ಅದ್ಧೂರಿ ಮಹರ್ಷಿ ವಾಲ್ಮೀಕಿ ಜಯಂತಿ
ಮೈಸೂರು

ಅದ್ಧೂರಿ ಮಹರ್ಷಿ ವಾಲ್ಮೀಕಿ ಜಯಂತಿ

October 14, 2019

ಮೈಸೂರು,ಅ.13(ಆರ್‍ಕೆಬಿ)- ವಿಶ್ವಕ್ಕೆ `ವಾಲ್ಮೀಕಿ ರಾಮಾಯಣ’ ಪವಿತ್ರ ಗ್ರಂಥ ನೀಡಿದ ಮಹಾನ್ ಚೇತನ ಮಹರ್ಷಿ ವಾಲ್ಮೀಕಿ. ರಾಮರಾಜ್ಯದ ಕನಸು ಹೊಂದಿದ್ದ ಅವರ ಪ್ರತಿಮೆ ಮೈಸೂರಿನಲ್ಲಿ ಇಲ್ಲದಿರುವುದು ತಲೆ ತಗ್ಗಿಸುವ ವಿಚಾರ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ ಮತ್ತು ನಾಯಕ ಸಂಘಟನೆಗಳು ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಿನಿ ವಿಧಾನ ಸೌಧದ ಮುಂದಿನ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಗಳಿದ್ದು, ಇದಕ್ಕಾಗಿ ಸಮುದಾಯದ ಕೆಲ ಮುಖಂಡರು ನಗರಪಾಲಿಕೆ ಕಚೇರಿ ಮುಂದೆ ನಡೆಸಿದ್ದ ಧರಣಿ ಸ್ಥಳಕ್ಕೆ ತಾವು ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದರು. ಅಲ್ಲಿ ಪ್ರತಿಮೆ ಸ್ಥಾಪಿಸುವ ಸಂಬಂಧ ನಗರಪಾಲಿಕೆ ಠರಾವು ಪೆಂಡಿಂಗ್ ಇದೆ. ಶಾಸಕರು, ಸಂಸದರು ಇನ್ನಿತರ ಜನಪ್ರತಿನಿಧಿಗಳು ನಾವಿದ್ದೇವೆ. ಮುಂದಿನ ತಿಂಗಳು ಆ ಜಾಗದಲ್ಲಿ ಅತ್ಯುತ್ತಮವಾದ ವಾಲ್ಮೀಕಿ ಪ್ರತಿಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಶ್ರೀರಾಮುಲು ಮುಂದೆ ಡಿಸಿಎಂ ಆಗ್ತಾರೆ: ಸಚಿವ ಶ್ರೀರಾಮುಲು ನಾಯಕ ಸಮುದಾಯದ ಮುಖಂಡ. ಸ್ವಲ್ಪದರಲ್ಲಿ ಉಪಮುಖ್ಯ ಮಂತ್ರಿ ಸ್ಥಾನ ತಪ್ಪಿರಬಹುದು, ಮುಂದೆ ಖಂಡಿತ ಅವರು ಉಪಮುಖ್ಯಮಂತ್ರಿ ಆಗುತ್ತಾರೆ ಎಂದು ಅವರು ಹೇಳುತ್ತಿದ್ದಂತೆ ಸಭಿಕರಿಂದ ಭಾರೀ ಕರತಾಡನ ಕೇಳಿಬಂತು.

ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಕಚೇರಿ ಎದುರು ಇರುವ ಜಾಗದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸುವ ಸಂಬಂಧ ತಾವು ಪಾಲಿಕೆಗೆ ಸಭೆಗೆ ಹೋಗುವುದಾಗಿ ತಿಳಿಸಿದರು. ಮೈಸೂರಿನಲ್ಲಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಪ್ರತಿಮೆಗಳನ್ನು ಸ್ಥಾಪಿ ಸಿದ್ದೇವೆ. ಅಂದ ಮೇಲೆ ವಾಲ್ಮೀಕಿ ಮಹರ್ಷಿ ಪ್ರತಿಮೆ ಸ್ಥಾಪನೆಯೂ ಮಾಡುತ್ತೇವೆ. ಯಾವುದೇ ಅಡೆ-ತಡೆ ಬಂದರೂ ಸ್ಥಾಪನೆ ಮಾಡು ತ್ತೇವೆ. ಮುಂದಿನ ವರ್ಷದ ವಾಲ್ಮೀಕಿ ಜಯಂತಿ ಒಳಗಾಗಿ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದರು.

