ಜೆಡಿಎಸ್ ಸೋಲಿಗೆ ಜಿಲ್ಲಾಧ್ಯಕ್ಷರೇ ಕಾರಣ; ಆರೋಪ
ಚಾಮರಾಜನಗರ

ಜೆಡಿಎಸ್ ಸೋಲಿಗೆ ಜಿಲ್ಲಾಧ್ಯಕ್ಷರೇ ಕಾರಣ; ಆರೋಪ

September 7, 2018

ಚಾಮರಾಜನಗರ: ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲಿಗೆ ಕಾರಣವಾಗಿರುವ ಪಕ್ಷದ ಜಿಲ್ಲಾಧ್ಯಕ್ಷ ಕಾಮರಾಜ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ನಗರ ಘಟಕ ಅಧ್ಯಕ್ಷ ಜಿ.ಎಂ.ಶಂಕರ್ ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಗಳಿಗೆ ನೀಡಿದ ಫಂಡ್‍ನಲ್ಲಿ ಪಕ್ಷದ ಅಧ್ಯಕ್ಷ ಕಾಮರಾಜ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ 1 ಲಕ್ಷಕ್ಕೆ 10 ಸಾವಿರ, 50 ಸಾವಿರಕ್ಕೆ 5 ಸಾವಿರ ರೂ ಕಮೀಷನ್ ಪಡೆದಿದ್ದಾರೆ ಎಂದು ಶಂಕರ್ ಗಂಭೀರ ಆರೋಪ ಮಾಡಿದರು.

ಉದಾಹರಣೆಗೆ 19ನೇ ವಾರ್ಡ್‍ನ ಚಿಕ್ಕಅಂಕಶೆಟ್ಟಿ ಅವರೇ ನಿದರ್ಶನರಾಗಿದ್ದಾರೆ. ಇವರು ಜಿಲ್ಲೆಯಲ್ಲಿ ಪಕ್ಷ ಕಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆದರಿಂದ ಪಕ್ಷದ ವರಿಷ್ಠರು ಕೂಡಲೇ ಜಿಲ್ಲಾ ಸಮಿತಿಯನ್ನು ವಿಸರ್ಜನೆ ಮಾಡಿ ಹೊಸ ಸಮಿತಿ ರಚನೆ ಮಾಡುವಂತೆ ಮನವಿ ಮಾಡಿದರು.

ನಗರಸಭೆ ಚುನಾವಣೆಗೆ ಒಳ್ಳೆ ಅಭ್ಯರ್ಥಿಗಳು, ಆಕಾಂಕ್ಷಿ ಗಳಿದ್ದರೂ ಸಹ ಜಿಲ್ಲಾಧ್ಯಕ್ಷ ಕಾಮರಾಜ್ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಯನ್ನು ಸಮರ್ಪಕವಾಗಿ ಮಾಡದೆ ಗೆಲ್ಲುವ ಅಭ್ಯರ್ಥಿಗಳಿಗೆ ಅವಕಾಶ ನೀಡದೆ ತಮ್ಮ ಸುತ್ತ ಇರುವವರ ಮಾತನ್ನು ಕೇಳಿ ಪಕ್ಷದ ಹೀನಾಯ ಸೋಲಿಗೆ ಕಾರಣರಾಗಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಬಲಪಡಿ ಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾಧ್ಯಕ್ಷ ಕಾಮರಾಜ್ ಅವರ ಸುತ್ತಮುತ್ತ ಇರುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಹಾಗೂ ಅನೇಕ ಪದಾಧಿಕಾರಿಗಳು ಪಕ್ಷದ ಸಂಘಟನೆ ಮಾಡುವ ಬದಲು ಪಕ್ಷವನ್ನು ಹೀನಾಯ ಸ್ಥಿತಿಗೆ ನೂಕುತ್ತಿದ್ದಾರೆ ಎಂದು ದೂರಿದರು.

ನಗರಸಭೆ ಚುನಾವಣೆ ಹೀನಾಯ ಸೋಲಿನ ವಿಚಾರವನ್ನು ಶೀಘ್ರದಲ್ಲೇ ಪಕ್ಷದ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು. ಅಲ್ಲದೆ ಜಿಲ್ಲಾ ಧ್ಯಕ್ಷರು, ಜಿಲ್ಲಾ ಸಮಿತಿ ಪದಾಧಿಕಾರಿಗಳು ಎಲ್ಲರ ಮೇಲೂ ಶಿಸ್ತು ಕ್ರಮ ಜರುಗಿಸಿ. ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳನ್ನು ಸಂಪೂರ್ಣ ಬದಲಾವಣೆ ಮಾಡಿ ಹೊಸ ಜಿಲ್ಲಾ ಸಮಿತಿ ಪದಾ ಧಿಕಾರಿಗಳ ನೇಮಕ ಮಾಡುವಂತೆ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಜಿ.ಎಂ.ಶಂಕರ ತಿಳಿಸಿದರು.

ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗಮಣಿ ಮಾತನಾಡಿ, ನಾನು 24ನೇ ವಾರ್ಡ್‍ನ ಜೆಡಿಎಸ್ ಆಕಾಂಕ್ಷಿಯಾಗಿದ್ದೆ. ಜಿಲ್ಲಾಧ್ಯಕ್ಷ ಕಾಮರಾಜ್ ಅವರು 1 ಲಕ್ಷ ರೂ ಹಣ ಕೇಳಿದರು. ನಾನು ಕೊಡಲ್ಲ ಎಂದು ಹೇಳಿದೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಟಿಕೆಟ್ ತಪ್ಪಿಸಿದರು. ಟಿವಿ, ಪೇಪರ್‍ಗೆ ಹೇಳಿದರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರ ಘಟಕದ ಸೇವಾದಳ ಅಧ್ಯಕ್ಷ ಚಿಕ್ಕಅಂಕಶೆಟ್ಟಿ, ಮುಖಂಡರಾದ ಮಂಜುಬಸವನಪುರ, ಸತ್ಯಕುಮಾರ್‍ಕಾಗಲವಾಡಿ ಹಾಜರಿದ್ದರು.

Translate »