ಅರ್ಜುನ್ ಸರ್ಜಾ ಪರ ನಟ ಜಗ್ಗೇಶ್, ತಾರಾ ಬ್ಯಾಟಿಂಗ್
ಮಂಡ್ಯ

ಅರ್ಜುನ್ ಸರ್ಜಾ ಪರ ನಟ ಜಗ್ಗೇಶ್, ತಾರಾ ಬ್ಯಾಟಿಂಗ್

October 24, 2018

ಮಂಡ್ಯ:  ಮೀಟೂ ವಿವಾದದಲ್ಲಿ ಸಿಲುಕಿರುವ ನಟ ಅರ್ಜುನ್ ಸರ್ಜಾ ಪರ ನಟ ಜಗ್ಗೇಶ್ ಬ್ಯಾಟಿಂಗ್ ಮಾಡಿದ್ದಾರೆ. ಅನ್ಯಾಯ ಅಥವಾ ದೌರ್ಜನ್ಯ ನಡೆ ದಾಗ ಪ್ರತಿಕ್ರಿಯಿಸುವುದನ್ನು ಬಿಟ್ಟು ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಈಗ ಮಾಡಿರುವ ಆರೋಪ ಒಪ್ಪುವಂತದಲ್ಲ ಎಂದಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಭೇಟಿ ಮಾಡಿದ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಶ್ರುತಿ ಹರಿಹರನ್‍ಗೆ ಅನ್ಯಾಯವಾಗಿದ್ದಲ್ಲಿ ಆಕೆ ಆ ಕೂಡಲೇ ಪ್ರತಿಕ್ರಿಯಿಸಬೇಕಿತ್ತು. ಆದರೆ, ಈಗ ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿ ತಪ್ಪು ಮಾಡಿದ್ದಾರೆ. ಇದು ಆಂದೋಲನದ ಮಟ್ಟಕ್ಕೆ ಹೋಗಿ ತಲುಪಿದೆ. ಅಲ್ಲದೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಅರ್ಜುನ್ ಸರ್ಜಾ ಮಹಾನ್ ಸಾತ್ವಿಕ, ಸುಸಂಸ್ಕೃತ, ಯಾರೊಂದಿಗೂ ಕೂಡಾ ಏಕವಚನದಲ್ಲಿ ಮಾತನಾಡುವ ವ್ಯಕ್ತಿ ಕೂಡಾ ಅಲ್ಲ ಎಂದರು.

ಇಂದು ಮೀಟೂ ಆರೋಪ ಅರ್ಜುನ್ ಸರ್ಜಾರನ್ನು ಕೊಲೆ ಮಾಡಿದಂತಾಗಿದೆ. ಬಹುಭಾಷಾ ನಟ ಪ್ರಕಾಶ್ ರೈ ಸಹ ಓರ್ವ ಜಂಟಲ್ ಮ್ಯಾನ್. ಅರ್ಜುನ್ ಸರ್ಜಾ ಸ್ಲಂನಿಂದ ಬಂದಿರೋದು ರೈ ದೇವಲೋಕದಿಂದ ಬಂದಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಅಂತಾ ಬಾಯಿಗೆ ಬಂದ ಹಾಗೆ ಮಾತನಾಡೋದು ತಪ್ಪು ಎಂದು ಪ್ರಕಾಶ್ ರೈ ಕಾಲೆಳೆದರು.

ದೌರ್ಜನ್ಯ ನಡೆದಾಗ ಪ್ರತಿಕ್ರಿಯೆ ನೀಡದೇ 20 ವರ್ಷದ ಹಿಂದೆ ನನ್ನ ಮೇಲೆ ಅತ್ಯಾಚಾರ ಆಯ್ತು. 10 ವರ್ಷದ ಹಿಂದೆ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಅಂತಾ ಇಂದು ಹೇಳಿದರೆ ಇದು ಸರೀನಾ ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತಿದೆ ಎಂದು ಹೇಳಿದರು.

ಅರ್ಜುನ್ ಸರ್ಜಾ ಉತ್ತಮ ಗುಣವುಳ್ಳವರು: ಬಹುಭಾಷ ನಟ ಅರ್ಜುನ್ ಸರ್ಜಾ ವೈಯಕ್ತಿಕವಾಗಿ ನನಗೆ ಗೊತ್ತು. ಆತ ಒಳ್ಳೆಯ ಮನುಷ್ಯ, ಅವರೊಟ್ಟಿಗೆ ಹಲವು ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದೇವೆ. ಇದೀಗ ನಟಿ ಶ್ರುತಿಹರಿಹರನ್ ಅವರ ವಿರುದ್ದ ಮಾಡುತ್ತಿರುವ ಆರೋಪ ಸುಳ್ಳು ಎಂದು ನಟಿ ತಾರಾ ಅನುರಾಧ ಹೇಳಿದರು.ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಅವರು ಮಾತನಾಡಿದರು.

ಯಾವ ಉದ್ದೇಶವನ್ನಿಟ್ಟುಕೊಂಡು ನಟಿ ಶ್ರುತಿ ಹರಿಹರನ್ ಈ ಆರೋಪ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ನಾನು ಮೀಟೂ ಅಭಿಯಾನ ಪರ ಇದ್ದೇನೆ. ಆದರೆ ಅರ್ಜುನ್ ಪರ ನಿಲ್ಲುತ್ತೇನೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಲಿದೆ ಎಂದರು.

Translate »