ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭಾರತರತ್ನ ಗೌರವಕ್ಕೆ ಅರ್ಹರಲ್ಲವೆ?
“ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನವನ್ನು ದೇಶಕಂಡ ಅಪ್ರತಿಮ ದೇಶಭಕ್ತ ವೀರ ಸೇನಾನಿ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ’ನವರಿಗೆ ಕೊಡಬೇಕು. ನಾನು ಈ ಬಗ್ಗೆ ಪ್ರಾಮಾಣಿಕವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ’’ ಈ ಮಾತನ್ನು ಮೊನ್ನೆ ಹೇಳಿದ್ದು ದೇಶದ ಭೂಸೇನೆಯ ಮಹಾ ದಂಡನಾಯಕ ಜನರಲ್ ಬಿಪಿನ್ ರಾವತ್. ಇವರು ವೀರ ಸೇನಾನಿಯ ಜನ್ಮ ಭೂಮಿ ಕೊಡಗಿನ ಗೋಣಿಕೊಪ್ಪಲಿನಲ್ಲಿ ಫೀಲ್ಡ್‍ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ತುಂಬಿ ತುಳುಕುತ್ತಿದ್ದ ನಿವೃತ್ತ ಯೋಧರು ಮತ್ತು ಕೊಡವರನ್ನು ಸಾಕ್ಷೀಕರಿಸಿ ಹೇಳಿದ್ದರು.
ಇದು ವಾಹಿನಿಗಳಲ್ಲಿ ಸುದ್ದಿಯಾಗಿದ್ದೆ ತಡ, ಆ ಕ್ಷಣದಲ್ಲಿ ಕಾಂಗ್ರೇಸಿನ ವಕ್ತಾರ ಸಿಂಗ್ವಿ ಪ್ರತಿಕ್ರಿಯಿಸಿ “ಜನರಲ್ ಬಿಪಿನ್ ರಾವತ್‍ಗೆ ಏನು ಕೆಲಸವಿದೆಯೋ ಅದನ್ನು ಮಾಡಿಕೊಂಡು ಹೋಗಲಿ, ಆಡಳಿತಾತ್ಮಕ ವ್ಯವಹಾರದಲ್ಲಿ ಮೂಗು ತೂರಿಸುವ ಅಗತ್ಯ ಅವರಿಗಿಲ್ಲ”. ಭಾರತ ರತ್ನ ಕೊಡುವುದು ಪುಢಾರಿಗಳಿಗೆ ಮಾತ್ರ ಸಂಬಂಧಿಸಿದ್ದು ಎಂಬ ಅರ್ಥದಲ್ಲಿ ಹೇಳಿಬಿಟ್ಟರು.
ಇದು ಒಬ್ಬ ವೀರ ದೇಶಭಕ್ತ ಸೇನಾನಿಗೆ ಕಾಂಗ್ರೆಸ್ ಮಾಡಿದ ಅವಮಾನ. ಇಂದು ಭಾರತ ರತ್ನ ಪ್ರಶಸ್ತಿ ಮಾರಾಟಕ್ಕೆ ಇಟ್ಟಂತೆ ಕೊಟ್ಟಿದ್ದು ಇದೆ. ಕಾಂಗ್ರೆಸ್ಸಿಗರಿಗೆ ದೇಶಭಕ್ತಿ ಎಂದರೆ ಕನ್ನಯ್ಯನನ್ನು ಅಪ್ಪಿ ಮುದ್ದಾಡು ವುದು, ಓಟಿಗಾಗಿ ದೇಶವನ್ನು ದುರ್ಬಲಗೊಳಿಸು ವುದು ಎಂಬಂತಾಗಿದೆ.
