ಮನಸೂರೆಗೊಳ್ಳುವ ನಮ್ಮ ಮೈಸೂರು
ಅಂಕಣಗಳು, ಮೈತ್ರಿ

ಮನಸೂರೆಗೊಳ್ಳುವ ನಮ್ಮ ಮೈಸೂರು

May 14, 2018

ಯಾವುದೇ ರಾಷ್ಟ್ರದಲ್ಲಿನ ಪ್ರಮುಖ ನಗರಗಳು ಅಚ್ಚರಿಯ ಇತಿಹಾಸ ಹೊಂದಿ ರುವುದರ ಜೊತೆಗೆ ಯಾವುದಾದರೂ ಒಂದು ವೈಶಿಷ್ಟ್ಯತೆಗೆ ಹೆಸರಾಗಿರುತ್ತದೆ. ಭೌಗೋಳಿಕ ವಿಶೇಷ, ಸ್ಮಾರಕ, ಕಲೆ, ಸಂಸ್ಕೃತಿ, ತಿನಿಸು, ಸಾಧಕರು……ಹೀಗೆ ಯಾವುದಾದರು ಒಂದು ವಿಷಯಕ್ಕೆ ಖ್ಯಾತಿ ಪಡೆದಿರುತ್ತದೆ. ಆದರೆ ಭಾರತ ದೇಶದಲ್ಲಿ ಅನೇಕ ವಿಷಯಗಳಿಗೆ ವಿಶ್ವವಿಖ್ಯಾತಿ ಪಡೆದಿರುವ ಕೆಲವೇ ನಗರಗಳಲ್ಲಿ ನಮ್ಮ ಹೆಮ್ಮೆಯ ಮೈಸೂರು ನಗರವೂ ಸಹ ಒಂದು. ಸುವಾಸನೆ ಸೂಸುವ ಮೈಸೂರು ಮಲ್ಲಿಗೆಯಿಂದ ಹಿಡಿದು ಪರಂಪರೆಯ ದ್ಯೋತಕವಾದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದವರೆವಿಗೆ ಮೈಸೂರಿನ ಹಿರಿಮೆಯಿದೆ. ಕರ್ನಾಟಕದ ‘ಸಾಂಸ್ಕೃತಿಕ ರಾಜಧಾನಿ’ ಎಂದೇ ಕರೆಯಲ್ಪಡುವ ಮೈಸೂರು ವಿಶ್ವದ ಭೂಪಟದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ದೇಶವಿದೇಶಗಳ ಖ್ಯಾತನಾಮರು, ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಿ ಇಲ್ಲಿನ ಸೌಂದರ್ಯಕ್ಕೆ ಮನಸೋತಿದ್ದಾರೆ.

ಮೈಸೂರು ನಗರ ಕರ್ನಾಟಕ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ. ಇಲ್ಲಿನ ಹಿತವಾದ ವಾತಾವರಣ ವರ್ಷದ ಎಲ್ಲಾ ಕಾಲದಲ್ಲಿಯೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಸ್ವಚ್ಛ ನಗರ ಎಂಬ ಖ್ಯಾತಿ ಹೊಂದಿರುವ ಮೈಸೂರು ಆಹಾರ-ವಿಹಾರಗಳಲ್ಲದೆ ವೈವಿಧ್ಯತೆಯ ತಾಣಗಳೊಂದಿಗೆ ಭೇಟಿ ನೀಡುವವರ ಮೈಮನಗಳನ್ನು ಪುಳಕಿತಗೊಳಿಸುತ್ತವೆ. ಮೈಸೂರಿಗೆ ಮುಕುಟದಂತೆ ಕಾಣುವುದು ಇಲ್ಲಿನ ಅಧಿದೇವತೆ ಚಾಮುಂಡೇಶ್ವರಿಯ ಆವಾಸಸ್ಥಾನವಾದ ಶ್ರೀಚಾಮುಂಡಿ ಬೆಟ್ಟ. ಯಾರೇ ಮೈಸೂರಿಗೆ ಬಂದರೂ ಮೊದಲು ಹಸಿರು ಗಿರಿಯ ಮೇಲೆ ಮೇಳೈಸಿರುವ ತಾಯಿ ಚಾಮುಂಡಿಯ ದರ್ಶನ ಪಡೆಯಲು ಬಯಸುತ್ತಾರೆ. ಮಾರ್ಗ ಮಧ್ಯೆ ಏಕಶಿಲೆಯಲ್ಲಿ ಕೆತ್ತನೆ ಮಾಡಿರುವ ಬೃಹತ್ ನಂದಿಯನ್ನು ನೋಡುವುದೇ ಒಂದು ಆನಂದ.

