ಮಳೆ ನಿಂತು ಹೋದ ಮೇಲೆ…. ಏರುತಿದೆ ಸುಡು ಬಿಸಿಲಿನ ತಾಪ
ಕೊಡಗು

ಮಳೆ ನಿಂತು ಹೋದ ಮೇಲೆ…. ಏರುತಿದೆ ಸುಡು ಬಿಸಿಲಿನ ತಾಪ

September 17, 2018

ಮಡಿಕೇರಿ:  ಅತೀವ ಮಳೆಯಿಂದ ಕಂಗೆಟ್ಟಿದ್ದ ಕೊಡಗಿನಲ್ಲಿ ಇದೀಗ ರಣ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ. ತಾಪಮಾನದಲ್ಲೂ ಏರಿಕೆಯಾಗಿದ್ದು, ಭವಿಷ್ಯದ ದಿನಗಳಲ್ಲಿ ಬರಗಾಲ ಆವರಿಸುವ ಲಕ್ಷಣಗಳು ಗೋಚರಿಸುತ್ತಿದೆ. ಮಾತ್ರವಲ್ಲದೆ, ಭಾರಿ ಮಳೆಯಿಂದ ಜಲ ಪ್ರಳಯವನ್ನೇ ಸೃಷ್ಟಿಸಿದ್ದ ನದಿ, ತೊರೆ ಗಳಲ್ಲಿ ಕೂಡ ಗಣನೀಯ ಪ್ರಮಾಣದಲ್ಲಿ ನೀರಿನ ಹರಿವು ಕ್ಷೀಣಿಸಿದೆ. ನದಿಗಳ ತಳದಲ್ಲಿ ಕಲ್ಲು ಬಂಡೆಗಳು ಕಂಡು ಬರುತ್ತಿದ್ದು, ಪ್ರಕೃತಿಯ ಮುನಿಸು ಇದೀಗ ಬರಗಾಲದ ರೂಪದಲ್ಲಿ ಜಿಲ್ಲೆಯನ್ನು ಆಪೋಶನ ಪಡೆಯಲು ತಯಾರಿ ನಡೆಸುತ್ತಿರುವಂತೆ ಭಾಸವಾಗುತ್ತಿದೆ.

ಜಿಲ್ಲೆಯ ಪ್ರಮುಖ ನದಿಗಳಾದ ಕಾವೇರಿ, ಲಕ್ಷಣತೀರ್ಥ, ಕುಮಾರಧಾರ ನದಿಗಳು ಸೇರಿದಂತೆ ಬೇತ್ರಿ, ಹಟ್ಟಿಹೊಳೆ, ತಂತಿ ಪಾಲ, ಕದನೂರು, ಪಯಸ್ವಿನಿ, ಚೋರನ ಹೊಳೆ, ಕಕ್ಕೆಹೊಳೆ, ಮಾದಾಪುರ ಹೊಳೆಗಳಲ್ಲಿ ನೀರಿನ ಹರಿವು ಇಳಿಕೆ ಕಂಡಿದೆ. ಈ ನದಿಗಳೆಲ್ಲವೂ ಮುಂಗಾರಿನಲ್ಲಿ ಪ್ರವಾಹ ಮಟ್ಟವನ್ನೇ ಮೀರಿ ಹರಿದು ಹಲವು ಗ್ರಾಮಗಳಿಗೆ ಜಲ ದಿಗ್ಬಂಧನ ವಿಧಿಸಿ ದ್ದವು. ಮಾತ್ರವಲ್ಲದೇ ಕೃಷಿ ಫಸಲನ್ನು ಬಲಿ ಪಡೆದಿದ್ದವು. ಆದರೆ, ಈ ಹೊಳೆಗಳ ಇಂದಿನ ಸ್ಥಿತಿಯನ್ನು ನೋಡಿದರೆ, ಪ್ರವಾಹ ಸೃಷ್ಟಿಸಿದ್ದನ್ನು ನಂಬಲು ಕೂಡ ಸಾಧ್ಯ ವಿಲ್ಲದ ರೀತಿಯಲ್ಲಿ ತಣ್ಣಗೆ ಹರಿಯುತ್ತಿವೆ. ಅತೀವೃಷ್ಠಿಯಿಂದ ಅಂತರ್ಜಲ ಏರಿಕೆಯಾಗಿ ಬೆಟ್ಟ ಶ್ರೇಣಿಗಳ ಕುಸಿತಕ್ಕೆ ಕಾರಣವಾದ ಜಲ ಮೂಲಗಳು ಕೂಡ ಸಂಪೂರ್ಣ ಬತ್ತಿ ಹೋಗಿದ್ದು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ತಲೆದೋರಿದೆ.

ಮಳೆನಿಂತು ಬೆರಳೆಣಿಕೆಯ ದಿನಗಳು ಮಾತ್ರ ಕಳೆದಿದ್ದು, ಜಿಲ್ಲೆಯಾದ್ಯಂತ ಸುಡು ಬಿಸಿಲಿನ ಹವಾಮಾನ ಕಂಡು ಬರುತ್ತಿದೆ. ಸೆ.16ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 31 ಡಿಗ್ರಿ ಉಷ್ಣಾಂಶ ದಾಖಲಾಗಿದ್ದರೆ, ವಿರಾಜಪೇಟೆಯಲ್ಲಿ 29 ಮತ್ತು ಸೋಮವಾರಪೇಟೆಯಲ್ಲಿ 31 ಡಿಗ್ರಿ ಉಷ್ಣಾಂಶ ಕಂಡು ಬಂದಿದೆ.

