ಕುಕ್ಕರಹಳ್ಳಿ ಕೆರೆಯಲ್ಲಿ ಎನ್‍ಸಿಸಿ ಕೆಡೆಟ್‍ಗಳಿಂದ ಸ್ವಚ್ಛತಾ ಅಭಿಯಾನ
ಮೈಸೂರು

ಕುಕ್ಕರಹಳ್ಳಿ ಕೆರೆಯಲ್ಲಿ ಎನ್‍ಸಿಸಿ ಕೆಡೆಟ್‍ಗಳಿಂದ ಸ್ವಚ್ಛತಾ ಅಭಿಯಾನ

March 7, 2019

ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬುಧವಾರ ಸ್ವಚ್ಛತಾ ಅಭಿಯಾನ ಕೈಗೊಂಡ ಎನ್‍ಸಿಸಿ ಕೆಡೆಟ್‍ಗಳು ಅಪಾರ ಪ್ರಮಾಣದ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡಿದರು.

ಸಮಾಜ ಸೇವಾ ಕಾರ್ಯದ ಹಿನ್ನೆಲೆ ಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಎನ್‍ಸಿಸಿ ಕೆಡೆಟ್‍ಗಳು ಕೆರೆ ದಡ, ಕೆರೆ ಏರಿ ಹಾಗೂ ಆವರಣದಲ್ಲಿ ಸಾರ್ವಜನಿಕರು ಬಿಸಾಡಿದ್ದ ಕಸವನ್ನು ಸಂಗ್ರಹಿಸಿದರು. ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಹೊದಿಕೆಗಳನ್ನು ಸಂಗ್ರಹಿಸಿದರು. ಬೆಳಿಗ್ಗೆ 6.45ರಿಂದ 9.30ರವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ವಿದ್ಯಾರ್ಥಿಗಳ ಈ ಸೇವಾಕಾರ್ಯಕ್ಕೆ ಸಾರ್ವಜನಿ ಕರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಚ್ಛತಾ ಕಾರ್ಯಕ್ರಮವನ್ನು ಮೈಸೂರು ವಿವಿ ಕುಲಪತಿ ಡಾ.ಜಿ.ಹೇಮಂತಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕುಕ್ಕರಹಳ್ಳಿ ಕೆರೆಯಲ್ಲಿ ಎನ್‍ಸಿಸಿ ಕೆಡೆಟ್‍ಗಳು ಸ್ವಚ್ಛತಾ ಅಭಿಯಾನ ಹಮ್ಮಿ ಕೊಂಡಿರುವುದು ಸ್ವಾಗತಾರ್ಹ. ಕೆರೆ ವಾತಾ ವರಣ ಸಂರಕ್ಷಿಸುವುದಕ್ಕೆ ಎಲ್ಲರೂ ಕೈಜೋಡಿಸಬೇಕು. ನಗರದ ಹೃದಯ ಭಾಗದಲ್ಲಿರುವ ಈ ಕೆರೆ ಸಂರಕ್ಷಣೆ ಹಾಗೂ ವಾತಾವರಣ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು.

ಮೈಸೂರು ವಿವಿ ಪರಿಸರ ವಿಜ್ಞಾನ ವಿಭಾ ಗದ ಮುಖ್ಯಸ್ಥ ಪ್ರೊ. ಎಸ್.ಎಲ್.ಬೆಲಗಲಿ ಉಪನ್ಯಾಸ ನೀಡಿ, ಜನರ ಬೇಜವಾಬ್ದಾರಿ ತನದಿಂದ ಪರಿಸರ ಮಾಲಿನ್ಯವಾಗುತ್ತಿದೆ. ಇದರಿಂದ ಪ್ರಾಣಿ-ಪಕ್ಷಿ ಸಂಕುಲದೊಂ ದಿಗೆ ಮಾನವನ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯ ವಾತಾವರಣ ಕಾಪಾಡಬೇಕು ಎಂದರು.

ಇದೇ ವೇಳೆ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿ ಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭ ದಲ್ಲಿ ಎನ್‍ಸಿಸಿ ಮೈಸೂರು ಗ್ರೂಪ್ ಕಮಾಂಡರ್ ಕೆ.ಎಂ.ಕೆ.ಬೆಳ್ಳಿಯಪ್ಪ, ಕರ್ನಲ್ ಎಂ.ಎಸ್. ರವೀಂದ್ರನಾಥ್ ಸೇರಿದಂತೆ 100ಕ್ಕೂ ಹೆಚ್ಚು ಕೆಡೆಟ್‍ಗಳು ಪಾಲ್ಗೊಂಡಿದ್ದರು.

Translate »