ಚಾಮುಂಡಿ ಬೆಟ್ಟದಿಂದ ಕೆಳಗಿಳಿಯುತ್ತಿ ದ್ದಂತೆ 157 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾದ ಶ್ರೀ ಜಯಚಾಮರಾಜೇಂದ್ರ ಮೃಗಾಲಯ ಅಬಾಲವೃದ್ಧರೆನ್ನದೆ ಎಲ್ಲರಿಗೂ ಮೆಚ್ಚಿನ ತಾಣವಾಗಿದೆ. 1892ರಲ್ಲಿ ಸ್ಥಾಪನೆಗೊಂಡ ಈ ಮೃಗಾಲಯ ಇಂದು ಸಣ್ಣ ಸರಿಸೃಪ ಗಳಿಂದ ದೊಡ್ಡ ಜಿರಾಫೆಯವರೆವಿಗೆ, ಗಿಳಿಯಿಂದ ರಾಷ್ಟ್ರೀಯ ಪಕ್ಷಿಯಾದ ನವಿಲಿನವರೆವಿಗೆ 1300ಕ್ಕೂ ಹೆಚ್ಚು ವೈವಿಧ್ಯಮಯ ಪಕ್ಷಿ-ಪ್ರಾಣಿಗಳನ್ನು ಹೊಂದಿದ್ದು, ಭೇಟಿ ನೀಡುವ ಪ್ರತಿಯೊಬ್ಬ ರಿಗೂ ಮುದನೀಡುತ್ತದೆ. ವಿದ್ಯಾರ್ಥಿ ಗಳಿಗಂತೂ ಮನರಂಜನೆಯ ಜೊತೆಗೆ ಜ್ಞಾನಾರ್ಜನೆಯ ಒಂದು ಕೇಂದ್ರವೆನಿಸಿದೆ.

ಮೈಸೂರಿನಲ್ಲಿ ಅಪೂರ್ವ ವಿನ್ಯಾಸದ ಅನೇಕ ಪಾರಂಪರಿಕ ಕಟ್ಟಡಗಳಿದ್ದು, ಅರಮನೆಗಳ ನಗರಿ ಎಂಬ ಖ್ಯಾತಿಯೂ ಇದೆ. ಮೈಸೂರಿನ ಐಕಾನ್ ಆಗಿ ನಗರದ ಮಧ್ಯಭಾಗದಲ್ಲಿ ವಿರಾಜಮಾನ ವಾಗಿರುವುದು ‘ಅಂಬಾ ವಿಲಾಸ ಅರಮನೆ’. ಇಂಡೋಸಾರ್ಸಾನಿಕ್ ವಿನ್ಯಾಸದಲ್ಲಿ 1912ರಲ್ಲಿ ನಿರ್ಮಾಣಗೊಂಡ ಈ ಅರಮನೆಯು ಒಂದು ಶತಕವಾದರೂ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳ ರಾತ್ರಿವೇಳೆ ಇಡೀ ಅರಮನೆ ವಿದ್ಯುತ್ ಅಲಂಕಾರಗಳಿಂದ ಜಗಮಗಿಸುತ್ತದೆ. ಅರಮನೆ ತನ್ನ ವಿಸ್ತೀರ್ಣ ದಿಂದ ಸೊಬಗನ್ನು ಹೆಚ್ಚಿಸಿಕೊಂಡರೆ, ಸ್ವಲ್ಪ ದೂರದಲ್ಲಿಯೇ ಇರುವ ಸಂತ ಜೋಸೆಫ್ ಚರ್ಚ್ ತನ್ನ ಎತ್ತರದಿಂದ ಖ್ಯಾತಿಗಳಿಸಿದೆ. 1936ರಲ್ಲಿ ನಿರ್ಮಾಣಗೊಂಡ ಈ ಚರ್ಚ್ 175 ಅಡಿ ಎತ್ತರವನ್ನು ಹೊಂದಿದೆ. ಈ ಗಗನ ಚುಂಬಿ ಚರ್ಚ್‍ನ ಕಟ್ಟಡ ಪ್ರವಾಸಿಗರ ಮತ್ತೊಂದು ಆಕರ್ಷಣೆ.

