ಕಟ್ಟಡಗಳನ್ನು ನೆಲಸಮಗೊಳಿಸಲಾಗುತ್ತಿದೆ. ಇರ್ವಿನ್ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದೂ ತಿಳಿಸಿದರು.
ನ್ಯಾಯಾಲಯದಿಂದ 3 ಕಟ್ಟಡಗಳಿಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶವಿರುವ ಕಾರಣ ಅವುಗಳನ್ನು ಹೊರತುಪಡಿಸಿ ಉಳಿದ ಕಟ್ಟಡಗಳ ಖರೀದಿ ಪ್ರಕ್ರಿಯೆಯನ್ನು ವಲಯ ಆಯುಕ್ತರಾದ ಗೀತಾ ಉಡೇದ ಅವರು ಮುಂದುವರೆಸಿದ್ದಾರೆ ಎಂದೂ ನಾಗರಾಜು ಹೇಳಿದರು. ನ್ಯಾಯಾಲಯದ ಪ್ರಕರಣ ಇತ್ಯರ್ಥಗೊಳಿಸಿ ಉಳಿದೆಲ್ಲಾ ಆಸ್ತಿಗಳನ್ನೂ ನೋಂದಣಿ ಮಾಡಿಸಿಕೊಂಡು ಇನ್ನೊಂದು ತಿಂಗಳೊಳಗಾಗಿ ರಸ್ತೆ ಅಗಲೀಕರಣಕ್ಕೆ ಗುರುತು ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸಿದ ನಂತರ ಸಿವಿಲ್ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದೂ ತಿಳಿಸಿದರು.