ಮೈಸೂರು, ಅ.13(ಆರ್‍ಕೆಬಿ)- ವಿಜಯದಶಮಿ ಮೆರವಣಿಗೆ ನಂತರ ಮೈಸೂರಿನ ಚಾಮುಂಡೇಶ್ವರಿ ರಥೋತ್ಸವ ಭಾನುವಾರ ಅಪಾರ ಭಕ್ತ ಸಮೂಹದ ನಡುವೆ ಭಕ್ತಿ ಭಾವದಿಂದ ಅದ್ಧೂರಿಯಾಗಿ ನೆರವೇರಿತು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಧಾರ್ಮಿಕ ಕೈಂಕರ್ಯವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ತಾಯಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾದರು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಳಿಗ್ಗೆ 6.48ರಿಂದ 7.18 ಗಂಟೆಯೊಳಗೆ ಶುಭ ತುಲಾ ಲಗ್ನದಲ್ಲಿ ವೈಭ ವದ ಚಾಮುಂಡೇಶ್ವರಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡ, ಮೇಯರ್ ಪುಷ್ಪಲತಾ ಜಗನ್ನಾಥ್ ಅವರೊಂದಿಗೆ ಹಗ್ಗ ಹಿಡಿದು ರಥವನ್ನು ಎಳೆಯುವ ಮೂಲಕ ಯದುವೀರ್ ಅವರು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಭಕ್ತಸಾಗರ ದೇವಿಗೆ ಕೈಮುಗಿದು, ಹಷೋದ್ಗಾರದಿಂದ `ಜೈ ಚಾಮುಂಡಿ’ ಘೋಷಣೆ ಮುಗಿಲು ಮುಟ್ಟಿತು. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತ ರಥವು ಯಾವುದೇ ಅಡ್ಡಿ ಆತಂಕ ವಿಲ್ಲದೆ ಸರಾಗವಾಗಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿತು.
ಅಲಂಕೃತ ರಥಧಲ್ಲಿ ಆಸೀನರಾಗಿದ್ದ ತಾಯಿ ಚಾಮುಂಡೇಶ್ವರಿ ಉತ್ಸವ ಮೂತಿರ್ಯ ದರ್ಶನ ಪಡೆದ ಭಕ್ತಾದಿಗಳು ಭಕ್ತಿ ಪರವಶರಾಗಿ ರಥಕ್ಕೆ ಹಣ್ಣು-ಧವನ ಎಸೆದು ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಂತೆಯೇ ದೇವಸ್ಥಾನ ದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಪ್ರಧಾನ ಅರ್ಚಕ ಶಶಿಧರ ದೀಕ್ಷಿತ್ ನೇತೃತ್ವದಲ್ಲಿ ಆಗಮಿಕರು ಮಂಗಳವಾದ್ಯದೊಡನೆ ತಂದು ದೇವಸ್ಥಾನದ ಹೊರಗೆ ನಿಂತಿದ್ದ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿದರು. ನಂತರ ರಥ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ಒಂದು ಪ್ರದಕ್ಷಿಣೆ ಹಾಕಿದ ಬಳಿಕ ಮೊದಲಿದ್ದ ಸ್ಥಳದಲ್ಲಿ ಬಂದು ಸೇರಿತು.
ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತ ಸಮೂಹ ರಥದಲ್ಲಿ ವಿರಾಜ ಮಾನಳಾಗಿದ್ದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಸಂಜೆವರೆಗೂ ಧವನ-ಬಾಳೆಹಣ್ಣು ಸಮರ್ಪಿಸಿ ಪುನೀತರಾದರು. ನವರಾತ್ರಿ ಮಹೋತ್ಸವ ನಂತರ ನಡೆದ ಈ ವೈಭವ ನೋಡಲು ಭಕ್ತರು ದೇವಸ್ಥಾನದ ಮೇಲೆ, ಆವರಣದಲ್ಲೂ ಕಿಕ್ಕಿರಿದು ನೆರೆದಿದ್ದರು. ರಥೋತ್ಸವದ ಅಂಗವಾಗಿ ಭಾನುವಾರ ರಾತ್ರಿಯವರೆಗೂ ನಿರಂತರವಾಗಿ ಭಕ್ತರು, ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ರಥೋತ್ಸವದ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯದುವೀರ್ ಪತ್ನಿ ತ್ರಿಷಿಕ ಒಡೆಯರ್ ಅವರು ರಥೋತ್ಸವ ಸಾಗುವ ಮಾರ್ಗದಲ್ಲಿ ನಿಂತು ಚಾಮುಂಡೇಶ್ವರಿಗೆ ನಮಿಸಿದರು. ರಥೋತ್ಸವದ ಉದ್ದಕ್ಕೂ ಪೊಲೀಸ್ ಸಿಡಿಮದ್ದುಗಳ ಆರ್ಭಟ ಜೋರಾಗಿತ್ತು. ಚಾಮುಂಡಿ ಬೆಟ್ಟ ದೇವಸ್ಥಾನದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್.ಯತಿರಾಜ್ ಸಂಪತ್‍ಕುಮಾರನ್, ತಹಸೀಲ್ದಾರ್ ರಮೇಶ್‍ಬಾಬು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಕಾಳಯ್ಯ ಇನ್ನಿತರರು ಉಪಸ್ಥಿತರಿದ್ದರು. ರಥೋತ್ಸವದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಭಾರೀ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರ ವಾಹನಗಳನ್ನು ರಥೋ ತ್ಸವದ ಮಾರ್ಗದ ಬಳಿಕೆ ಹೋಗದಂತೆ ಸಂಚಾರ ವಿಭಾಗದ ಪೊಲೀಸರು ಕಾರು, ಬೈಕ್ ಇನ್ನಿತರೆ ವಾಹನಗಳನ್ನು ನೂತನವಾಗಿ ನಿರ್ಮಿಸಲಾಗಿರುವ ಬಹುಮಹಡಿ ಪಾರ್ಕಿಂಗ್ ನತ್ತ ಹೋಗುವಂತೆ ಸೂಚಿಸುತ್ತಿದ್ದರು. ಹೀಗಾಗಿ ನೂರಾರು ಕಾರು, ಬೈಕ್‍ಗಳು ಬಹು ಮಹಡಿ ಪಾರ್ಕಿಂಗ್‍ನಲ್ಲಿಯೇ ನಿಲ್ಲಿಸಿದ್ದರಿಂದ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರು ಸರಾಗವಾಗಿ ಓಡಾಡಿ ಚಾಮುಂಡೇಶ್ವರಿ ದರ್ಶನ ಪಡೆಯಲು ಅನುಕೂಲವಾಗಿತ್ತು.