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿ ರುವ ಶ್ರೀ ಕೃಷ್ಣರಾಜ ಸಾಗರ ಅಣೆಕಟ್ಟು ಮಂಡ್ಯ ಜಿಲ್ಲೆಯಲ್ಲಿದ್ದರೂ ಸಹ ಮೈಸೂರಿಗೆ ಕೇವಲ 21 ಕಿ.ಮೀ. ದೂರದಲ್ಲಿದ್ದು, ನಿರಾಯಾಸವಾಗಿ ತಲುಪುವ ತಾಣವಾಗಿದೆ. ಮೈಸೂರು ನಗರದ ಜನತೆಗೆ ಸಿಹಿನೀರನ್ನು ನೀಡುವುದರೊಂದಿಗೆ ಮಂಡ್ಯ ಜಿಲ್ಲೆಗೆ ‘ಸಕ್ಕರೆನಾಡು’ ಎಂಬ ಕೀರ್ತಿ ತಂದು ಕೃಷಿ ಚಟುವಟಿಕೆಗಳಿಗೆ ನೀರುಣಿಸುತ್ತದೆ. ಇಲ್ಲಿನ ಬೃಂದಾವನ ಗಾರ್ಡನ್‍ನ ಐಸಿರಿ ಹಾಗೂ ಸಂಗೀತ ಕಾರಂಜಿಯು ದಣಿದ ಪ್ರವಾಸಿಗರಿಗೆ ಉತ್ಸಾಹದ ಚಿಲುಮೆಯನ್ನು ಉಕ್ಕಿಸುತ್ತದೆ. ಹಿನ್ನೀರಿನಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಇತ್ತೀಚಿನ ಒಂದು ಆಕರ್ಷಣೆಯಾಗಿದೆ. ಕೆ.ಆರ್.ಎಸ್‍ಗೆ ಹತ್ತಿರ ದಲ್ಲಿರುವ ರಂಗನತಿಟ್ಟು ಪಕ್ಷಿಧಾಮ ಪಕ್ಷಿ ಪ್ರಿಯರ ನೆಚ್ಚಿನ ತಾಣವಾಗಿದೆ. ನಗರದ ಒಳಗೆ ಇರುವ ಕುಕ್ಕರಹಳ್ಳಿ ಕೆರೆ ಹಾಗೂ ಕಾರಂಜಿ ಕೆರೆ ಪ್ರಕೃತಿ ಪ್ರಿಯರ ನೆಮ್ಮದಿ ತಾಣವಾಗಿವೆ.

