ಕಾವೇರಿ ಸ್ವಚ್ಛತೆ ಜಾಗೃತಿಗಾಗಿ ಜೂ.5ರಂದು  ಮೈಸೂರಿಂದ ಶ್ರೀರಂಗಪಟ್ಟಣದವರೆಗೆ ಜಾಥಾ
ಮೈಸೂರು

ಕಾವೇರಿ ಸ್ವಚ್ಛತೆ ಜಾಗೃತಿಗಾಗಿ ಜೂ.5ರಂದು  ಮೈಸೂರಿಂದ ಶ್ರೀರಂಗಪಟ್ಟಣದವರೆಗೆ ಜಾಥಾ

May 31, 2018

ಮೈಸೂರು: ಕನ್ನಡನಾಡಿನ ಜೀವನದಿಯಾಗಿರುವ ಕಾವೇರಿ ನದಿಯ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಜೂ.5ರಂದು ಬೆಳಿಗ್ಗೆ 6.30ಕ್ಕೆ ಮೈಸೂರಿನಿಂದ ಶ್ರೀರಂಗಪಟ್ಟಣದವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.5ರಂದು ಬೆಳಿಗ್ಗೆ 6.30ಕ್ಕೆ ಮೈಸೂರು ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಸುತ್ತೂರು ಕ್ಷೇತ್ರ ಶ್ರೀ ಶಿವರಾತ್ರೀ ದೇಶಿಕೇಂದ್ರ ಸ್ವಾಮೀಜಿ ಅವರು ಕಾಲ್ನಡಿಗೆಗೆ ಚಾಲನೆ ನೀಡಲಿದ್ದಾರೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ವತಿಯಿಂದ ನಡೆಯಲಿರುವ ಕಾಲ್ನಡಿಗೆಯಲ್ಲಿ ಕರ್ನಾಟಕ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ, ಶ್ರೀರಂಗಪಟ್ಟಣ ಪುರಸಭೆ, ಅಖಿಲ ಭಾರತೀಯ ಸನ್ಯಾಸಿ ಸಂಘ, ಶ್ರೀರಂಗಪಟ್ಟಣ ಶಾಶ್ವತಿ ಧಾರ್ಮಿಕ ಕ್ರಿಯಾ ಕೇಂದ್ರ ಮತ್ತು ಹೊಗೇನಕಲ್ ಕಾವೇರಿ ನದಿ ಸಂರಕ್ಷಣೆ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿವೆ ಎಂದರು.

ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಕರ್ನಾಟಕ ಮತ್ತು ತಮಿಳುನಾಡು ಪ್ರಾಂತ್ಯಗಳ ಸಂಯೋಜಕ ಡಾ.ಭಾನುಪ್ರಕಾಶ್ ಶರ್ಮಾ, ತಮಿಳುನಾಡಿನ ತಂಜಾವೂರಿನ ಮಠಾಧೀಶ ಶ್ರೀ ರಮಾನಂದ ಸ್ವಾಮೀಜಿ, ಶ್ರೀಗಣೇಶ್ ಸ್ವರೂಪಾನಂದ ಸ್ವಾಮೀಜಿ, ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸೇರಿದಂತೆ ಸಾಧುಸಂತರು, ಶ್ರೀರಂಗಪಟ್ಟಣದ ಪುರಸಭೆ ಅಧಿಕಾರಿಗಳು ಸೇರಿದಂತೆ ಹಲವಾರು ಸಮಿತಿ ಕಾರ್ಯಕರ್ತರು ಜಾಥಾದಲ್ಲಿ ಪಾಳ್ಗೊಳ್ಳಲಿದ್ದಾರೆ. ಮೈಸೂರಿನಿಂದ ಶ್ರೀರಂಗಪಟ್ಟಣದ ದೇವಸ್ಥಾನದವರೆಗೆ ನಡೆಯುವ ಸುಮಾರು 18 ಕಿಮಿ ಜಾಥಾದಲ್ಲಿ ಹಾಸನ, ಮಂಡ್ಯ, ಕೊಡಗು, ಮೈಸೂರಿನ ಭಾಗದಿಂದ 150ಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ. ಅಂದು ಮಧ್ಯಾಹ್ನ 3.30ಕ್ಕೆ ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿ ನದಿ ದಡದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ನದಿ ಸಂರಕ್ಷಣೆ ಬಗ್ಗೆ ತಹಸೀಲ್ದಾರರ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಮುಖಂಡರಾದ ಎಂ.ಎನ್.ಕುಮಾರಸ್ವಾಮಿ, ಕೆ.ಜಿ.ಮನು, ಪಂಚಾಕ್ಷರಿ, ಕುಮಾರಸ್ವಾಮಿ ಇದ್ದರು.

Translate »