ಎನ್‍ಟಿಎಂ ಶಾಲೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ನೀಡುವುದು ಕಾನೂನುಬದ್ಧ
ಮೈಸೂರು

ಎನ್‍ಟಿಎಂ ಶಾಲೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ನೀಡುವುದು ಕಾನೂನುಬದ್ಧ

October 14, 2019

ಮೈಸೂರು,ಅ.13-ನ್ಯಾಯಾಲಯದ ಆದೇಶದಂತೆ ಶಿಕ್ಷಣ ಇಲಾಖೆಯು ಎನ್‍ಟಿಎಂ ಶಾಲೆಯ ಮಕ್ಕಳನ್ನು ದೇವ ರಾಜ ಶಾಲೆಗೆ ಕಳುಹಿಸಿ, ಕಟ್ಟಡವನ್ನು ತೆರವುಗೊಳಿಸಿ ಕೀಲಿ ಕೈ ಅನ್ನು ಶ್ರೀ ರಾಮ ಕೃಷ್ಣ ಆಶ್ರಮಕ್ಕೆ ನೀಡುವುದು ಕಾನೂನು ಬದ್ಧವಾದ ಕ್ರಮವಾಗಿದೆ ಎಂದು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾ ನಂದ ಮಹಾರಾಜ್ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ರುವ ಅವರು, ಎನ್‍ಟಿಎಂ ಶಾಲೆಯನ್ನು ಮುಚ್ಚುತ್ತಿಲ್ಲ. ಅದನ್ನು ಸನಿಹದಲ್ಲಿರುವ ದೇವರಾಜ ಸರ್ಕಾರಿ ಪ್ರಾಥಮಿಕ ಶಾಲೆ ಯೊಂದಿಗೆ ಅಧಿಕೃತವಾಗಿ ವಿಲೀನಗೊಳಿಸ ಲಾಗಿದೆ. ಈಗ ಓದುತ್ತಿರುವ ಮಕ್ಕಳಿಗೆ ದೇವರಾಜ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ, ಹೆಚ್ಚು ಶಿಕ್ಷಕರು ಮತ್ತು ಉತ್ತಮ ಸೌಲಭ್ಯ ದೊರೆಯಲಿದೆ. ಯಾವ ರೀತಿಯಿಂದಲೂ ಮಕ್ಕಳಿಗಾಗಲೀ, ಪೋಷಕ ರಿಗಾಗಲೀ ತೊಂದರೆಯಾಗುವುದಿಲ್ಲ. ಆದುದರಿಂದ ಪೋಷಕರು ತಮ್ಮ ಮಕ್ಕಳ ಭವಿಷ್ಯ ವಿಚಾರದಲ್ಲಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

2014ರಲ್ಲಿ ಅಂದಿನ ಮುಖ್ಯ ಮಂತ್ರಿ ಗಳು ಎನ್‍ಟಿಎಂ ಶಾಲೆಯನ್ನು ತೆರವು ಗೊಳಿಸಬಾರದೆಂದು ಮೌಖಿಕ ಆದೇಶ ನೀಡಿದ್ದರು. ಅದನ್ನು ಅನುಸರಿಸಿ ಸಿಪಿಐ ಬೆಂಗ ಳೂರು ಅವರು ಮೈಸೂರಿನ ಡಿಡಿಪಿಐ ರವರಿಗೆ ಲಿಖಿತ ಆದೇಶ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮೈಸೂರಿನ ಶ್ರೀ ರಾಮ ಕೃಷ್ಣ ಆಶ್ರಮವು ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿತು. ಅದನ್ನು ಪರಿಗಣಿಸಿದ ಉಚ್ಛ ನ್ಯಾಯಾಲಯವು ಸಿಪಿಐ ಅವರು ಮುಖ್ಯ ಮಂತ್ರಿಗಳ ಕೇವಲ ಮೌಖಿಕ ಆದೇಶದ ಮೇರೆಗೆ ನೀಡಿದ ನಿರ್ದೇಶನವು ಸ್ವತಃ ಸಿಪಿಐ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಮತ್ತು ಅದರಿಂದ ಕಾನೂನಿನ ಉಲ್ಲಂಘನೆ ಯಾಗಿದೆ ಎಂದು ಸ್ಪಷ್ಟವಾದ ಅಂತಿಮ ತೀರ್ಪು ನೀಡಿ ಸಿಪಿಐರವರ ಆದೇಶವು ಯಾವ ಕಾರಣಕ್ಕೂ ಅನ್ವಯಿಸುವುದಿಲ್ಲ ಎಂದು ತಿರ ಸ್ಕರಿಸಿ ವಜಾ ಮಾಡಿತ್ತು ಎಂದು ತಿಳಿಸಿದ್ದಾರೆ.