ಹಾಗೆ ನೋಡಿದರೆ ಕಾಂಗ್ರೆಸಿಗರಿಗೆ ಕಾರ್ಯಪ್ಪ ಮತ್ತು ತಿಮ್ಮಯ್ಯರ ಮೇಲಿನ ದ್ವೇಷ ಇನ್ನೂ ಕಡಿಮೆ ಆದಂತಿಲ್ಲ. ನೆಹರುವಿನಿಂದ ಇಂದಿನವರೆಗೆ ಈ ವೀರ ಸೇನಾನಿಗಳನ್ನು ಅಪಮಾನಿಸಿ ಹೆಮ್ಮೆ ಪಟ್ಟುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ದೇಶಕಂಡ ಮಹಾನ್ ದೇಶಭಕ್ತ. ಸ್ವತಂತ್ರ ಭಾರತದ 3 ಸೇನೆಯ ಪ್ರಥಮ ಮಹಾ ದಂಡನಾಯಕರಾಗಿ, ಒಬ್ಬ ಜಾತ್ಯಾ ತೀತ ಯೋಧನಾಗಿ ಹಿಂದು-ಮುಸ್ಲಿಂ ಸೈನಿಕರನ್ನು ಸಮನಾಂತರವಾಗಿ ಪ್ರೀತಿಸಿ ಗೌರವಿಸಿದವರು. ಭಾರತ-ಪಾಕಿಸ್ತಾನ ಎಂದು ದೇಶ ವಿಭಜನೆಯ ಸಂದರ್ಭದಲ್ಲಿ ಇಡೀ ದೇಶ ಕೋಮು ದಳ್ಳುರಿಯಲ್ಲಿ ಬೆಂದು ಹೋಗುತ್ತಿದ್ದಾಗ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬಿ ದೇಶ ರಕ್ಷಿಸಿದವರು.
ಜವಾಹರಲಾಲ್ ನೆಹರುರವರ ಕಮ್ಯುನಿಸ್ಟ್ ಪ್ರೇರಿತ ನೀತಿಯನ್ನು ಮನಸ್ಸಿಲ್ಲದ ಮನಸ್ಸಿನಿಂದ ಸಹಿಸಿಕೊಂಡು, ಭಾರತೀಯ ಸೇನೆಯನ್ನು ಬಲಿಷ್ಟಗೊಳಿಸಲು ಸೆಣಸಿದವರು. “ನನಗೆ ಜನ್ಮ ನೀಡಿದ ತಾಯಿ ನನ್ನ ಮೊದಲ ತಾಯಿಯಾದರೆ, ಈ ಭಾರತ ನನ್ನ ಎರಡನೇ ತಾಯಿ” ಎಂದ ಪ್ರಾಮಾಣಿಕ ಸೇನಾನಿ. ಯುದ್ಧದ ಸಂದರ್ಭದಲ್ಲಿ ಕಚೇರಿಯಲ್ಲಿ ಕುಳಿತು ಆದೇಶ ನೀಡದೆ ಸಾಮಾನ್ಯ ಯೋಧರ ಮಧ್ಯೆ ಓಡಾಡುತ್ತಾ ಈ ದಂಡನಾಯಕ ನಿಮ್ಮ ಹಾಗೆ ನಾನೂ ಒಬ್ಬ ಸೈನಿಕ ಎನ್ನುವುದನ್ನು ಕಾರ್ಯರೂಪಕ್ಕೆ ತಂದವರು. ಆ ಕಾರಣಕೇನೋ ಎಂಬಂತೆ ಅವರು ನಿವೃತ್ತರಾದ ಮೇಲೂ ಅವರ ಕೊಡಗಿನ ಮನೆ ರೋಷನಾರ್‍ನಲ್ಲಿ ಒಬ್ಬ ಸೈನಿಕನ ವಿಗ್ರಹವಿಟ್ಟು, ಬೆಳಿಗ್ಗೆ ಮೊದಲು ಅವನಿಗೆ ಸೆಲ್ಯೂಟ್ ಮಾಡುತ್ತಿದ್ದುದು. ತನ್ನ ನಿವೃತ್ತಿಯ ನಂತರವು ನಾಡು, ನುಡಿ, ಸಂಸ್ಕøತಿಗೆ, ನಿಷ್ಠರಾಗಿ ಇದ್ದವರು. ಪಾಕಿಸ್ತಾನದ 2ನೇ ಯುದ್ಧದಲ್ಲಿ ತನ್ನ ಮಗ ಏರ್‍ಮಾರ್ಷಲ್ ಕೆ.ಸಿ.