ಮೈಸೂರು ನಗರವನ್ನು ವಸ್ತು ಸಂಗ್ರಹಾಲಯಗಳ ನಗರ ಎಂತಲೂ ಕರೆಯಬಹುದು. ಜಗನ್ಮೋಹನ ಅರಮನೆ, ರೈಲ್ವೆ ಮ್ಯೂಸಿಯಂ, ಮಾನಸಗಂಗೋತ್ರಿ ಯಲ್ಲಿರುವ ಜಾನಪದ ಸಂಗ್ರಹಾಲಯ, ರೀಜನಲ್ ಮೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ, ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ಅಷ್ಟೇ ಅಲ್ಲದೆ ಇತ್ತೀಚೆಗೆ ಸ್ಥಾಪನೆಗೊಂಡ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಕಾಣಸಿಗುವ ಸ್ಯಾಂಡ್ ಮ್ಯೂಸಿಯಂ ಹಾಗೂ ವ್ಯಾಕ್ಸ್ ಮ್ಯೂಸಿಯಂ ಗಳು ಭೇಟಿ ನೀಡುವವರನ್ನು ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ. ಇವುಗಳ ಜೊತೆಗೆ ಹತ್ತಿರದಲ್ಲಿನ ಶ್ರೀರಂಗಪಟ್ಟಣ ದಲ್ಲಿರುವ ಕೆಲವು ಸ್ಮಾರಕಗಳೊಂದಿಗೆ ಮೈಸೂರಿನ ದೊಡ್ಡ ಗಡಿಯಾರ, ರಾಜರು ಗಳ ಪ್ರತಿಮೆಗಳು ನಗರಕ್ಕೆ ಮೆರುಗುತಂದಿವೆ. ಇಂಗ್ಲಿಷ್ ಸಾಹಿತ್ಯ ಕ್ಷೇತ್ರದ ಖ್ಯಾತನಾಮ ರಾದ ಆರ್.ಕೆ.ನಾರಾಯಣ್‍ರವರ ಮನೆಯು ಸಹ ಹೊಸ ಸೇರ್ಪಡೆಯಾಗಿದೆ.

ಮೈಸೂರಿನಲ್ಲಿ ಸ್ಥಾಪನೆಯಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ಸಂಸ್ಥೆಗಳು ತಮ್ಮದೇ ಆದ ವಿಶೇಷ ಸೇವೆಯೊಂದಿಗೆ ಮೈಸೂರಿಗೆ ಕೀರ್ತಿ ತಂದಿವೆ. ಅವುಗಳಲ್ಲಿ ಸಿ.ಎಫ್.ಟಿ.ಆರ್.ಐ (Central Food and Technological Research Institute), ಡಿ.ಎಫ್. ಆರ್.ಎಲ್. (Defence Food Research Laboratory), ಸಿ.ಐ.ಐ.ಎಲ್. (Central Institute of Indian Languages), ಸದರನ್ ರೈಲ್ವೆ, ಅರಗು ಮತ್ತು ಬಣ್ಣದ ಕಾರ್ಖಾನೆ, ಟೊಬ್ಯಾಕೋ ಬೋರ್ಡ್, ಕಾಫಿ ಬೋರ್ಡ್… ಹೀಗೆ ಅನೇಕ ಪ್ರಮುಖ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇಡೀ ದೇಶದಲ್ಲಿ ನಡೆಯುವ ಚುನಾವಣೆ ಗಳಲ್ಲಿ ಬಳಸುವ ವಿಶೇಷ ಇಂಕು ಸರಬ ರಾಜಾಗುವುದು ಮೈಸೂರಿನಿಂದಲೇ ಎಂಬುದು ಹೆಮ್ಮೆಯ ವಿಷಯ.