ಸರ್ಕಾರವು ಎನ್‍ಟಿಎಂ ಶಾಲೆಯನ್ನು ಶ್ರೀ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸ ಬೇಕೆಂದು ಮಾಡಿದ್ದ ಆದೇಶವನ್ನು ಚಾಚೂ ತಪ್ಪದೇ ಅನುಷ್ಠಾನ ಮಾಡಲು ಉಚ್ಛ ನ್ಯಾಯಾಲಯವು ನಿರ್ದೇಶನ ನೀಡಿತ್ತು. ಇದರ ಪ್ರಕಾರ ಶಿಕ್ಷಣ ಇಲಾಖೆಯು ಎನ್‍ಟಿಎಂ ಶಾಲೆಯ ಮಕ್ಕಳನ್ನು ದೇವರಾಜ ಶಾಲೆಗೆ ಕಳುಹಿಸಿ, ಕಟ್ಟಡವನ್ನು ತೆರವುಗೊಳಿಸಿ ಕೀಲಿ ಕೈ ಅನ್ನು ಶ್ರೀ ರಾಮಕೃಷ್ಣ ಆಶ್ರಮಕ್ಕೆ ನೀಡುವುದು ಕಾನೂನು ಬದ್ಧವಾದ ಕ್ರಮವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆಲವರು (ಜನಪ್ರತಿನಿಧಿಗಳು ಸೇರಿದಂತೆ) ಪತ್ರಿಕೆಗಳಿಗೆ ಹೇಳಿಕೆ ನೀಡಿರುವಂತೆ ಎನ್‍ಟಿಎಂ ಶಾಲೆಯನ್ನು ಸರ್ಕಾರ ನೀಡಿರುವುದು ತಮಿಳುನಾಡಿನ ಚೆನೈನಲ್ಲಿರುವ ಯಾವುದೋ ಟ್ರಸ್ಟ್‍ಗೆ ಅಲ್ಲವೇ ಅಲ್ಲ. ವಾಸ್ತವವಾಗಿ ಎನ್‍ಟಿಎಂ ಶಾಲೆಯನ್ನು ಹಸ್ತಾಂ ತರಿಸಿರು ವುದು ಕೊಲ್ಕತ್ತಾದಲ್ಲಿರುವ ಸ್ವಾಮಿ ವಿವೇಕಾನಂದರು ಸ್ಥಾಪಿಸಿ ರುವ ರಾಮಕೃಷ್ಣ ಮಠ ಮತ್ತು ಮಿಷನ್‍ಗೆ. ಅದರ ಶಾಖೆಯಾದ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮವು ಸ್ಥಳೀಯವಾಗಿ ಕೇಂದ್ರದ ಆದೇಶದಂತೆ ಇದರ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅದಕ್ಕಾಗಿ ಖಾತ ಸಹ ಮಾಡಿಸಿ 2012-13ರಿಂದ ಇಲ್ಲಿಯವರೆಗೆ ತೆರಿಗೆಯನ್ನು ಪಾವತಿಸುತ್ತಾ ಬಂದಿದೆ. ಆದುದರಿಂದ ಕಾನೂನಿನ ಪ್ರಕಾರ ಸದರಿ ಪೂರ್ಣ ಆಸ್ತಿಯು ಶ್ರೀ ರಾಮಕೃಷ್ಣ ಆಶ್ರಮದ ಹಕ್ಕಿಗೆ ಸೇರಿದ್ದಾಗಿರುತ್ತದೆ. ದಿನಾಂಕ 15.3.2013ರಲ್ಲಿಯೇ ಅಂದಿನ ಡಿಡಿಪಿಐ ರವರು ಪೂರ್ಣ ಆಸ್ತಿಯನ್ನು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಧೀನಕ್ಕೆ ವಹಿಸಿಕೊಟ್ಟಿರುತ್ತಾರೆ ಎಂದು ಅವರು ಹೇಳಿದ್ದಾರೆ.