ನಂದ ಪಾಕಿ ಸ್ತಾನದ ಯುದ್ಧ ಬಂಧಿಯಾದಾಗ, ಅಲ್ಲಿನ ಜನರಲ್ ಅಯೂಬುಖಾನ್ ಇವರು ಕಾರ್ಯಪ್ಪನವರ ಮಗ ಎಂದು ತಿಳಿದು “ಕಾರ್ಯಪ್ಪಾಜಿ ನಿಮ್ಮ ಮಗ ಎಂದು ಇದೀಗ ತಿಳಿಯಿತು, ನೀವು ಹೇಳಿದರೆ ಬಿಟ್ಟುಬಿಡುತ್ತೇನೆ. ಇದು ನಮ್ಮ ಸ್ನೇಹದ ಕುರುಹು” ಎಂದಾಗ ಸಿಡಿದೆದ್ದ ಕಾರ್ಯಪ್ಪ “ಭಾರತೀಯ ಸೇನೆಯಲ್ಲಿರುವ ಎಲ್ಲರೂ ನನ್ನ ಮಕ್ಕಳೇ, ನನ್ನ ಮಗನಿಗೆ ಇಂತಹ ವಿಶೇಷತೆ ಬೇಡ, ನಿಮಗೆ ತೋಚಿದಂತೆ ಮಾಡಿ’’ ಎಂದ ದೇಶಭಕ್ತ.
ನೆಹರು ಕುಟಿಲ ನೀತಿಗೆ ಅನೇಕ ಬಾರಿ ಛಾಟಿ ಬೀಸಿದ್ದ ಕಾರ್ಯಪ್ಪನವರನ್ನು ಸಾಕಷ್ಟು ಬಾರಿ ತೇಜೋವಧೆ ಮಾಡಲು ಸರ್ಕಾರಿ ಮಟ್ಟದಲ್ಲಿ ಯತ್ನ ನಡೆದಿದೆ. “ಕಾಂಗ್ರೆಸ್ ಭಾರತೀಯ ಸೈನ್ಯವನ್ನು ಗುಲಾಮರನ್ನಾಗಿ ಮಾಡಿಬಿಡುತ್ತದೆ’’ ಎಂದು ಹಲುಬುತ್ತಾ ಕಾರ್ಯಪ್ಪ ಕಾಂಗ್ರೆಸ್ ವಿರುದ್ಧ ಮುಂಬೈ ಕ್ಷೇತ್ರದಿಂದ ಸಂಸತ್ತಿಗೆ ಶಿವಸೇನೆ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು. ಕಾರ್ಯಪ್ಪ ಒಬ್ಬ ಬಲಪಂಥೀಯ ಎಂಬ ಹಣೆಪಟ್ಟಿಯನ್ನು ಕಾಂಗ್ರೆಸ್ಸಿಗರು ಕಟ್ಟಿದ್ದರು.
ಇನ್ನು ಜನರಲ್ ತಿಮ್ಮಯ್ಯ. ಭಾರತೀಯ ಸೇನೆಯ ‘ಟಿಮ್ಮಿಟೈಗರ್’ ಎಂದೇ ಖ್ಯಾತಿ. ಸೇನೆಯ ಕಟ್ಟ ಕಡೆಯ ಯೋಧನಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿಯ ತನಕ ಎಲ್ಲರಿಂದ ಪ್ರೀತಿ ಗೌರವಗಳನ್ನು ಪಡೆಯು ವಂತಹ ಅಪರೂಪದ ಗುಣಗಳಿದ್ದ ಸೇನಾನಿ. 2ನೇ ವಿಶ್ವಯುದ್ಧದಲ್ಲಿ ಫೀಲ್ಡ್ ಕಮಾಂಡರ್ ಆಗಿ ಭಾಗವಹಿ ಸಿದ್ದ ಮೊದಲನೆಯ ಮತ್ತು ಏಕೈಕ ಭಾರತೀಯ ಅಧಿಕಾರಿ. ಯುದ್ಧದಲ್ಲಿ ಜನರಲ್ ತಿಮ್ಮಯ್ಯ ತೋರ್ಪಡಿಸಿದ ಸಾಹಸವನ್ನು ಬ್ರಿಟಿಷ್ ಸೇನೆ ಕೊಂಡಾಡಿತ್ತು, ಬಿರುದು ನೀಡಿ ಗೌರವಿಸಿತ್ತು. ಒಬ್ಬ ದಕ್ಷಿಣ ಭಾರತದ ಸೈನ್ಯದ ಅಧಿಕಾರಿಯನ್ನು ಗೌರವಿಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿದ್ದ ವಾತಾವರಣದಲ್ಲಿ ಉತ್ತರ ಭಾರತದ ಯಾಕೆ ಭಾರತದ ಸಂಪೂರ್ಣ ಸೈನಿಕರು ಜನರಲ್ ತಿಮ್ಮಯ್ಯರನ್ನು ‘ನಮ್ಮ ಟಿಮ್ಮಿ’ ಎಂಬ ಗೌರವದಿಂದ ಆರಾಧಿಸಿದ್ದರು.
