ಬಿಎಸ್‍ಪಿಯತ್ತ ಮುಖ ಮಾಡಿದ ಜೆ.ಜೆ.ಆನಂದ
ಮೈಸೂರು

ಬಿಎಸ್‍ಪಿಯತ್ತ ಮುಖ ಮಾಡಿದ ಜೆ.ಜೆ.ಆನಂದ

March 23, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮಾ.19 ರಂದು ನಾಮಪತ್ರ ಸಲ್ಲಿಸಿದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಓಬಿಸಿ ಘಟಕದ ಉಪಾಧ್ಯಕ್ಷ ಜೆ.ಜೆ. ಆನಂದ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ದತ್ತ ಮುಖ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬಿಎಸ್‍ಪಿ ರಾಜ್ಯ ಉಸ್ತುವಾರಿಯೂ ಆದ ಉತ್ತರ ಪ್ರದೇಶ ಮಾಜಿ ಎಂಎಲ್‍ಸಿ ಎಂ.ಎನ್.ತೋಮರ್, ಪಕ್ಷದ ರಾಜ್ಯ ಸಂಯೋಜಕ, ಶಾಸಕ ಎನ್.ಮಹೇಶ್, ರಾಜ್ಯಾಧ್ಯಕ್ಷ ಪ್ರೊ.ಹರಿರಾಂ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಜೆ.ಜೆ.ಆನಂದ ಭಾಗವಹಿಸಿದ್ದರು. ಇದೀಗ ಅವರು ಮೈಸೂರು-ಕೊಡಗು ಕ್ಷೇತ್ರದ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾಗಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಮೈಸೂರು-ಲೋಕಸಭಾ ಕ್ಷೇತ್ರದಿಂದ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯು ತ್ತಿದ್ದ ಸಂದರ್ಭದಲ್ಲಿ ಜೆ.ಜೆ.ಆನಂದ ಅವರ ಹೆಸರು ಪ್ರಸ್ತಾಪವಾಗಿ ಅವರನ್ನು ಅಧಿಕೃತ ವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾಗಿ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಉಸ್ತುವಾರಿ ಅರಕಲವಾಡಿ ನಾಗೇಂದ್ರ, ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ಮೈಸೂರು ಜಿಲ್ಲಾಧ್ಯಕ್ಷ ಪ್ರಭುಸ್ವಾಮಿ, ನಗರ ಅಧ್ಯಕ್ಷ ಬಸವರಾಜು ಸೇರಿದಂತೆ ಇನ್ನಿತ ರರು ಪಾಲ್ಗೊಂಡಿದ್ದರು.

26ರಂದು ನಾಮಪತ್ರ: ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಜೆ.ಜೆ.ಆನಂದ, ತಾನು ಕಾಂಗ್ರೆಸ್ ನಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದೇನೆ. ಜೊತೆಗೆ ಪಕ್ಷೇತರನಾಗಿಯೂ ಉಮೇದುವಾರಿಕೆ ಸಲ್ಲಿಸಿದ್ದೇನೆ. ಆದರೆ ಕಾಂಗ್ರೆಸ್‍ನ ಇತ್ತೀಚಿನ ನಡವಳಿಕೆಗಳಿಂದ ಬೇಸತ್ತು, ಮಾ.23ರಂದು ಬಿಎಸ್‍ಪಿಗೆ ಸೇರ್ಪಡೆ ಯಾಗುತ್ತಿದ್ದೇನೆ. ಮಾ.26ರಂದು ಬಿಎಸ್‍ಪಿಯ ರಾಜ್ಯ ಸಂಯೋಜಕ, ಮಾಜಿ ಸಚಿವ, ಹಾಲಿ ಶಾಸಕ ಎನ್.ಮಹೇಶ್ ಮತ್ತು ಪಕ್ಷದ ಮೈಸೂರು ನಗರಾಧ್ಯಕ್ಷ ಬಸವರಾಜು ಅವರೊಂದಿಗೆ ನಾಮಪತ್ರ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.

Translate »