ನಂಜನಗೂಡು ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಹಿಂಸಾಚಾರ
ಮೈಸೂರು

ನಂಜನಗೂಡು ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಹಿಂಸಾಚಾರ

October 14, 2019

ನಂಜನಗೂಡು, ಅ.13(ರವಿ)- ನಂಜನಗೂಡು ಪಟ್ಟಣದಲ್ಲಿ ಇಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತು. ಡಿಜೆ ವಾಹನಕ್ಕೆ ಅವಕಾಶ ನೀಡದ ಕಾರಣಕ್ಕಾಗಿ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದ ಪರಿಣಾಮ ಹಲವಾರು ವಾಹನಗಳು ಜಖಂ ಗೊಂಡವು. ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದು, ಈ ಸಂಬಂಧ 50 ಮಂದಿ ಯನ್ನು ಬಂಧಿಸಿದ್ದಾರೆ. ತಾಲೂಕು ರಾಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿ ಮತ್ತು ನಾಯಕ ಸಮು ದಾಯದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಮೆರವಣಿಗೆಗೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಸಕ ಜಿ. ಹರ್ಷವರ್ಧನ್ ಚಾಲನೆ ನೀಡಿದರು. ಮೆರವಣಿಗೆಯು ಹೆಜ್ಜಿಗೆ ಲಿಂಗಣ್ಣ ವೃತ್ತ ತಲುಪಿದ ವೇಳೆ ಕೆಲವು ಯುವಕರು ಡಿಜೆ ಸಂಗೀತವಿರುವ ಎರಡು ವಾಹನಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲು ಮುಂದಾದರು. ಈ ವೇಳೆ ಸರ್ಕಲ್ ಇನ್ಸ್‍ಪೆಕ್ಟರ್ ಶೇಖರ್ ಅವರು, ಈಗಾಗಲೇ ಒಂದು ಡಿಜೆ ವಾಹನಕ್ಕೆ ಅವಕಾಶ ನೀಡಲಾಗಿದೆ. ಮತ್ತೆರಡು ಡಿಜೆ ವಾಹನಗಳನ್ನು ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ ಎಂದು ತಡೆದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಯುವಕರು ಇದ್ದಕ್ಕಿದ್ದಂತೆ ಕಲ್ಲು ತೂರಾಟದಲ್ಲಿ ತೊಡಗಿದರು. ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳು ಸೇರಿದಂತೆ ಕೆಲ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದರು. ಡಿವೈಎಸ್ಪಿ ಮಲ್ಲಿಕ್ ಸೇರಿದಂತೆ ಕೆಲ ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಗುಂಪನ್ನು ಚದುರಿಸಿದ ನಂತರ ಮಹರ್ಷಿ ವಾಲ್ಮೀಕಿ ರಥವನ್ನು ಬಿಗಿ ಭದ್ರತೆಯೊಂದಿಗೆ ಸಮಾರಂಭ ನಡೆಯಲಿದ್ದ ಶ್ರೀಕಂಠೇಶ್ವರ ಸ್ವಾಮಿ ಕಲಾಮಂದಿರಕ್ಕೆ ಕೊಂಡೊಯ್ದರು.

ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಬಳಿಯೂ ಕೆಲವರು ಖುರ್ಚಿಗಳನ್ನು ತೂರಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಪರಿಸ್ಥಿತಿ ತಿಳಿಯಾಯಿತು. ಆ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಿ. ಹರ್ಷವರ್ಧನ್, ಅತಿವೃಷ್ಟಿ ಮತ್ತು ಅನಾವೃಷ್ಟಿ ಹಿನ್ನೆಲೆಯಲ್ಲಿ ಸರಳವಾಗಿ ವಾಲ್ಮೀಕಿ ಜಯಂತಿ ಆಚರಿಸಲು ನಾನು ತಿಳಿಸಿದ್ದೆ. ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಿರುವುದು ವಿಷಾದಕರ. ಇದರಿಂದ ಮನಸ್ಸಿಗೆ ನೋವಾಗಿದೆ ಎಂದು ಹೇಳಿದರಲ್ಲದೆ, ಗಲಭೆಯಲ್ಲಿ ಬಂಧಿತರಾಗಿರುವವರ ವಿರುದ್ಧ ಕೇಸ್ ದಾಖಲಿಸದಂತೆ ಪೊಲೀಸರಿಗೆ ಸೂಚಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವಿಶ್ವದ ಅತ್ಯಂತ ಶ್ರೇಷ್ಠ ಕೃತಿ ಎಂದು ಹೆಗ್ಗಳಿಕೆ ಪಡೆದಿರುವ ರಾಮಾಯಣ ರಚಿಸಿರುವ ಮಹರ್ಷಿ ವಾಲ್ಮೀಕಿ ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ಹೇಳಿದರು. ಪ್ರಾಧ್ಯಾಪಕಿ ಸುತ್ತೂರು ಎಸ್.ಮಾಲಿನಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಯೋಧ ಕಳಲೆ ಮಹೇಶ್, ಪ್ರಗತಿಪರ ರೈತ ದಿಡ್ಡಹಳ್ಳಿ ರಾಮನಾಯಕ, ಚಿತ್ರ ಕಲಾವಿದ ಹಾರೋಹಳ್ಳಿ ರಂಗಸ್ವಾಮಿ, ಪತ್ರಿಕಾ ಛಾಯಾಗ್ರಾಹಕ ಸುತ್ತೂರು ನಂಜುಂಡನಾಯಕ ಅವರನ್ನು ಸನ್ಮಾನಿಸಲಾಯಿತು. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿವೈಎಸ್ಪಿ ಮಲ್ಲಿಕ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಗಲಭೆ ವೇಳೆ ಹಣ ಮತ್ತು ಎಟಿಎಂ ಕಾರ್ಡ್ ಇದ್ದ ಪರ್ಸ್ ಕೆಳಗೆ ಬಿದ್ದಿದ್ದು, ಅದನ್ನು ಸಾರ್ವಜನಿಕರೊಬ್ಬರು ನನಗೆ ತಲುಪಿಸಿದ್ದಾರೆ. ಗಲಭೆ ಸಂದರ್ಭದಲ್ಲಿ ನನ್ನ ಸಮವಸ್ತ್ರದಲ್ಲಿದ್ದ ನೇಮ್‍ಪ್ಲೇಟ್ ಕಿತ್ತು ಕೆಳಗೆ ಬಿದ್ದುಹೋಗಿದೆ. ಅದು ದೊರೆಯಲಿಲ್ಲ ಎಂದರು.

Translate »