1947ರ ದೇಶ ವಿಭಜನೆ ಸಂದರ್ಭದಲ್ಲಿ ಎದ್ದ ಭಯಾನಕ ಕೋಮು ಗಲಭೆಯಲ್ಲಿ ಎಲ್ಲರೂ ಕಂಗಾ ಲಾಗಿದ್ದಾಗ ದೇಶದ ಸೇನೆಯಲ್ಲಿ ನಂಬಿಕೆ ಇಟ್ಟಿದ್ದು ಕಾರ್ಯಪ್ಪ – ತಿಮ್ಮಯ್ಯರಲ್ಲಿ ಮಾತ್ರ. 1948ರಲ್ಲಿ ಕಾಶ್ಮೀರದಲ್ಲಿ ಪಾಕಿಸ್ತಾನಿಯರಿಂದ ಗಡಿಗೆ ಬೆಂಕಿ ಬಿದ್ದಾಗ ಆ ತನಕ ಯಾರೂ ಕಾಲು ಇಡದೇ ಇದ್ದ ಮಂಜುಗಡ್ಡೆ ಪರ್ವತಗಳಲ್ಲಿ ಖುದ್ದಾಗಿ ನಿಂತು ತನ್ನ ಸೈನಿಕರನ್ನು ಹುರಿದುಂಬಿಸಿ ವಿಜಯ ಸಾಧಿಸಿದ ಮಹಾನ್ ಸೇನಾನಿ ತಿಮ್ಮಯ್ಯ.
‘ಹಿಮಾಲಯನ್ ಬ್ಲಂಡರ್’ ಎಂಬ ವಾರ್ ರಿಪೋರ್ಟ್ ಪುಸ್ತಕ ಬರೆದ ಬ್ರಿಗೇಡಿಯರ್ ಜಾನ್ ಪರಶುರಾಮ್ ದಳವಿ ಹೇಳುತ್ತಾರೆ “ಅಂದು ನೆಹರು ಸರ್ಕಾರ ಜನರಲ್ ತಿಮ್ಮಯ್ಯರಿಗೆ ಪೂರ್ಣ ಸಹಕಾರ ಕೊಟ್ಟಿದ್ದರೆ, “ಪಾಕ್ ಆಕ್ರಮಿತ ಕಾಶ್ಮೀರ’’ ಎಂಬ ಭೂಭಾಗವನ್ನು ಗೆದ್ದು ಭಾರತದ ಭೂಪಟದಲ್ಲಿ ಸೇರಿಸಿ ಬಿಡುತ್ತಿದ್ದರು. ಸಿಂಹ ಘರ್ಜನೆಯೊಂದಿಗೆ ತನ್ನ ಸೈನಿಕರನ್ನು ಹುರಿದುಂಬಿಸುತ್ತಾ ಪಾಕಿಸ್ತಾನದತ್ತ ನುಗ್ಗುತ್ತಿದ್ದ ತಿಮ್ಮಯ್ಯ ಇನ್ನೇನು ಪೂರ್ಣ ಕಾಶ್ಮೀರ ಕೈವಶವಾಯಿತು ಎನ್ನುತ್ತಿದ್ದಾಗ ಶಾಂತಿದೂತ ಪ್ರಧಾನಿ ನೆಹರು ‘ಯುದ್ಧ ನಿಲ್ಲಿಸಿ’ ಎಂದು ಬಿಟ್ಟರು. ಕನಲಿ ಹೋದರು ತಿಮ್ಮಯ್ಯ. “ನಮ್ಮ ರಾಜಕಾರಣಿಗಳು ತಪ್ಪು ಮಾಡುತ್ತಿದ್ದಾರೆ. ಮುಂದೆ ಇದರ ಪರಿಣಾಮ ಘೋರ ಆಗಲಿದೆ. ಪಾಕ್ ಆಕ್ರಮಿತ ಕಾಶ್ಮೀರ ಬಗಲಿನ ಮುಳ್ಳಾಗಲಿದೆ ಎಚ್ಚರ’’ ಎಂದು ಯುದ್ಧ ಭೂಮಿಯಿಂದ ಹೊರಬಂದಿದ್ದರು.