ಆಸನಗಳು ಭರ್ತಿ: ಸಾಮಾನ್ಯವಾಗಿ ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮ ಸಂದರ್ಭದಲ್ಲಿ ಖಾಲಿ ಹೊಡೆಯುತ್ತಿದ್ದ ಕಲಾಮಂದಿರದ ಆಸನಗಳು ಭಾನುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ತುಂಬಿ ತುಳುಕಿತ್ತು. ಎಲ್ಲಾ ಆಸನಗಳು ಭರ್ತಿಯಾಗಿ ನೂರಾರು ಮಂದಿ ನಿಂತು ಕಾರ್ಯಕ್ರಮ ವೀಕ್ಷಿಸಿದರು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಉಪಮೇಯರ್ ಷಫೀ ಅಹಮದ್, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ, ನಗರಪಾಲಿಕೆ ಸದಸ್ಯರಾದ ಶಿವಕುಮಾರ್, ಲೋಕೇಶ್‍ಪಿಯಾ, ನಾಯಕರ ಸಂಘದ ಅಧ್ಯಕ್ಷ ಕೆಂಪನಾಯಕ, ರಮ್ಮನಹಳ್ಳಿ ವೆಂಕಟಯ್ಯ, ಉದ್ಬೂರು ಮಹದೇವಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

ಅದ್ಧೂರಿ ಮೆರವಣಿಗೆ: ಇದಕ್ಕೂ ಮುನ್ನ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಅಲಂಕೃತ ವಾಹನದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸ ಲಾಯಿತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಕಲಾಮಂದಿರ ದವರೆಗೆ ನಡೆದÀ ಮೆರವಣಿಗೆಯಲ್ಲಿ ವಿವಿಧ ವೇಷಧಾರಿಗಳು, ಜಾನಪದ ಕಲಾತಂಡಗಳು ಆಕರ್ಷಣೆಯಾಗಿದ್ದವು. ಮೇಯರ್ ಪುಷ್ಪಲತಾ ಜಗನ್ನಾಥ್ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಂ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ನಾಯಕ ಸಂಘದ ಜಿಲ್ಲಾಧ್ಯಕ್ಷ ಕೆಂಪ ನಾಯಕ ಇನ್ನಿತರರು ಭಾಗವಹಿಸಿದ್ದರು. ನೂರೊಂದು ಮಹಿಳೆಯರು ಕಳಸ ಹೊತ್ತು ಮೆರವಣಿಗೆಗೆ ಕಳೆ ತಂದರು. ನಂದಿಕಂಬ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಕಂಸಾಳೆ, ಮಳವಳ್ಳಿಯ ಬಾಲಕ-ಬಾಲಕಿಯ ತಂಡದಿಂದ ದೊಣ್ಣೆ ವರಸೆ, ಪಟ ಕುಣಿತ, ಯಕ್ಷಗಾನ ಕುಣಿತ, ಮರಗಾಲು ಮನುಷ್ಯ, ಉದ್ಬೂರಿನ ವೀರಮಕ್ಕಳ ಕುಣಿತ, ವೀರಭದ್ರ ಕುಣಿತ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ವಿವಿಧ ಟಾಂಗಾಗಳಲ್ಲಿ ವೀರ ಮದಕರಿ ನಾಯಕ, ಕೆಳದಿ ಶಿವಪ್ಪ ನಾಯಕ, ಎಚ್ಚೆಮನಾಯಕ, ಬೇಡರ ಕಣ್ಣಪ್ಪ, ಏಕಲವ್ಯ, ರಾಜಾ ವೆಂಕಟಪ್ಪನಾಯಕ, ಗಂಡುಗಲಿ ಕುಮಾರರಾಮ, ಬಿಚ್ಚುಗತ್ತಿ ಭರಮಣ್ಣ ನಾಯಕ, ಕಾರಗಳ್ಳಿ ಮಾರನಾಯಕ ಇನ್ನಿತರ ನಾಯಕರ ವೇಷಧಾರಿಗಳು ಗಮನ ಸೆಳೆದರು. ನಾಯಕ ಹೋರಾಟಗಾರ ವೇಷಧಾರಿಗಳು ಕುದುರೆ ಮೇಲೂ ಆಗಮಿಸಿ ಗತಕಾಲದ ನಾಯಕಮಣಿಗಳನ್ನು ನೆನಪಿಸಿದರು. ಮಹರ್ಷಿ ವಾಲ್ಮೀಕಿ ಅವರು ಶಿಷ್ಯರಿಗೆ ಪಾಠ ಹೇಳುತ್ತಿರುವ ಗುರುಕುಲ ಸ್ತಬ್ಧ ಚಿತ್ರವೂ ಹೆಚ್ಚು ಆಕರ್ಷಿಸಿತು.

ಮೆರವಣಿಗೆ ಕೆ.ಆರ್.ವೃತ್ತಕ್ಕೆ ಬರುತ್ತಿದ್ದಂತೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ಇನ್ನಿತರರು ಉಪಸ್ಥಿತರಿದ್ದರು.

Translate »