‘ಶಿಕ್ಷಣ ಕಾಶಿ’ ಎಂದು ಮೈಸೂರನ್ನು ಕರೆಯಬಹುದಾಗಿದೆ. 1921ರಲ್ಲಿ ಮಾನಸ ಗಂಗೋತ್ರಿಯಲ್ಲಿ ಸ್ಥಾಪನೆಗೊಂಡ ಮೈಸೂರು ವಿಶ್ವವಿದ್ಯಾನಿಲಯ ದೇಶದ ಅತ್ಯುನ್ನತ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ. ಅನೇಕ ಕವಿಗಳಿಗೆ, ಸಾಹಿತಿಗಳಿಗೆ, ವಿಜ್ಞಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿ, ಸಾಧನೆಯ ನೆಲೆಯಾಗಿ ರೂಪು ಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಖಾಸಗಿ ಸಂಸ್ಥೆಗಳು ಸಹ ಸೇವೆ ಸಲ್ಲಿಸುತ್ತಿವೆ. ಅವು ಗಳಲ್ಲಿ ಸುತ್ತೂರು ಮಠದ ಜೆಎಸ್‍ಎಸ್ ಮಹಾವಿದ್ಯಾ ಪೀಠವು ಒಂದು. ನರ್ಸರಿ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯ ಸ್ಥಾಪಿಸುವವರೆವಿಗೆ ನಾಡಿನ ವಿವಿಧೆಡೆ 300ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದು ವುದರ ಮುಖಾಂತರ ಜ್ಞಾನದೀವಿಗೆಯನ್ನು ಹೊತ್ತಿಸುವ ಕಾಯಕದಲ್ಲಿ ನಿರತವಾಗಿದೆ. ಮೈಸೂರಿಗೆ ಮನಸೋತು ಅನೇಕ ಖಾಸಗಿ ಕಂಪನಿಗಳು ಇಲ್ಲಿ ಪ್ರಾರಂಭವಾಗಿವೆ. ಇನ್ಫೋಸಿಸ್ ಮತ್ತಿತರ ಕಂಪನಿಗಳು ಉದ್ಯೋಗ ಆಕಾಂಕ್ಷಿಗಳ ನೆಚ್ಚಿನ ನೆಲೆಯಾಗಿವೆ.

ಸಂಗೀತ, ನೃತ್ಯ, ನಾಟಕ, ಕಲೆಗಳ ಬೀಡು ನಮ್ಮ ಮೈಸೂರು ಕಲಾವಿದರು. ರಾಜರ ಕಾಲದಿಂದ ಇಂದಿನವರೆವಿಗೆ ದೇಶವಿದೇಶಗಳಲ್ಲಿ ಸಂಗೀತ ಹಾಗೂ ಕಲಾ ಪ್ರದರ್ಶನ ನೀಡುತ್ತಾ ಮೈಸೂರಿನ ಕಂಪನ್ನು ಸೂಸುತ್ತಿದೆ. ಇಲ್ಲಿನ ರಂಗಾ ಯಣ ಇಡೀ ದೇಶದಲ್ಲಿಯೇ ನಾಟಕ ಪ್ರಯೋಗಗಳಿಗೆ ಖ್ಯಾತಿಯನ್ನು ಪಡೆದಿದೆ.

ಇನ್ನು ನವರಾತ್ರಿಯಲ್ಲಿ ಆಯೋಜಿಸುವ ‘ಮೈಸೂರು ದಸರಾ’ ಕುರಿತು ಬರೆಯಲು ಪದಗಳೇ ಸಾಲುವುದಿಲ್ಲ. ಇತಿಹಾಸದ ವೈಭವವನ್ನು ಮರುಕಳಿಸುವಂತೆ ವಿಜೃಂಭಣೆ ಯಿಂದ ಜರುಗುವ ದಸರಾ ಮಹೋತ್ಸವ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತದೆ. ಅದರಲ್ಲೂ ಜಂಬೂ ಸವಾರಿಯಂತೂ ನೋಡುಗರ ಕಣ್ಮನಗಳನ್ನು ತಣಿಸುತ್ತದೆ. ಫಲಪುಷ್ಟ ಪ್ರದರ್ಶನವು ಚಿತ್ತಾಕರ್ಷಕ ವಾಗಿರುತ್ತದೆ. ಮೂರು ತಿಂಗಳುಗಳ ಕಾಲ ಆಯೋಜಿಸುವ ವಸ್ತುಪ್ರದರ್ಶನವು ಮತ್ತೊಂದು ಆಕರ್ಷಣೆಯಾಗಿರುತ್ತದೆ.