ಜನರಲ್ ತಿಮ್ಮಯ್ಯ ಅಂದು ಆಡಿದ ಮಾತು ಇಂದು ಸತ್ಯವಾಗುತ್ತಿದೆ. “ಚೀನಾ ಗಡಿ ಉಲ್ಲಂಘಿಸುತ್ತಿದೆ. ಭಾರತದ ಸೇನೆಗೆ ಯುದ್ಧ ಸಾಮಾಗ್ರಿಗಳಿಲ್ಲ, ಆಧುನಿಕ ಫಿರಂಗಿಗಳಿಲ್ಲ, ಸರಿಯಾದ ಸಮವಸ್ತ್ರಗಳಿಲ್ಲ, ಇದಕ್ಕೆಲ್ಲಾ ಅನುದಾನ ಕಾಯ್ದಿರಿಸಿ”ಎಂದು ತಿಮ್ಮಯ್ಯ ಚೀನಾ ಯುದ್ಧದ ಸಂದರ್ಭದಲ್ಲಿ ಸರ್ಕಾರವನ್ನು ಅಂಗಲಾಚಿ ಬೇಡಿದರು. ಇದಕ್ಕೆ ನೆಹರು ಹಾಗೂ ಆಗಿನ ರಕ್ಷಣಾ ಮಂತ್ರಿ ಕೃಷ್ಣಮೆನನ್ “ಭಾರತದ ಕೆಲಸ ಯುದ್ಧ ಮಾಡುವುದಲ್ಲ, ಸ್ವಾತಂತ್ರ್ಯ ಗಳಿಸಿರುವುದು ಭಾರತದ ಅಭಿವೃದ್ಧಿಗೆ” ಎಂದು ತಿಮ್ಮಯ್ಯರನ್ನು ಗೇಲಿ ಮಾಡಿದ್ದರು.
ಚೀನಾ ಭಾರತದ ಗಡಿ ಉಲ್ಲಂಘಿಸುತ್ತಿದೆ, ಅಪಾಯ ಕಾದಿದೆ ಎಂದ ತಿಮ್ಮಯ್ಯರ ಎಚ್ಚರಿಕೆಗೆ ಇಂದು ಕಾಂಗ್ರೆಸಿನ ಸಿಂಗ್ವಿ ಎಂದಂತೆ ಅಂದು ಮೆನನ್ “ಸುಮ್ಮನೆ ಬಾಯಿ ಮುಚ್ಚಿ, ನಮಗೆ 1ನೇ ಶತ್ರು ಪಾಕಿಸ್ತಾನ, ಚೀನಾವಲ್ಲ” ಎಂದಿದ್ದರು. ಅದಕ್ಕೆ ತಿರುಗೇಟು ನೀಡಿದ ತಿಮ್ಮಯ್ಯ “ನಮ್ಮ ದೃಷ್ಟಿ ಭಾರತದ ರಕ್ಷಣೆ, ನಮಗೆ ಶತ್ರುಗಳು ಎಲ್ಲರೂ ಒಂದೇ, ಅವರಿಗೆ ನಂಬರ್ ಕೊಟ್ಟು ಗೊತ್ತಿಲ್ಲ” ಎಂದಿದ್ದರು.
