ಮಹಾತ್ಮರ ಸ್ಮರಣೆಯಿಂದ ನಮ್ಮ ಆತ್ಮಾವಲೋಕನ ಸಾಧ್ಯ ಸುತ್ತೂರು ಶ್ರೀಗಳ ಅಭಿಮತ
ಮೈಸೂರು

ಮಹಾತ್ಮರ ಸ್ಮರಣೆಯಿಂದ ನಮ್ಮ ಆತ್ಮಾವಲೋಕನ ಸಾಧ್ಯ ಸುತ್ತೂರು ಶ್ರೀಗಳ ಅಭಿಮತ

January 25, 2019

ಸುತ್ತೂರು: ಮಹಾತ್ಮರ ಸ್ಮರಣೆ ಮತ್ತು ದರ್ಶನ ಮಾಡುವುದರಿಂದ ಪ್ರತಿಯೊಬ್ಬರಿಗೂ ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿಯವರು ನುಡಿದರು.

ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1059ನೆಯ ಜಯಂತಿ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಿವಮೊಗ್ಗದ ಕಾರ್ಯಕರ್ತರಿಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಶ್ರೀಗಳು ಶಿವಮೊಗ್ಗದಲ್ಲಿ ಆಯೋಜನೆಗೊಂಡಿದ್ದ ಜಯಂತಿ ಮಹೋತ್ಸವವನ್ನು ಶಿವಮೊಗ್ಗದ ಜನತೆ ಶ್ರದ್ಧೆ, ಭಕ್ತಿ, ಶಿಸ್ತು ಮತ್ತು ಆಸಕ್ತಿಯಿಂದ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿಗಳು, ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಜಯಂತಿ ಸಮಿತಿಯ ಮಹಾಪೋಷಕರಾದ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಶಿವಮೊಗ್ಗದಲ್ಲಿ ಶಿವರಾತ್ರೀಶ್ವರ ಜಯಂತಿ ಮಹೋತ್ಸವದ ಆರಂಭದ ದಿನಗಳಲ್ಲಿ ಜನ ಸೇರುತ್ತಾರೋ, ಇಲ್ಲವೋ ಎಂಬ ಆತಂಕ ಮನೆ ಮಾಡಿತ್ತು. ಆದರೆ ಎಲ್ಲರ ಪರಿಶ್ರಮದಿಂದ ವಸ್ತುಪ್ರದರ್ಶನ, ವಿಚಾರಗೋಷ್ಠಿ, ಭಾವೈಕ್ಯತಾ ಯಾತ್ರೆ ವೇದಿಕೆ ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯವು ಸಹಸ್ರಾರು ಜನ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿದರು ಎಂದು ಸಂತಸ ವ್ಯಕ್ತಪಡಿಸಿದರು.

ಶಿವಮೊಗ್ಗದ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ಸರ್ವಜನಾಂಗವು ಪರಸ್ಪರ ಹೆಗಲೆಣೆÉಯಾಗಿ ನಡೆಸಿಕೊಟ್ಟ ಜಯಂತಿ ಮಹೋತ್ಸವವು ‘ತಡವಾಗಿಯಾದರೂ ಅರಿವಾಗುವಂತಾಯಿತು’ ಎಂಬಂತೆ ಅನ್ವರ್ಥವಾಯಿತು ಎಂದು ನುಡಿದರು.

ಜಡೆ ಶ್ರೀ ಸಂಸ್ಥಾನ ಮಠದ ಡಾ.ಶ್ರೀ ಮಹಾಂತಸ್ವಾಮಿಗಳು ಜಯಂತಿ ಮಹೋತ್ಸವವು ಜನಮಾನಸದಲ್ಲಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿತು ಎಂದು ನುಡಿದರು.

ವಿಧಾನಪರಿಷತ್ ಸದಸ್ಯರು ಹಾಗೂ ಜಯಂತಿ ಸಮಿತಿ ಅಧ್ಯಕ್ಷರಾದ ಎಸ್.ರುದ್ರೇಗೌಡ, ಯುವಜನತೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕøತಿಕ ಬೀಜಗಳನ್ನು ಬಿತ್ತುವ ಕೆಲಸವನ್ನು ಜಯಂತಿ ಮಹೋತ್ಸವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಜಯಂತಿ ಸಮಿತಿ ಸದಸ್ಯರಾದ ಬಾರಂದೂರು ಪ್ರಕಾಶ್, ಜಯಂತಿ ಮಹೋತ್ಸವದಿಂದ ನಮ್ಮಲ್ಲಿರುವ ಸತ್ವವನ್ನು ಸದ್ವಿನಿಯೋಗ ಮಾಡಿಕೊಳ್ಳುವ ಅವಕಾಶ ದೊರಕಿತು ಎಂದರು.
ಚಾಮರಾಜನಗರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ನಾಗಶ್ರೀ ಪ್ರತಾಪ್ ಜಯಂತಿ ಮಹೋತ್ಸವದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿದ್ದು ಸಂತಸದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಶ್ರದ್ಧಾಂಜಲಿ ಗೌರವ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸದರಾದ ಪ್ರತಾಪ್‍ಸಿಂಹ, ಶಾಸಕರುಗಳಾದ ಎಲ್.ನಾಗೇಂದ್ರ, ಸಿ.ಎಸ್.ನಿರಂಜನ್‍ಕುಮಾರ್, ರವಿಕುಮಾರ್, ಮಾಜಿ ಸಚಿವರಾದ ಎಂ.ಶಿವಣ್ಣ, ಮಾಜಿ ಶಾಸಕರಾದ ಭಾರತಿ ಶಂಕರ್, ಸಿ.ರಮೇಶ್, ಮಹದೇವಯ್ಯ, ತೋಂಟದಾರ್ಯ, ಕೆ.ಶಿವರಾಂ ಇತರರು ಉಪಸ್ಥಿತರಿದ್ದರು. ಪ್ರೊ ಡಿ.ಎಸ್.ಸದಾಶಿವಮೂರ್ತಿ ಅಭಿನಂದನಾ ನುಡಿಗಳನ್ನಾಡಿದರು. ಶಾಲಾ ಮಕ್ಕಳು ಪಾರ್ಥನೆ ಸಲ್ಲಿಸಿದÀರು. ಜಿ.ಎಲ್.ತ್ರಿಪುರಾಂತಕ ಸ್ವಾಗತಿಸಿದರು. ಬಿ.ನಿರಂಜನಮೂರ್ತಿ ವಂದಿಸಿದರು. ಡಾ.ರೇಚಣ್ಣ ನಿರೂಪಿಸಿದರು.

Translate »