ಮೈಸೂರಿನ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಅನೇಕ ಸಂಗತಿಗಳು ಖ್ಯಾತಿ ಪಡೆದಿವೆ. ಮೈಸೂರು ಪಾಕು, ಮೈಸೂರು ಮಲ್ಲಿಗೆ, ಮೈಸೂರು ಪೇಟ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ವಿಳ್ಯೆದೆಲೆ ಹೀಗೆ….. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮೈಸೂರಿನ ವೈವಿಧ್ಯತೆಯನ್ನು ತಿಳಿಯಲು ದೇವರಾಜ ಮಾರುಕಟ್ಟೆಯನ್ನು ಒಮ್ಮೆ ಅಡ್ಡಾಡಿ ಬರಬೇಕು. ಅನೇಕ ರೀತಿಯ ಹಣ್ಣು, ತರಕಾರಿ, ಹೂವುಗಳು ನಗರದ ಸೊಬಗನ್ನು ಹೆಚ್ಚಿಸುತ್ತವೆ. ಇಂದಿನ ಯುವ ಪೀಳಿಗೆಗೆ ಮೆಚ್ಚಿನ ತಾಣಗಳಾದ ಹತ್ತಾರು ಮಾಲ್ ಗಳು ಸಹ ಇಲ್ಲಿ ತಲೆ ಎತ್ತಿವೆ. ವಿಹಾರ ವಷ್ಟೇ ಅಲ್ಲ ಆಹಾರದ ವೈವಿಧ್ಯತೆ ಯಲ್ಲಿಯೂ ಮೈಸೂರು ಹೆಸರನ್ನು ಗಳಿಸಿದೆ. ಸ್ಥಳೀಯ ತಿನಿಸುಗಳಲ್ಲದೇ ದೇಶ-ವಿದೇಶಗಳ ಖಾದ್ಯಗಳು ಇಲ್ಲಿ ದೊರಕುತ್ತವೆ. ಮೈಸೂರಿಗೆ ಇರುವ ಸಾರಿಗೆ ವ್ಯವಸ್ಥೆ ಪ್ರವಾಸಿಸ್ನೇಹಿ ಯಾಗಿದೆ. ವಿಮಾನ, ರೈಲು ಮಾರ್ಗ ವಲ್ಲದೆ ರಸ್ತೆ ಮಾರ್ಗದ ಸಾರಿಗೆ ವ್ಯವಸ್ಥೆಯೂ ಉತ್ತಮವಾಗಿದೆ.

“Rome was not built in a day” ಎಂಬ ನಾಣ್ಣುಡಿಯಂತೆ ಮೈಸೂರನ್ನು ಒಂದು ದಿನದಲ್ಲಿ ನಿರ್ಮಿಸಲಾಗಿಲ್ಲ. ಸುಮಾರು ಎರಡು ಶತಮಾನಗಳ ಕಾಲ ರಾಜ ಮಹಾರಾಜರು, ಮಂತ್ರಿ ವರ್ಯರು, ಬ್ರಿಟಿಷ್ ಅಧಿಕಾರಿಗಳ ಶ್ರಮವೂ ಇದರಲ್ಲಿ ಅಡಗಿದೆ. ಶ್ರೀ ಚಿಕ್ಕದೇವರಾಜ ಒಡೆಯರ್, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು ಮೈಸೂರು ಒಂದು ಸುಂದರ, ಸುಸಜ್ಜಿತ, ಸುಗಂಧಭರಿತ, ಸ್ವಚ್ಛ ನಗರಿಯಾಗಿ ರೂಪುಗೊಳ್ಳಲು ತಮ್ಮದೇ ಆದ ಕೊಡುಗೆಯನ್ನು ನೀಡಿರುತ್ತಾರೆ. ಶಿಕ್ಷಣ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಕಲೆ… ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಮೈಸೂರಿಗೆ ಕೀರ್ತಿಬರಲು ಇವರು ಪೋಷಣೆ, ಪ್ರೋತ್ಸಾಹ, ಆಸಕ್ತಿ ಎಲ್ಲಕ್ಕಿಂತ ಹೆಚ್ಚಾಗಿ ಮೈಸೂರಿನ ಕುರಿತಾದ ಅವರಿಗಿದ್ದ ಅಭಿಮಾನ ಕಾರಣವಾಗಿದೆ. ಮೈಸೂರಿನ ಇಂದಿನ ವೃತ್ತಗಳು, ರಸ್ತೆಗಳು ಅವರ ದೂರದೃಷ್ಟಿಯನ್ನು ಎತ್ತಿತೋರುತ್ತವೆ. ಅಷ್ಟೇ ಅಲ್ಲ ಅವರುಗಳಿಗೆ ದಿವಾನರಾ ಗಿದ್ದ ಶ್ರೀ ಪೂರ್ಣಯ್ಯ, ಶ್ರೀ ಸಿ.ವಿ.ರಂಗಾ ಚಾರ್ಲು, ಶ್ರೀ ಶೇಷಾದ್ರಿ ಐಯ್ಯರ್, ಶ್ರೀ ಸರ್ ಎಂ.ವಿಶ್ವೇಶ್ವರಯ್ಯ, ಶ್ರೀ ಮಿರ್ಜಾ ಇಸ್ಮಾಯಿಲ್ ಮೊದಲಾದವರು ರಾಜರು ಗಳ ಕನಸುಗಳನ್ನು ನನಸು ಮಾಡುವ ಕಾಯಕಯೋಗಿಗಳಾಗಿದ್ದರು.