ಯುದ್ಧ ಬಾಯಿ ತೆರೆದು ನಿಂತಿದ್ದಾಗ ನೆಹರು ತನ್ನ ಸಂಬಂಧಿಗಳಿಗೆ, ಮೆನನ್ ಆಪ್ತರಿಗೆ ಬಡ್ತಿ ನೀಡಿ ಸೇನೆಯ ಹುದ್ದೆಗಳಿಗೆ ನೇಮಿಸಿದಾಗ ಸಿಡಿದ ತಿಮ್ಮಯ್ಯ, ನೆಹರು ಮುಖಕ್ಕೆ ರಾಜೀನಾಮೆ ಬಿಸುಟು ಬಂದಿದ್ದರು. ನಂತರ ಬೆದರಿದ ನೆಹರು ಅದನ್ನು ಪುರಸ್ಕರಿಸಲಿಲ್ಲ. ತಿಮ್ಮಯ್ಯ ಅದನ್ನು ಹಿಂಪಡೆದರು. ಮುಂದೆ ಇದರ ಫಲ ಭಾರತವನ್ನು ಚೀನಾ ಹೀನಾಯವಾಗಿ ಸೋಲಿಸಿತು. ಭಾರತೀಯ ಯೋಧರು ಯಾವುದೇ ಯುದ್ಧ ಸಾಮಾಗ್ರಿಗಳಿಲ್ಲದೆ ಮಿಡಿತೆಗಳಂತೆ ಸತ್ತರು. ಇದೇ ಮೆನನ್ ಭಾರತದ ಮೊದಲ ರಕ್ಷಣಾ ಹಗರಣ ಮಾಡಿದರು. 5000 ರಕ್ಷಣಾ ಜೀಪು ಖರೀದಿಸುವಲ್ಲಿ ಕೇವಲ 500 ಜೀಪು ಖರೀದಿಸಿ ಹಣವನ್ನು ನುಂಗಿ ಹಾಕಿದ್ದರು.
ತಿಮ್ಮಯ್ಯ ನಿವೃತ್ತಿಯಾದಾಗ ನೆಹರು ಸರ್ಕಾರ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿತು. ನಿವೃತ್ತಿಯ ನಂತರ ಯಾವುದೇ ಗೌರವ ನೀಡಲಿಲ್ಲ. ಆದರೆ ತಿಮ್ಮಯ್ಯರನ್ನು ಗುರುತಿಸಿದ್ದು ಸಂಯುಕ್ತ ರಾಷ್ಟ್ರ ಸಂಸ್ಥೆ. ಅವರನ್ನು ಸೈಪ್ರೆಸ್‍ಗೆ ಸಂಯುಕ್ತ ಪಡೆಯ ಮುಖ್ಯ ಸೇನಾಧಿಕಾರಿಯಾಗಿ ಕಳುಹಿಸಿತು. 1965ರಲ್ಲಿ ಯುದ್ಧಭೂಮಿ ಸೈಪ್ರೆಸ್‍ನಲ್ಲಿ ಮಿಲಿಟರಿ ಪೆÇೀಷಾಕಿ ನಲ್ಲೇ ಒಬ್ಬ ವೀರ ಯೋಧನಂತೆ ತೀರಿಕೊಂಡರು. ಅಲ್ಲಿನ ಸರ್ಕಾರ ತಿಮ್ಮಯ್ಯರ ಹೆಸರಿನಲ್ಲಿ ಅಂಚೆ ಚೀಟಿ ಹೊರಡಿಸಿತು. ಮುಖ್ಯ ರಸ್ತೆಗೆ ತಿಮ್ಮಯ್ಯರ ಹೆಸರಿಟ್ಟು ಗೌರವಿಸಿತು.
