ಮೈಸೂರು ಟ್ರಾಫಿಕ್ ಸಿಗ್ನಲ್ ಮುಕ್ತವಾಗಿದೆಯೇ!
ಮೈಸೂರು

ಮೈಸೂರು ಟ್ರಾಫಿಕ್ ಸಿಗ್ನಲ್ ಮುಕ್ತವಾಗಿದೆಯೇ!

March 7, 2019

ಮೈಸೂರು: ಮೈಸೂರು ನಗರದ ಕೆಲ ವೃತ್ತಗಳೀಗ ಟ್ರಾಫಿಕ್ ಸಿಗ್ನಲ್ ಫ್ರೀ…! ಏಕೆಂದರೆ ಕೆಟ್ಟು ನಿಂತ ಸಿಗ್ನಲ್ ಗಳಿಗೆ ದುರಸ್ತಿ ಭಾಗ್ಯವಿಲ್ಲದೆ ಸುರಕ್ಷತೆ ಇಲ್ಲದ ಸರಾಗ ಸಂಚಾರಕ್ಕೆ ಇವು ತೆರೆದುಕೊಂಡಿವೆ.

ಸುರಕ್ಷತೆಯನ್ನೂ ಲೆಕ್ಕಿಸದೇ ಸರಾಗವಾಗಿ ಮುಂದೆ ಸಾಗುವ ವಾಹನ ಸವಾರರು ಪರಸ್ಪರ ನಡೆಸುವ ಪೈಪೋಟಿ ಅನಾಹುತ ದಲ್ಲಿ ಅಂತ್ಯ ಕಾಣುವ ಆತಂಕವೂ ಎದು ರಾಗಿದೆ. ಹೌದು, ಈ ರೀತಿಯ ದೃಶ್ಯಾ ವಳಿಗೆ ನಗರದ ಹುಣಸೂರು-ವಾಲ್ಮೀಕಿ ರಸ್ತೆ ಜಂಕ್ಷನ್ ಹಾಗೂ ಕೆಆರ್‍ಎಸ್ ರಸ್ತೆಯ ಆಕಾಶವಾಣಿ ವೃತ್ತ ನಿತ್ಯ ಸಾಕ್ಷಿಯಾಗು ತ್ತಿವೆ. ದುರಸ್ತಿಗೆ ಬಂದಿರುವ ಸಿಗ್ನಲ್ ವ್ಯವ ಸ್ಥೆಗೆ ಕಾಯಕಲ್ಪ ನೀಡದ ಹಿನ್ನೆಲೆಯಲ್ಲಿ ಈ ವೃತ್ತಗಳೀಗ ಸಿಗ್ನಲ್ ಫ್ರೀ.

ಹಾಸನ, ಕೊಡಗು ಸೇರಿದಂತೆ ಮೈಸೂರು ಗ್ರಾಮಾಂತರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಹಿನ್ನೆಲೆಯಲ್ಲಿ ಹುಣಸೂರು ರಸ್ತೆ ಪ್ರತಿ ದಿನ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಜೊತೆಗೆ ಈ ರಸ್ತೆ ಹಾಗೂ ವಾಲ್ಮೀಕಿ ರಸ್ತೆ ಜಂಕ್ಷನ್‍ನಿಂದ ಅನತಿ ದೂರದಲ್ಲಿ ಮಹಾ ರಾಣಿ ವಾಣಿಜ್ಯ ಕಾಲೇಜು ಇದ್ದು, ವಿದ್ಯಾರ್ಥಿನಿಯರ ಸಂಚಾರವೂ ಇದ್ದೇ ಇರುತ್ತದೆ. ಹೀಗಾಗಿ ಈ ಜಂಕ್ಷನ್‍ನಲ್ಲಿ ವಾಹನ ದಟ್ಟಣೆ ಸಾಮಾನ್ಯ ಸಂಗತಿ.

ಇಂತಹ ಪ್ರಮುಖ ಜಂಕ್ಷನ್‍ನಲ್ಲಿದ್ದ ಟ್ರಾಫಿಕ್ ಸಿಗ್ನಲ್ ಕೆಟ್ಟು ಹಲವು ದಿನಗಳು ಉರುಳುತ್ತಲೇ ಇದ್ದರೂ ನಗರ ಸಂಚಾರ ಪೊಲೀಸರು ಮಾತ್ರ ಇದನ್ನು ಸರಿಪಡಿ ಸುವ ಗೋಜಿಗೆ ಹೋಗಿಲ್ಲ. ಇದರಿಂದ ವಾಹನ ಸವಾರರು ಸಿಗ್ನಲ್ ಇಲ್ಲವೆಂದು ನಿಟ್ಟುಸಿರು ಬಿಟ್ಟು ಮುಂದೆ ಸಾಗಿದರೂ ಪರಸ್ಪರ ಮುನ್ನುಗುವ ಭರದಲ್ಲಿ ಜಂಕ್ಷನ್ ದಾಟುವುದರೊಳಗೆ ಹೈರಾಣಾಗುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತು ಅನಾಹುತಕ್ಕೆ ಆಸ್ಪದ ನೀಡದೇ ಈ ಅವ್ಯವಸ್ಥೆಯನ್ನು ಸರಿ ಪಡಿಸಬೇಕಿದೆ. ರಾತ್ರಿ ವೇಳೆಯಂತೂ ಈ ಸಮಸ್ಯೆ ಮತ್ತಷ್ಟು ಗಂಭೀರತೆ ಪಡೆಯ ಲಿದ್ದು, ವಾಹನ ಸವಾರರು ತಮ್ಮ ಎದುರು -ಬದುರು ಬರುವ ವಾಹನಗಳ ಅರಿವಿ ಲ್ಲದೆ ಮುನ್ನುಗ್ಗಿ ಪರಸ್ಪರ ವಾಗ್ವಾದಕ್ಕಿಳಿದ ಪ್ರಸಂಗಗಳೂ ನಡೆಯುತ್ತಲೇ ಇವೆ. ಇನ್ನೂ ಇಲ್ಲಿಗೆ ನಿಯೋಜಿಸುವ ಪೊಲೀಸ್ ಪೇದೆ ಯಾಗಲೀ, ಹೋಂ ಗಾರ್ಡ್ ಆಗಲೀ ಸಂಚಾರ ನಿಯಂತ್ರಣಕ್ಕೆ ಮುಂದಾಗುವುದಿಲ್ಲ.

