ಕೊಡಗು ಜಿಲ್ಲಾ ಪರಿಷತ್‍ನ ಪ್ರಥಮ ಅಧ್ಯಕ್ಷ ಜಮ್ಮಡ ಎ.ಕರುಂಬಯ್ಯ ನಿಧನ
ಕೊಡಗು

ಕೊಡಗು ಜಿಲ್ಲಾ ಪರಿಷತ್‍ನ ಪ್ರಥಮ ಅಧ್ಯಕ್ಷ ಜಮ್ಮಡ ಎ.ಕರುಂಬಯ್ಯ ನಿಧನ

April 2, 2019

ಗೋಣಿಕೊಪ್ಪಲು: ಕೊಡಗು ಜಿಲ್ಲಾ ಪರಿಷತ್‍ನ ಪ್ರಥಮ ಅಧ್ಯಕ್ಷರಾಗಿದ್ದ ಜಮ್ಮಡ ಎ.ಕರುಂಬಯ್ಯ (84) ಅವರು ಇಂದು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಎ. ಕರುಂಬಯ್ಯ ಅವರು, ಕೈಕೇರಿ ಗ್ರಾಮ ದಲ್ಲಿರುವ ಸ್ವಗೃಹದಲ್ಲಿ ಸೋಮವಾರ ಬೆಳಿಗ್ಗೆ 8.45 ರಲ್ಲಿ ನಿಧನರಾದರು. ಮೃತರು ಪತ್ನಿ, ಒಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ಸಾಯಂಕಾಲ 3 ಗಂಟೆ ಸುಮಾರಿಗೆ ಜಮ್ಮಡ ಕುಟುಂಬದ ಸ್ಮಶಾನದಲ್ಲಿ ನೆರವೇರಿತು. ಈ ಸಂದರ್ಭ ವಿವಿಧ ಪಕ್ಷದ ಮುಖಂಡರುಗಳು ಹಾಗೂ ಅಭಿಮಾನಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಎಂಎಲ್ಸಿಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಲೋಕಸಭಾ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಹಾಗೂ ಮುಖಂಡರು ಗಳು ಅಂತಿಮ ದರ್ಶನ ಪಡೆದರು.

ನೇರ ನಡೆ ನುಡಿಯ ರಾಜಕಾರಿಣಿ ಎಂದು ಹೆಸರು ಪಡೆದಿದ್ದ ಕರುಂಬಯ್ಯ ಅವರು, ಕೊಡಗು ಜಿಲ್ಲಾ ಪರಿಷತ್‍ನ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಾಲೂಕು ಅಭಿವೃಧ್ಧಿ ಮಂಡಳಿ ಸದಸ್ಯರಾಗಿ 5 ವರ್ಷ ಸೇವೆ ಸಲ್ಲಿಸಿದ್ದರು. 1987 ರಲ್ಲಿ ಜಿಲ್ಲಾ ಪರಿಷತ್ ಸದಸ್ಯನಾಗಿ ಅಯ್ಕೆಯಾಗಿ, 1992 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡರಾಗಿ ನಂತರ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದಲ್ಲಿದ್ದರು. ನಂತರ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಮತ್ತೆ ಕಾಂಗ್ರೆಸ್ ಸೇರಿದ್ದರು.
ಸಂತಾಪ ಸಭೆ: ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿ ಯಲ್ಲಿ ಸಂತಾಪ ಸಭೆ ನಡೆಯಿತು. ಕರುಂಬಯ್ಯ ಅವರು ಪಕ್ಷಕ್ಕಾಗಿ ದುಡಿದ ಅವರ ಕಾರ್ಯವನ್ನು ಹಿರಿಯರು ನೆನೆಸಿಕೊಂಡರು. ಗೋಣಿಕೊಪ್ಪ ಪಟ್ಟಣದಲ್ಲಿ 1 ಗಂಟೆಗಳ ಕಾಲ ಅಂಗಡಿ-ಮುಂಗಟ್ಟು ಮುಚ್ಚಿ ಗೌರವ ನೀಡಲಾಯಿತು.

Translate »