ಮದ್ದೂರು: ತಾಲೂಕಿನ ತೊಪ್ಪನಹಳ್ಳಿ ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣ ಸಂಬಂಧ ಬಂಧಿಸಲಾಗಿರುವ ನಾಲ್ವರು ಆರೋಪಿಗಳನ್ನು ನ್ಯಾಯಾ ಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ಗಾಗಿ ಪೊಲೀಸರು ಮತ್ತೆ ಕಸ್ಟಡಿಗೆ ಪಡೆದುಕೊಂಡಿದ್ದರೆ. ಬಂಧಿತ ಆರೋಪಿಗಳಾದ ಪ್ರಸನ್ನ, ಸ್ವಾಮಿ, ಮುತ್ತೇಶ, ಯೋಗೇಶ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಜ.3ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶ ಸೋಮನಾಥ್ ಆದೇಶಿಸಿದರು.
ಹೈದ್ರಾಬಾದ್‍ನಲ್ಲಿ ಸಿಕ್ಕಿಬಿದ್ದ ಹಂತಕರು: ಆಂಧ್ರ ಪ್ರದೇಶದ ಹೈದರಾಬಾದ್‍ನಿಂದ ತಿರುಪತಿಗೆ ಖಾಸಗಿ ಬಸ್‍ನಲ್ಲಿ ತೆರಳುತ್ತಿದ್ದ ವೇಳೆ ಈ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದ ಸಿಪಿಐ ಎನ್.ವಿ.ಮಹೇಶ್ ಹಾಗೂ ಬೆಸಗರಹಳ್ಳಿ ಠಾಣೆ ಎಎಸ್‍ಐ ಬೆಳಗುಲಿ ಮಹದೇವಪ್ಪ ನೇತೃತ್ವದ ಪೊಲೀಸರು ಇಂದು ನಾಲ್ವರು ಆರೋಪಿಗಳನ್ನು ಮದ್ದೂರಿಗೆ ಕರೆತಂದು ವಿಚಾರಣೆ ನಡೆಸಿ ನಂತರ ಪಟ್ಟಣದ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತು. ಬಳಿಕ ಆರೋಪಿಗಳನ್ನು ಜೆಎಂಎಫ್‍ಸಿ ನ್ಯಾಯಾಲಯದ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸೋಮನಾಥ್ ಎದುರು ಹಾಜರು ಪಡಿಸಲಾಯಿತು.
ಪ್ರಕಾಶ್ ಕೊಲೆ ಪ್ರಕರಣದ ಒಟ್ಟು 7 ಮಂದಿ ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ಮೂವರನ್ನು ಬಂಧಿಸುವವರೆವಿಗೆ 10 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಮನವಿ ಮಾಡಿದರು. ಪೊಲೀಸರ ಮನವಿ ಮೇರೆಗೆ ಬಂಧಿತ ಆರೋಪಿಗಳನ್ನು ಜ.3ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶ ಸೋಮನಾಥ್ ಆದೇಶಿಸಿದರು. ವಿಚಾರಣೆ ಬಳಿಕ ಆರೋಪಿಗಳನ್ನು ಜ.3ರ ಸಂಜೆ 5 ಗಂಟೆಯೊಳಗೆ ಹಾಜರು ಪಡಿಸುವಂತೆಯೂ ಸೂಚಿಸಿದರು.