ಆಕಾಶವಾಣಿ ವೃತ್ತ: ಆಕಾಶವಾಣಿ ವೃತ್ತದ ಟ್ರಾಫಿಕ್ ಸಿಗ್ನಲ್ ಕೆಟ್ಟು ಅದೆಷ್ಟೊ ದಿನಗಳೇ ಆಗಿವೆಯೇನೋ. ಈಗಲಾ ದರೂ ಇದರ ದುರಸ್ತಿಗೆ ಕ್ರಮ ವಹಿಸದ ಹಿನ್ನೆಲೆಯಲ್ಲಿ ಇಲ್ಲಿಯೂ ಅದೇ ಪರಿಸ್ಥಿತಿ ಇದ್ದು, ವಾಹನ ಸವಾರರು ತಾವೇ ಮೊದಲು ಮುಂದೆ ಸಾಗಬೇಕೆಂಬ ಪೈಪೋಟಿ ಇಲ್ಲಿಯೂ ನಿತ್ಯದ ಗೋಳಾಗಿದೆ. ಅತ್ತ ಚೆಲುವಾಂಬ ಪಾರ್ಕ್ ಬಳಿ ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡ ಹಾಕುವ ಪೊಲೀಸರು ಈ ವೃತ್ತದತ್ತ ತಿರುಗಿಯೂ ನೋಡುವುದಿಲ್ಲ. ಇಬ್ಬರು-ಮೂವರು ಹೋಂಗಾರ್ಡ್‍ಗಳು ಸೇರಿದಂತೆ ಸಂಚಾರ ಪೊಲೀಸರು ಇಲ್ಲಿ ದಂಡ ವಸೂಲಿಯಲ್ಲಿ ನಿರತರಾಗುತ್ತಾರೆಯೇ ಹೊರತು ಪಕ್ಕದಲ್ಲೇ ಇರುವ ವೃತ್ತದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಮುಂದಾಗುವುದಿಲ್ಲ. ಈ ಎರಡು ಟ್ರಾಫಿಕ್ ಸಿಗ್ನಲ್‍ಗಳು ದುರಸ್ತಿಗೆ ಬಂದಿರುವುದನ್ನು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.

ಸಯ್ಯಾಜಿರಾವ್ ರಸ್ತೆಯ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲೂ ಹಲವು ದಿನಗಳಿಂದ ಟ್ರಾಫಿಕ್ ಸಿಗ್ನಲ್ ಕಾರ್ಯಾ ಚರಣೆಯಲ್ಲಿ ಇರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿ ಸಿಗ್ನಲ್ ವ್ಯವಸ್ಥೆ ಮಾಡಿದ್ದರಿಂದ ಅಡ್ಡಾದಿಡ್ಡಿ ನುಗ್ಗುವ ವಾಹನಗಳಿಗೆ ಕಡಿವಾಣ ಹಾಕಿದಂತಾ ಗಿದೆ. ಇದೇ ರಸ್ತೆಯ ತಿಲಕನಗರದ ಅಂಧ ಮಕ್ಕಳ ಶಾಲೆ ಬಳಿ ಜಂಕ್ಷನ್‍ನಲ್ಲಿ ಸಿಗ್ನಲ್ ವ್ಯವಸ್ಥೆ ಇದ್ದರೂ ಕೆಲ ಸಿಗ್ನಲ್ ದೀಪಗಳು ಕೆಲಸ ಮಾಡುವುದಿಲ್ಲ. ಇದನ್ನು ಸರಿಪಡಿ ಸದ ಹಿನ್ನೆಲೆಯಲ್ಲಿ ಸಂಕೇತಗಳ ಬಗ್ಗೆ ಸರಿಯಾಗಿ ಅರಿವಾಗದೇ ವಾಹನ ಸವಾ ರರು ಮುಂದೆ ಸಾಗುವುದು ನಡೆಯುತ್ತಲೇ ಇದೆ. ಒಟ್ಟಾರೆ ಮೈಸೂರು ನಗರದ ಸುಗಮ ಸಂಚಾರ ವ್ಯವಸ್ಥೆಗಾಗಿ ಸಮಸ್ಯೆ ಇರುವ ಎಲ್ಲಾ ಟ್ರಾಫಿಕ್ ಸಿಗ್ನಲ್‍ಗಳಿಗೆ ಕಾಯಕಲ್ಪ ನೀಡಬೇಕಿದೆ.

Translate »