ಆದರೆ ಕಾಂಗ್ರೆಸ್ ಆಡಳಿತದ ಭಾರತ ಸರ್ಕಾರ ಈ ದೇಶಭಕ್ತನನ್ನು ಗೌರವಿಸಲಿಲ್ಲ. ತಿಮ್ಮಯ್ಯರ ಪಾರ್ಥಿವ ಶರೀರವನ್ನು ಒಬ್ಬ ಸಾಮಾನ್ಯನಂತೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ರುದ್ರಭೂಮಿಯಲ್ಲಿ ಮಣ್ಣು ಮಾಡಲಾಯಿತು. 2 ವರ್ಷಗಳ ನಂತರ ಸೈಪ್ರೆಸ್ ಜನರಲ್ ಭಾರತಕ್ಕೆ ಬಂದಾಗ ಈ ಅವಮಾನ ಕಂಡು ಸರ್ಕಾರವನ್ನು ಎಚ್ಚರಿಸಿದ ಮೇಲೆ ಅವರ ಶರೀರವನ್ನು ಮತ್ತೆ ಹೊರತೆಗೆದು ಬೆಂಗಳೂರಿನ ಸೇನಾ ವಲಯದಲ್ಲಿ ಸಂಸ್ಕಾರ ಮಾಡಿ ಸ್ಮಾರಕ ನಿರ್ಮಿಸಲಾಯಿತು. ಇದೆಂತಹ ಸ್ಥಿತಿ ನೋಡಿ!
ಇಂದು ಟಿಪ್ಪುವಿನಂತಹ ಮತಾಂಧನ ಜಯಂತಿಗೆ ಸರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ, ತಾಲೂಕುಗಳಿಗೆ ಅನುದಾನ ನೀಡಿ, ಬಂದೂಕಿನ ತುದಿಯಿಂದ ಭಯಹುಟ್ಟಿಸಿ ಬಲಾತ್ಕಾರದಿಂದ ಜಯಂತಿ ಆಚರಿಸು ತ್ತಿದೆ. ಆದರೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯರಂತಹ ಯೋಧರ ಜಯಂತಿಯನ್ನು ಕಾಟಾಚಾರಕ್ಕೆ ಕೊಡಗು ಜಿಲ್ಲೆಯಲ್ಲಿ ಮಾತ್ರ, ಅದು ಕೊಡಗಿನವರ ಶ್ರದ್ಧೆ ಭಕ್ತಿಯ ಫಲದಿಂದ ಆಚರಿಸ ಲಾಗುತ್ತಿದೆ. ಈ ಮಹಾನ್ ದೇಶಭಕ್ತ ಯೋಧರು ನಮ್ಮ ಮುಂದಿನ ಪೀಳಿಗೆಗೆ, ದೇಶಭಕ್ತಿಗೆ ಪ್ರೇರಕ ಶಕ್ತಿ ಅಲ್ಲವೇನು?
ಕಾಂಗ್ರೆಸ್‍ಗೆ ಗೊತ್ತಿದೆ. ಕಾರ್ಯಪ್ಪ-ತಿಮ್ಮಯ್ಯರ ಜಯಂತಿ ಆಚರಿಸುವುದರಿಂದ, ಇವರಿಗೆ ಭಾರತ ರತ್ನ ಕೊಡಿಸಲು ಪ್ರಯತ್ನಿಸುವುದರಿಂದ ಓಟ್ ಬ್ಯಾಂಕ್ ನಿರ್ಮಾಣವಾಗುವುದಿಲ್ಲ. ಅವರ ಸಮುದಾಯದ ಕೊಡವರ ಸಂಖ್ಯೆ ಕೇವಲ ಎರಡು ಲಕ್ಷ. “ದೇಶವನ್ನು ತುಂಡುಮಾಡಿ, ಕಾಶ್ಮೀರ ಅಜ್ಹಾದಿ…… ಕಸಬ್ ಜಿಂದಾಬಾದ್’’ ಎನ್ನುವ ಶಕ್ತಿಗಳ ಮೇಲೆ ಕಾಂಗ್ರೆಸ್‍ಗೆ ಬಲು ಅಭಿಮಾನ. ಏಕೆಂದರೆ ಅಲ್ಲಿದೆ ಓಟ್ ಬ್ಯಾಂಕ್.