ದಸರೆಯೊಳಗೆ ಜಗನ್ಮೋಹನ ಅರಮನೆ ಪ್ರವಾಸಿಗರ ವೀಕ್ಷಣೆಗೆ ಲಭ್ಯ
ಮೈಸೂರು

ದಸರೆಯೊಳಗೆ ಜಗನ್ಮೋಹನ ಅರಮನೆ ಪ್ರವಾಸಿಗರ ವೀಕ್ಷಣೆಗೆ ಲಭ್ಯ

September 17, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವಸ್ತು ಸಂಗ್ರಹಾಲಯಗಳಲ್ಲಿ ಒಂದಾದ ರಾಜಮನೆತನಕ್ಕೆ ಸೇರಿರುವ ಜಗನ್ಮೋಹನ ಅರಮನೆಯ ವಸ್ತು ಸಂಗ್ರಹಾಲಯವು ಆಧುನಿಕ ರೂಪ ತಾಳುತ್ತಿದ್ದು, ದಸರೆಯೊಳಗೆ ಸುಸಜ್ಜಿತ ಸಂಗ್ರಹಾಲಯದ ವೀಕ್ಷಣೆಗೆ ಲಭ್ಯವಾಗಲಿದೆ.

ನವೀಕರಣಗೊಳ್ಳುತ್ತಿರುವ ಜಗನ್ಮೋಹನ ಅರಮನೆಯ ಕಾಮಗಾರಿಯನ್ನು ಭಾನುವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ, ದಸರಾ ಮಹೋತ್ಸವಕ್ಕೂ ಮುನ್ನ ನವೀಕರಣಗೊಂಡ ಜಗನ್ಮೋಹನ ಅರಮನೆಯ ವಸ್ತು ಸಂಗ್ರಹಾಲಯವನ್ನು ವೀಕ್ಷಿಸುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ನಮ್ಮದಾಗಿದೆ. ಕಳೆದ ಒಂದು ವರ್ಷದಿಂದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ವಸ್ತು ಸಂಗ್ರಹಾಲಯದ ಕಟ್ಟಡದಲ್ಲಿದ್ದ ನಾಲ್ಕು ಆವರಣವನ್ನು ನವೀಕರಿಸಲಾಗುತ್ತಿದೆ. ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಶಿಥಿಲಗೊಂಡಿದ್ದರಿಂದ ಅದರ ಕಾಮಗಾರಿ ನಡೆಯುತ್ತಿದೆ ಎಂದರು.

ಯದುವಂಶದ ಮಹಾರಾಜ ಶ್ರೀಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ವಸ್ತು ಸಂಗ್ರಹಾಲಯ ನವೀಕರಣಗೊಳಿಸಿ ನಮ್ಮ ಮಾವನವರ ಜನ್ಮದಿನಕ್ಕೆ ಉಡುಗೊರೆಯಾಗಿ ಅರ್ಪಿಸಲಾಗುತ್ತದೆ. ಜಗನ್ಮೋಹನ ಅರಮನೆ ನೂರು ವರ್ಷ ಹಳೆಯದಾದ ಕಟ್ಟಡವಾಗಿದೆ. ಅದನ್ನು ಕಾಪಾಡುವ ನಿಟ್ಟಿನಲ್ಲಿ ದುರಸ್ತಿ ಮಾಡಲಾಗುತ್ತಿದೆ. ಈಗಾಗಲೇ ನವೀಕರಣ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದ್ದು, ಶೇ.40ರಷ್ಟು ಬಾಕಿ ಉಳಿದಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ದಸರಾ ಒಳಗೆ ಮುಗಿಸಬೇಕು ಎನ್ನುವ ಅಭಿಲಾಷೆ ನಮ್ಮದಾಗಿದೆ. ಮುಂದಿನ 100 ವರ್ಷಗಳ ಕಾಲ ಪೇಂಟಿಂಗ್ ಸೇರಿ ಯಾವುದೇ ವಸ್ತುಗಳು ಹಾನಿಗೀಡಾಗದಂತೆ ಸಂರಕ್ಷಿಸಲಾಗುತ್ತದೆ ಎಂದು ಹೇಳಿದರು.

ಸುಮಾರು 70 ಕಲಾವಿದರು ರಾತ್ರಿ 12 ಗಂಟೆ ತನಕ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಜಿ.ಎನ್.ಹೆರಿಟೇಜ್ ಸಂಸ್ಥೆಗೆ ಕಟ್ಟಡದ ನವೀಕರಣ ಕಾಮಗಾರಿಯ ಜವಾಬ್ದಾರಿ ನೀಡಲಾಗಿದೆ. ಕಾಮಗಾರಿಗೆ ಯಾವುದೇ ಬಜೆಟ್ ನಿಗದಿಪಡಿಸದೆ ಕಾಮಗಾರಿ ನಡೆಸಲಾಗುತ್ತಿದೆ. ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆಬಾರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ನವೀಕರಣದ ಕಾಮಗಾರಿಗಾಗಿ ಇದುವರೆಗೆ ಕಟ್ಟಡದ ಗೋಡೆಗಳಿಗೆ ಬಳಿಯಲಾಗಿದ್ದ 13 ಪದರ ಬಣ್ಣಗಳನ್ನು ತೆಗೆದು ನೈಜರೂಪದ ಗೋಡೆಗಳನ್ನು ಜನರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೆ ಬಾಗಿಲಿನ ವಾಲ್ಕಾಲ್‍ನಲ್ಲಿ ಈ ಹಿಂದೆ ಕೆತ್ತನೆ ಮಾಡಲಾಗಿದ್ದ ಚಿತ್ರಣಗಳು ಬಣ್ಣಗಳಿಂದ ಮುಚ್ಚಲ್ಪಟ್ಟಿದ್ದವು. ಅದನ್ನು ಸ್ವಚ್ಛಗೊಳಿಸಿ ಚಿತ್ರಣಗಳು ಕಾಣುವಂತೆ ಮಾಡಲಾಗಿದೆ. ಇದರೊಂದಿಗೆ ಛಾವಣಿಗೆ ಬಳಸಲಾಗಿದ್ದ ತೇಗದ ಮರಗಳಿಗೂ ಬಣ್ಣ ಬಳಿಯಲಾಗಿತ್ತು. ಮರಗಳಿಗೆ ಬಳಿಯಲಾಗಿದ್ದ ಬಣ್ಣವನ್ನು ತೆಗೆದುಹಾಕಿ ನೈಜ ಬಣ್ಣದಲ್ಲಿ ಮರಗಳನ್ನು ಕಾಪಾಡಲಾಗಿದೆ. ಸಿವಿಲ್ ಕಾಮಗಾರಿ ಮುಗಿದರೆ, ಆಡಿಟೋರಿಯಂ, ಪೇಂಟಿಂಗ್ ಸೇರಿದಂತೆ ಇತರ ವಸ್ತುಗಳ ಕಾರ್ಯ ವಾರದಲ್ಲಿ ಮುಗಿಯಲಿದೆ ಎಂದು ತಿಳಿಸಿದರು.