ಭಾರಿ ಭೂ ಕುಸಿತ ಮತ್ತು ಉಕ್ಕೇರಿದ ಪ್ರವಾಹದಿಂದ ನದಿಗಳು ಹರಿಯುವ ದಿಕ್ಕೇ ಬದಲಾಗಿದೆ. ಭೂ ಕುಸಿತದಿಂದ ಭಾರಿ ಪ್ರಮಾಣದ ಮಣ್ಣು, ಕಲ್ಲು ಬಂಡೆಗಳ ರಾಶಿ ಸೇರಿದಂತೆ ಮರಗಳು ಕೂಡ ನದಿ ತೊರೆಗಳ ಒಡಲು ಸೇರಿದ್ದು, ನೀರಿನ ಹರಿವು ಮತ್ತು ಅಂತರ್ಜಲ ಕ್ಷೀಣಿಸಲು ಮತ್ತೊಂದು ಕಾರಣವಾಗಿದೆ. ಕೆರೆಗಳು, ಬಾವಿಗಳು ಮಾತ್ರವಲ್ಲದೆ ಬೋರ್‍ವೆಲ್‍ಗಳಲ್ಲೂ ಕೂಡ ನೀರಿನ ಪ್ರಮಾಣ ಇಳಿಕೆಯಾಗಿದೆ.

ಕಾಲೂರು, ಮದೆನಾಡು, ಜೋಡು ಪಾಲ ದೇವಸ್ತೂರು, ಮುಕ್ಕೋಡ್ಲು ಸೇರಿ ದಂತೆ ಪ್ರಕೃತಿ ವಿಕೋಪದ ಘೋರ ದುರಂತ ಸಂಭವಿಸಿದ ಗ್ರಾಮಗಳಲ್ಲೂ ಅಂತರ್ಜಲ ಬತ್ತುತ್ತಿದೆ. ನೈಸರ್ಗಿಕವಾಗಿ ವರ್ಷ ಪೂರ್ತಿ ಹರಿಯುತ್ತಿದ್ದ ತೊರೆಗಳು ಕೂಡ ಬತ್ತುವ ಹಂತಕ್ಕೆ ತಲುಪಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಲು ಕಾರಣವಾಗಿದೆ. ಅಳಿದುಳಿದ ಭತ್ತದ ಸಸಿಗಳು ಕೂಡ ಮುಂದಿನ ದಿನಗಳಲ್ಲಿ ನೀರಿಲ್ಲದೆ ಒಣಗುವ ಲಕ್ಷಣಗಳು ದಟ್ಟವಾಗಿ ಕಂಡು ಬರುತ್ತಿದ್ದು, ಸಹಜವಾಗಿಯೇ ಇದು ಕೃಷಿಕರನ್ನು ಕಂಗಾಲಾಗಿಸಿದೆ. ಜುಲೈ 9ರಂದು ಜಿಲ್ಲೆಯ ಕೆಲವು ಭಾಗಗಳಲ್ಲಿ 3.4 ತೀವ್ರತೆಯ ಲಘು ಭೂ ಕಂಪನ ಸಂಭವಿಸಿದ್ದು, ಭೂ ಗರ್ಭದ ಈ ಪಲ್ಲಟದಿಂದಾಗಿ ಅಂತರ್ಜಲದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿರಬಹುದೆಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲೂ ಭಾರಿ ಇಳಿಕೆಯಾಗಿದೆ. ಹಟ್ಟಿಹೊಳೆ, ಮಾದಾಪುರ, ಸೇರಿದಂತೆ ಹಾರಂಗಿ ನದಿಗಳಿಂದ ಜಲಾಶಯಕ್ಕೆ ಕೇವಲ 853 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ. ಹೀಗಾಗಿ ನದಿಗೆ ಹರಿಸುತ್ತಿದ್ದ ನೀರನ್ನು ಸ್ಥಗಿತ ಮಾಡಲಾಗಿದ್ದು, ಕೃಷಿ ಕಾರ್ಯಕ್ಕೆ ಮಾತ್ರವೇ ಜಲಾಶಯದಿಂದ ನಾಲೆಗಳ ಮೂಲಕ 1675 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ಒಟ್ಟಿನಲ್ಲಿ ಶತಮಾನವೇ ಕಾಣದ ಜಲಪ್ರಳಯ ಮತ್ತು ಭೂ ಕುಸಿತದಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಜಲ ಕ್ಷಾಮದ ಭೀತಿ ಆವರಿಸಿದೆ. ಮುಂಗಾರು ಅವಧಿಯಲ್ಲಿ ಪ್ರಕೃತಿಯ ಅವಕೃಪೆಗೆ ತುತ್ತಾಗಿ ಹಲವು ರೀತಿಯ ದುರಂತಗಳಿಗೆ ಸಾಕ್ಷಿಯಾದ ಕಾವೇರಿ ತವರು ಇದೀಗ ಕುಡಿಯುವ ನೀರಿಗೂ ಪರಿತಪಿಸಬೇಕಾದ ಸ್ಥಿತಿಗೆ ಬಂದು ನಿಂತಿದೆ.

Translate »