ಆರಂಭವಾಯಿತು ಜನತಾ ದರ್ಶನ: ಸಂಕಷ್ಟ ಹೇಳಿಕೊಳ್ಳಲು ಬಂದವರಿಗೆ ನೀರು, ಮಜ್ಜಿಗೆ, ಬಿಸ್ಕತ್ ನೀಡಿ ಸಂತೈಸಿ ಅವರ ಅಹವಾಲು ಆಲಿಸಿದ ಸಿಎಂ
ಮೈಸೂರು

ಆರಂಭವಾಯಿತು ಜನತಾ ದರ್ಶನ: ಸಂಕಷ್ಟ ಹೇಳಿಕೊಳ್ಳಲು ಬಂದವರಿಗೆ ನೀರು, ಮಜ್ಜಿಗೆ, ಬಿಸ್ಕತ್ ನೀಡಿ ಸಂತೈಸಿ ಅವರ ಅಹವಾಲು ಆಲಿಸಿದ ಸಿಎಂ

May 30, 2018

ಬೆಂಗಳೂರು:  ನೀರು, ಮಜ್ಜಿಗೆ, ಬಿಸ್ಕತ್ ನೀಡಿ, ಸಾರ್ವ ಜನಿಕ ಕಷ್ಟ ಸುಖಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮೊದಲ ಜನತಾ ದರ್ಶನ ಕಾರ್ಯಕ್ರಮದಲ್ಲಿ ಆಲಿಸಿದ್ದಾರೆ. ಮೂರು ಗಂಟೆ ತಡವಾಗಿ ಜನತಾದರ್ಶನ ಕಾರ್ಯಕ್ರಮ ನಡೆಸಿದ ಮುಖ್ಯಮಂತ್ರಿಯವರು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಹಿಡಿದರೆ, ಇನ್ನು ಕೆಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿ ಗಳಿಗೆ ಆದೇಶಿಸಿದರು. ಸಾವಿರಕ್ಕೂ ಹೆಚ್ಚು ಅಹವಾಲು ಸಲ್ಲಿಸಿದರು. ಬಹುತೇಕರು ಹಿರಿಯ ನಾಗರಿಕರಾಗಿದ್ದರು. ಅವರೆಲ್ಲರೂ ತಮ್ಮ ಮಾಸಿಕ ವೇತನ ದುಪ್ಪಟ್ಟು ಮಾಡಿ, ಉಚಿತ ವೈದ್ಯಕೀಯ ಸೇವೆ ಕಲ್ಪಿಸಿ, ರಿಯಾಯಿತಿ ಬಸ್ ಪಾಸ್ ನೀಡಿ, ನಮಗೂ ನಿವೇಶನ ಹಂಚಿಕೆಯಲ್ಲಿ ಆದ್ಯತೆ ನೀಡಿ ಎಂದು ಮನವಿ ಮಾಡಿಕೊಂಡರು.

ಚನ್ನಪಟ್ಟಣದ ಯುವತಿ ಸಂಗೀತಾಗೆ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚ ಭರಿಸುವ ಭರವಸೆಯನ್ನು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ನೀಡಿದರು. ಸಂಗೀತಾ ಗ್ರಾಮ ಸಹಾಯಕ ಹುದ್ದೆಗೆ ಆಯ್ಕೆಯಾಗಿದ್ದರೂ, ತಮಗೆ ಆದೇಶ ಬಂದಿಲ್ಲ ಎಂದು ಮುಖ್ಯಮಂತ್ರಿಯವರ ಬಳಿ ದೂರು ನೀಡಿದರು.

ತಕ್ಷಣವೇ ರಾಮನಗರ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿದರು. ಸಂಗೀತಾಗೆ 18 ವರ್ಷ ತುಂಬಿರದ ಕಾರಣ ನೇಮಕಾತಿ ರದ್ದುಪಡಿಸಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಓದುವ ಸಮಯದಲ್ಲಿ ಉದ್ಯೋಗ ಬೇಡ, ನಿನ್ನ ಕಲಿಕೆಯ ಸಂಪೂರ್ಣ ಜವಾಬ್ದಾರಿ ನನ್ನದು. ಶಿಕ್ಷಣಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿ, ಅವರ ಕುಟುಂಬದವರನ್ನು ಕಳುಹಿಸಿಕೊಟ್ಟರು.

ಆರೋಗ್ಯಕ್ಕೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಿ, ಈ ಎಲ್ಲಾ ಸಮಸ್ಯೆಯನ್ನು ಇನ್ನೆರಡು ವಾರದಲ್ಲಿ ಬಗೆಹರಿಸುತ್ತೇನೆ. ಸರ್ಕಾರ ಜಾರಿಗೊಳಿಸಿರುವ ಹೊಸ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಸರ್ಕಾರಿ ಆಸ್ಪತ್ರೆಗಳಲ್ಲೇ

ಉಚಿತ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು. ರಾಜಾಜಿನಗರದ ಜಾನಕಮ್ಮ ಎಂಬ ವಿಕಲಚೇತನರು ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದರು. ತಲಕಾಡಿನ ಕವಿತಾ ಎಂಬುವರು ಅಭಿನಂದನೆ ಸಲ್ಲಿಸಿ ನಿಮ್ಮ ಆಡಳಿತ ಚೆನ್ನಾಗಿರಲಿ ಎಂದು ಹಾರೈಸಿದರು. ಅಂಗವಿಕಲರು, ವಯೋವೃದ್ಧರು, ಕ್ಯಾನ್ಸರ್ ರೋಗಿಗಳು ಮುಖ್ಯಮಂತ್ರಿಗಳಿಗೆ ನೆರವಿಗಾಗಿ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಹಲವರು ಹೂಗುಚ್ಛ ನೀಡಿ ಅಭಿನಂದಿಸಿದರು.

Translate »