ಎಣಿಕಾ ಕೇಂದ್ರದತ್ತ ಸುಳಿಯದ ಜೆಡಿಎಸ್, ಮಿತ್ರ ಪಕ್ಷದೆಡೆಗಿನ ಮುನಿಸು ಮತ್ತೆ ಬಹಿರಂಗ
ಮೈಸೂರು

ಎಣಿಕಾ ಕೇಂದ್ರದತ್ತ ಸುಳಿಯದ ಜೆಡಿಎಸ್, ಮಿತ್ರ ಪಕ್ಷದೆಡೆಗಿನ ಮುನಿಸು ಮತ್ತೆ ಬಹಿರಂಗ

May 24, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ವೇಳೆ ಮೈತ್ರಿ ಪಕ್ಷವಾದ ಜೆಡಿಎಸ್ ಮತ ಎಣಿಕಾ ಕೇಂದ್ರದಿಂದ ದೂರ ಉಳಿದಿತ್ತು.

ಚುನಾವಣೆಗೆ ಮುನ್ನವೇ ಮೈತ್ರಿಯನ್ನು ಮೈಸೂರು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಒಪ್ಪಲು ನಿರಾಕರಿಸಿದ್ದ ಜೆಡಿಎಸ್ ಎರಡೂ ಪಕ್ಷಗಳ ವರಿಷ್ಠರ ಸೂಚನೆ ಮೇರೆಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿತ್ತು. ಬಳಿಕ ಎರಡೂ ಪಕ್ಷಗಳ ಮುಖಂಡರು ಜಂಟಿಯಾಗಿ ಸಭೆ, ಸಮಾರಂಭ ನಡೆಸಿ ಪ್ರಚಾರ ಮಾಡಿದ್ದರು. ಅದರಲ್ಲಿಯೂ ವೈಮನಸ್ಸನ್ನು ದೂರ ಸರಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಪರಸ್ಪರ ಅನ್ಯೋನ್ಯತೆಯಿಂದ ಮಾತನಾಡಿ ಮತಯಾಚಿಸಿದ್ದರು. ಆದರೂ ಚುನಾವಣೆ ದಿನ ಹಲವು ಬೂತ್‍ಗಳಲ್ಲಿ ಜೆಡಿಎಸ್ ಕಾರ್ಯ ಕರ್ತರು ಮತಯಾಚನೆಗೆ ತೆರಳದೆ ಮೈತ್ರಿಗೆ ಕೈ ಕೊಡುವ ಸಂದೇಶ ರವಾನಿಸಿದ್ದರು.

ಮತದಾನ ಮುಗಿದ 15 ದಿನ ನಂತರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಉದ್ಬೂರು ಸೇರಿದಂತೆ ಕೆಲವೆಡೆ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ಮತ ಹಾಕಿಲ್ಲ ಎಂಬ ಸ್ಫೋಟಕ ಸತ್ಯವನ್ನು ಹೊರಹಾಕಿದ್ದರು. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, `ಸಚಿವ ಜಿಟಿಡಿ ಹೇಳಿದ್ದು ನಿಜ’ ಎಂದಿದ್ದರು. ಈ ನಡುವೆ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರು ಜೆಡಿಎಸ್ ಮತದಾರರಲ್ಲಿ ಶೇ.10 ರಷ್ಟು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿರಬಹುದು. ಆದರೆ ಕ್ಷೇತ್ರದಾದ್ಯಂತ ಜೆಡಿಎಸ್ ಕಾರ್ಯಕರ್ತರು ನನಗೆ ಬೆಂಬಲ ನೀಡಿದ್ದಾರೆ. ಇದರಿಂದ ಗೆಲುವು ನನ್ನದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ದ್ದರು. ಆದರೂ ಜೆಡಿಎಸ್ ಮುಖಂಡರಾಗಲೀ, ಕಾರ್ಯಕರ್ತರಾಗಲೀ ಮತ ಎಣಿಕಾ ಕೇಂದ್ರದತ್ತ ಇಂದು ಬಾರದೇ ಇರುವುದು ಮೈತ್ರಿ ಅಭ್ಯರ್ಥಿ ಪರ ಜೆಡಿಎಸ್‍ಗೆ ಇದ್ದ ಮುನಿಸನ್ನು ಮತ್ತೊಮ್ಮೆ ಬಹಿರಂಗ ಪಡಿಸಿದಂತಾಗಿದೆ. ಮತ ಎಣಿಕೆ ಮೈತ್ರಿ ಅಭ್ಯರ್ಥಿಯ ವೇಳೆ ಹಿನ್ನಡೆ ಅಂತರ ಹೆಚ್ಚಾಗುತ್ತಿರುವುದನ್ನು ಅರಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡ ರಲ್ಲಿ ಆತಂಕ ಆವರಿಸುತ್ತಿತ್ತು. ಆದರೂ ಜೆಡಿಎಸ್ ಮುಖಂಡರು ಎಣಿಕಾ ಕೇಂದ್ರದತ್ತ ಬಾರದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರವನ್ನುಂಟು ಮಾಡಿತು.

Translate »