ಹುತಾತ್ಮ ವೀರ ಯೋಧರಿಗೆ ಭಾವಪೂರ್ಣ ನಮನ
ಮೈಸೂರು

ಹುತಾತ್ಮ ವೀರ ಯೋಧರಿಗೆ ಭಾವಪೂರ್ಣ ನಮನ

March 23, 2019

ಮೈಸೂರು: ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುಲ್ವಾಮಾದಲ್ಲಿ ಮಡಿದ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಕೆ.ಸತ್ಯನಾರಾಯಣ ಅವರು ಮಡಿದ ಸೈನಿಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ ಅನ್ನ ನೀಡುವ ರೈತರು ಹಾಗೂ ದೇಶಕಾಯುವ ಯೋಧರು ದೇವರಿಗೆ ಸಮಾನ. ತಮ್ಮ ಪ್ರಾಣದ ಹಂಗನ್ನು ತೊರೆದು ನಮ್ಮೆಲ್ಲರ ರಕ್ಷಣೆಗೆ ಸದಾ ಬದ್ಧರಾಗಿ ನಿಂತಿರುವ ಸೈನಿಕರ ಹೆಮ್ಮೆಯ ಕಾರ್ಯಕ್ಕೆ ನಾವೆಲ್ಲರೂ ಗೌರವ ಸಲ್ಲಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ.

ಸೈನಿಕ ವೃತ್ತಿಯಲ್ಲಿ ಎಲ್ಲರೂ ಒಂದೇ ಜಾತಿ ಹಾಗೂ ಒಂದೇ ತಾಯಿಯ ಮಕ್ಕಳಂತೆ ಸಮಾನ ರೀತಿಯಲ್ಲಿ ಇರುತ್ತಾರೆ, ಸ್ವಾರ್ಥ ಸಾಧನೆಗೆ ಮುನ್ನುಗ್ಗುತ್ತಿರುವ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸುವುದೇ ಸೈನಿಕರ ಮುಖ್ಯ ಗುರಿಯಾಗಿದೆ. ಹುತಾತ್ಮರಾದ ಯೋಧರನ್ನು ಸ್ಮರಿಸಿ ಅವರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಸಮಾಜದ ಸೌಹಾರ್ದತೆಯನ್ನು ಕೆಡಿಸಿ – ಕಂಗೆಡಿಸಿ – ಮನಸ್ಸು ಮನಸ್ಸುಗಳ ನಡುವೆ ವಿಷ ಬೀಜ ಬಿತ್ತುವ, ದಾಳಿ ಮಾಡುವ ಶತ್ರು ಸೈನ್ಯವನ್ನು ನಾಶ ಮಾಡಿ ರಾಜ್ಯದ ಸುಭಿಕ್ಷತೆಗಾಗಿ ಹಗಲು ರಾತ್ರಿ ಎನ್ನದೆ ತಮ್ಮ ರಕ್ತವನ್ನು ಹರಿಸುತ್ತಿರುವ ಹೆಮ್ಮೆಯ ಸೈನಿಕರಿಗೆ ನುಡಿನಮನ ಸಲ್ಲಿಸಬೇಕಿದೆ ಎಂದರು. ಪ್ರಾಂಶುಪಾಲರಾದ ಡಾ. ಎಂ. ಶಾರದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ.ಜಿ.ಪ್ರಸಾದಮೂರ್ತಿ, ಎಲ್ಲಾ ವಿಭಾಗದ ಮುಖ್ಯ ಸ್ಥರು, ಸಹಾಯಕ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕು. ಜ್ಯೋತಿ ಸ್ವಾಗತಿಸಿದರೆ, ಕು. ಮೋನಿಷಾ ನಿರೂಪಿಸಿ ಕು. ಮಮತಾ ವಂದಿಸಿದರು.

Translate »