‘ಪಿಂಚಣಿದಾರರ ಸ್ವರ್ಗ’ ಎಂದು ಕರೆಯಲ್ಪಟ್ಟರೂ ಇಂದು ಈ ನಗರ ಹಿರಿಯ ಕಿರಿಯರೆಲ್ಲರಿಗೂ ಬಗೆಬಗೆ ಯಲ್ಲಿ ಸ್ವರ್ಗದ ಕಿಚ್ಚನ್ನು ಹಚ್ಚುವ ಮಾಯಾ ನಗರಿಯಾಗಿ ರೂಪುಗೊಂಡಿದೆ. ನಮ್ಮ ಹೆಮ್ಮೆಯ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ಇಲ್ಲಿನ ನಿವಾಸಿಯಾಗಿರುವುದು ನನ್ನ ಪುಣ್ಯ ಎಂದು ಭಾವಿಸುತ್ತಾ, ಈ ಅಪೂರ್ಣ ಲೇಖನಕ್ಕೆ ವಿರಾಮ ಹೇಳ ಬಯಸುತ್ತೇನೆ.

ಮೈಸೂರು ನಗರ ಕರ್ನಾಟಕ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ. ಇಲ್ಲಿನ ಹಿತವಾದ ವಾತಾವರಣ ವರ್ಷದ ಎಲ್ಲಾ ಕಾಲದಲ್ಲಿಯೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಸ್ವಚ್ಛ ನಗರ ಎಂಬ ಖ್ಯಾತಿ ಹೊಂದಿರುವ ಮೈಸೂರು ಆಹಾರ- ವಿಹಾರಗಳಲ್ಲದೆ ವೈವಿಧ್ಯತೆಯ ತಾಣಗಳೊಂದಿಗೆ ಭೇಟಿ ನೀಡುವವರ ಮೈಮನಗಳನ್ನು ಪುಳಕಿತಗೊಳಿಸುತ್ತವೆ. ಮೈಸೂರಿಗೆ ಮುಕುಟದಂತೆ ಕಾಣುವುದು ಇಲ್ಲಿನ ಅಧಿದೇವತೆ ಚಾಮುಂಡೇಶ್ವರಿಯ ಆವಾಸಸ್ಥಾನವಾದ ಶ್ರೀಚಾಮುಂಡಿ ಬೆಟ್ಟ. ಯಾರೇ ಮೈಸೂರಿಗೆ ಬಂದರೂ ಮೊದಲು ಹಸಿರು ಗಿರಿಯ ಮೇಲೆ ಮೇಳೈಸಿರುವ ತಾಯಿ ಚಾಮುಂಡಿಯ ದರ್ಶನ ಪಡೆಯಲು ಬಯಸುತ್ತಾರೆ. ಮಾರ್ಗ ಮಧ್ಯೆ ಏಕಶಿಲೆಯಲ್ಲಿ ಕೆತ್ತನೆ ಮಾಡಿರುವ ಬೃಹತ್ ನಂದಿಯನ್ನು ನೋಡುವುದೇ ಒಂದು ಆನಂದ.

Translate »