ಜಗನ್ಮೋಹನ ಅರಮನೆಯಲ್ಲಿ ಯದು ವಂಶದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಿಂದ ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಕಾಲದವರೆಗೆ ಅಪರೂಪದ ವಸ್ತುಗಳು ಹಾಗೂ ಚಿತ್ರಣಗಳನ್ನು ಸಂಗ್ರಹಿಸಿಡಲಾಗಿದೆ. ನಾಲ್ಕು ತಲೆಮಾರಿನ ವಸ್ತುಗಳು ಇಲ್ಲಿ ಇರುವುದು ಅಪರೂಪವಾಗಿದೆ. ನವೀಕರಣಕ್ಕಾಗಿ ಎಲ್ಲಾ ಚಿತ್ರಗಳನ್ನು ಹಾಗೂ ವಸ್ತುಗಳನ್ನು ಸ್ಟ್ರಾಂಗ್ ರೂಮಿ ನಲ್ಲಿ ಭದ್ರವಾಗಿಡಲಾಗಿದೆ. ಯಾವುದೆ ಒಂದು ವಸ್ತುಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗದೆ ಇದೇ ಜಾಗದಲ್ಲಿ ನವೀಕರಣ ಮಾಡಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಸಾರ್ವಜನಿಕರು ವೀಕ್ಷಣೆ ಮಾಡಲು ಬೇಕಾದ ಜಾಗ ಬಿಟ್ಟು ಹತ್ತಿರದಿಂದ ಯಾವುದೇ ಪೇಂಟಿಂಗ್ ಮೇಲೆ ಯಾವುದನ್ನು ಬರೆಯದಂತೆ ನೋಡಿಕೊಳ್ಳಲಾಗುವುದು. ಅದಕ್ಕೆ ಬೇಕಾದ ಭದ್ರತೆ ನಿಯೋಜಿಸುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅರಮನೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ದುರಸ್ತಿ ಮಾಡುತ್ತಿರುವ ಸಂಸ್ಥೆಯ ಮುಖ್ಯಸ್ಥ ಶರತ್‍ಚಂದ್ರ ಬೊಯಪತಿ, ಹೆಚ್‍ಹೆಚ್‍ಎಸ್‍ಎನ್‍ಡಬ್ಲ್ಯೂ ಟ್ರಸ್ಟ್‍ನ ರೆಜಿನಾಲ್ಡ್ ವೆಸ್ಲಿ, ವಾಸ್ತುಶಿಲ್ಪಿಗಳಾದ ಮಾಳವಿಕಾ ಮೂರ್ತಿ, ವರ್ಷ ರಾಜನ ಹಳ್ಳಿ ಉಪಸ್ಥಿತರಿದ್ದರು.

ದಸರಾ ಕಾರ್ಯಕ್ರಮಗಳಲ್ಲಿ ಮೈಸೂರು ಮಹಾರಾಜರ ಭಾವಚಿತ್ರಗಳನ್ನು ಬಳಸಲು ಆಗ್ರಹ

ಮೈಸೂರು: ಮೈಸೂರು ದಸರಾ ಲಾಂಛನ ಮತ್ತು ಪೋಸ್ಟರ್ ಬ್ಯಾನರ್‌ಗಳಲ್ಲಿ ಹಾಗೂ ಮೈಸೂರು ದಸರಾ ವೇದಿಕೆ ಕಾರ್ಯಕ್ರಮಗಳಲ್ಲಿ ಮೈಸೂರು ಸಂಸ್ಥಾನದ ಮಹಾರಾಜರುಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜೇಂದ್ರ ಒಡೆಯರ್ ಅವರ ಭಾವಚಿತ್ರಗಳನ್ನು ಬಳಸಲು ಆದೇಶಿಸಬೇಕೆಂದು ನಂಜರಾಜ ಬಹದ್ದೂರ್ ಎಜುಕೇಷನಲ್ ಚಾರಿಟಿ ಫಂಡ್ ಅಂಡ್ ಬೋರ್ಡಿಂಗ್ ಹೋಂ ಹಾಗೂ ಶ್ರೀರಾಮ ಸೇವಾ ಅರಸು ಮಂಡಳಿಯ ಅಧ್ಯಕ್ಷ ಲಕ್ಷ್ಮೀಕಾಂತ ರಾಜೇ ಅರಸು ಆಗ್ರಹಿಸಿದ್ದಾರೆ.

Translate »