ವಿವೇಕಸ್ಮಾರಕವು ಕೇವಲ ಸ್ವಾಮಿ ವಿವೇಕಾನಂದರ ಪ್ರತಿಮೆ ಇರುವ ಸ್ಮಾರಕವಲ್ಲದೆ ಒಂದು ಸೇವಾ ಕೇಂದ್ರವಾಗಲಿದೆ. ನಾಡಿನ ಸಹಸ್ರಾರು ಯುವಜನರಿಗೆ ನೈತಿಕ, ಆಧ್ಯಾತ್ಮಿಕ, ಧಾರ್ಮಿಕ ಶಿಕ್ಷಣ ನೀಡುವ ಸಾಂಸ್ಕøತಿಕ ಕೇಂದ್ರವೂ ಆಗಲಿದೆ. ಹಲವು ವ್ಯಕ್ತಿತ್ವವಿಕ ಸನಕ್ಕೆ ಪೂರಕವಾದ ಅಲ್ಪಾವಧಿ ಕೋರ್ಸ್‍ಗಳನ್ನು ಇಲ್ಲಿ ಪ್ರಾರಂಭಿಸ ಲಾಗುತ್ತದೆ. ಯುವಕರಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶನ ನೀಡುವ ಉಪನ್ಯಾಸಗಳನ್ನು ನಿಗದಿತ ದಿನಗಳಂದು ನಡೆಸಲಾಗುತ್ತದೆ. ಸ್ವಾಮಿ ವಿವೇಕಾನಂದರ ಆಶಯದಂತೆ ಯುವಶಕ್ತಿಗೆ ಅಗತ್ಯವಾದ ನೈತಿಕ ಶಿಕ್ಷಣ ನೀಡಿ ಅವರನ್ನು ಸಬಲೀಕರಣಗೊಳಿಸುವ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಸುತ್ತಮುತ್ತಲಿರುವ ಕಾಲೇಜು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಸಹಸ್ರಾರು ಉಪಯುಕ್ತ ಪುಸ್ತಕಗಳಿರುವ ಗ್ರಂಥಾಲಯವು ವಿವೇಕಸ್ಮಾರಕದ ಭಾಗವಾಗಲಿದೆ. ಯುವಕರ ಪ್ರಗತಿಗೆ ಅಗತ್ಯವಾದ ಇನ್ನೂ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಆಶ್ರಮದ “ವಿವೇಕಶಿಕ್ಷಣ” ಎಂಬ ಯೋಜನೆಯಡಿ ಕುಂಬಾರ ಕೊಪ್ಪಲಿನ ಮತ್ತು ಹಿನಕಲ್ ಗ್ರಾಮದ ಜಾಗದ ಸರ್ಕಾರಿ ಕನ್ನಡ ಶಾಲೆಯ 9 ಮತ್ತು 10ನೇ ತರಗತಿಯಲ್ಲಿ ಹಿಂದುಳಿದ ವಿದ್ಯಾರ್ಥಿ ಗಳಿಗೆ ಶಾಲಾ ಅವಧಿಯ ನಂತರ ಉಚಿತ ಶಿಕ್ಷಣ ನೀಡಿ ಆ ಮಕ್ಕಳು ಜೀವನದಲ್ಲಿ ಮುಂದೆ ಬರಲು ವ್ಯವಸ್ಥೆ ಮಾಡಿಕೊಟ್ಟಿದೆ. ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಕುಗ್ರಾಮವಾದ ತಂಕಲಮೋಳೆಯಲ್ಲಿ ಶ್ರೀ ರಾಮಕೃಷ್ಣ ಸೇವಾ ಕೇಂದ್ರವನ್ನು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಸ್ಥಾಪಿಸಿ ನಡೆಸ ಲಾಗುತ್ತಿದೆ. ಈ ಗ್ರಾಮದಲ್ಲಿ ಅತಿ ಹಿಂದುಳಿದ ಜನಗಳಿಗೆ ಸುರಕ್ಷಿತ ವಾಗಿ ವಾಸಿಸಲು ಸುಮಾರು 100 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಕಾನೂನಿನ ದೃಷ್ಟಿಯಲ್ಲಿ ಸಮರ್ಪಕವಾಗಿರುವ ವಿಚಾರವನ್ನು ಸರಿಯಾಗಿ ತಿಳಿಯದೆ ಜನರ ಮುಂದೆ ಹಾಗೂ ಮಾಧ್ಯಮದ ಮುಂದೆ ತಪ್ಪು ಮಾಹಿತಿಗಳನ್ನು ನೀಡುವುದು ನ್ಯಾಯಸಮ್ಮತವಲ್ಲ ಎಂದು ಅವರು ಹೇಳಿದ್ದಾರೆ.

ಆದುದರಿಂದ ಉದ್ದೇಶಿತ ವಿವೇಕಸ್ಮಾರಕವು ಕೇವಲ ಸ್ವಾಮಿ ವಿವೇಕಾನಂದರ ಪ್ರತಿಮೆ ಇರುವ ಸ್ಮಾರಕವಲ್ಲದೆ ಒಂದು ಸೇವಾ ಕೇಂದ್ರವಾಗಲಿದೆ. ಸುತ್ತಮುತ್ತಲಿನ ಸಹಸ್ರಾರು ಯುವಜನರಿಗೆ ನೈತಿಕ, ಆಧ್ಯಾತ್ಮಿಕ, ಧಾರ್ಮಿಕ ಶಿಕ್ಷಣ ನೀಡುವ ಸಾಂಸ್ಕøತಿಕ ಕೇಂದ್ರವೂ ಆಗಲಿದೆ. ಅದಲ್ಲದೆ ಪ್ರವಾಸಿ ತಾಣವಾಗಿ ಆಗಿ ಮೈಸೂ ರಿನ ಹಿರಿಮೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸ್ವಾಮಿ ವಿವೇಕಾ ನಂದ ಸಾಂಸ್ಕøತಿಕ ಕೇಂದ್ರವು ಸರ್ವರ ಒಳತಿಗಾಗಿ ರೂಪು ಗೊಂಡು ನೂರಾರು ಯುವಕ, ಯುವತಿಯರಿಗೆ ಮಾರ್ಗದರ್ಶನ ಮಾಡಲು ನೆರವಾದರೆ, ಸ್ಪೂರ್ತಿ ಕೇಂದ್ರವಾಗಲು ಸಹಕಾರ ನೀಡಿದರೆ ಅದರಲ್ಲಿ ಹೆಚ್ಚಿನ ಅರ್ಥವೂ, ಔಚಿತ್ಯವೂ, ಸಮಾಜ ಮುಖಿಯಾದ ಸೇವೆಯೂ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

Translate »