ಪ್ರಕಾಶ್ ಹತ್ಯೆ ಪ್ರಕರಣ: ಊರು ತೊರೆದ 23 ಕುಟುಂಬ
ಮಂಡ್ಯ

ಪ್ರಕಾಶ್ ಹತ್ಯೆ ಪ್ರಕರಣ: ಊರು ತೊರೆದ 23 ಕುಟುಂಬ

December 28, 2018

ಪ್ರಕಾಶ್ ಕುಟುಂಬಕ್ಕೂ ಜೀವ ಭಯದ ಆತಂಕ: ಪೊಲೀಸ್ ರಕ್ಷಣೆಗೆ ಮೊರೆ

ಮದ್ದೂರು: ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಹಿನ್ನೆಲೆಯಲ್ಲಿ ತೊಪ್ಪನಹಳ್ಳಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆಸಿದ್ದು, ಗ್ರಾಮಸ್ಥರು ಇಂದಿಗೂ ಆತಂಕದಿಂದ ಹೊರಬಂದಿಲ್ಲ. ಗ್ರಾಮದ ಜನರಲ್ಲಿ ಇಂದಿಗೂ ಭಯದ ವಾತಾವರಣವಿದೆ. ಮನೆಯಿಂದ ಈಚೆಗೆ ಬಾರದ ಪರಿಸ್ಥಿತಿಯಲ್ಲಿ ಜನರಿದ್ದಾರೆ.

ಊರು ತೊರೆದ 23 ಕುಟುಂಬ: ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ಪ್ರಕರಣದ 7 ಆರೋಪಿಗಳ ಸಂಬಂಧಿಕರ 23 ಕುಟುಂಬ ವರ್ಗದವರು ಊರು ತೊರೆದಿದ್ದಾರೆ ಎನ್ನಲಾಗಿದೆ.

ಘಟನೆ ನಡೆದ ದಿನ ಗ್ರಾಮದಲ್ಲಿ ಕೆಲವು ಮನೆಗಳ ಮೇಲೆ ಉದ್ರಿಕ್ತರು ದಾಳಿ ನಡೆಸಿದ್ದರು. ಕೆಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಮನೆಯ ಮುಂಭಾಗದ ಚಪ್ಪರ ಮುರಿದು ಹಾಕಲಾಗಿತ್ತು. ಮನೆಯ ಹೆಂಚು, ಕಿಟಕಿ ಗಾಜುಗಳು ಒಡೆದಿತ್ತು. ಮನೆಯ ಮುಂದೆ ನಿಲ್ಲಿಸಲಾಗಿದ್ದ ವಾಹನಗಳಿಗೆ ಬೆಂಕಿ ಹಾಕಲಾಗಿತ್ತು. ಈ ಘಟನೆಯಿಂದಾಗಿ ತಮಗೆ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಹಾನಿಗೊಳಗಾದ ಮನೆಯ ಮಾಲೀಕರು ದೂರು ನೀಡಿದ್ದು, ಈ ಸಂಬಂಧ 7 ಮಂದಿ ಮೇಲೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರಿಸ್ಥಿತಿ ಶಾಂತಗೊಳ್ಳುವವರೆಗೂ ಗ್ರಾಮದಲ್ಲಿರುವುದು ಬೇಡ ಎಂದು ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ತೊರೆಯುತ್ತಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿ ಇಂದು ಕೂಡಾ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಮನೆ ತೊರೆದಿರುವ 23 ಕುಟುಂಬಸ್ಥರ ಜಾನುವಾರುಗಳಿಗೆ ನೆರೆ ಮನೆಯವರು ನೀರು, ಮೇವು ಹಾಕುತ್ತಿದ್ದಾರೆ. ಇನ್ನೊಂದೆಡೆ ಆರೋಪಿಗಳನ್ನು ಶೂಟೌಟ್ ಮಾಡಿ ಅಂತಾ ಸಿಎಂ ಕುಮಾರಸ್ವಾಮಿ ಹೇಳಿರೋದು ಸಹ ಆರೋಪಿಗಳ ಕುಟುಂಬ ವರ್ಗದಲ್ಲಿ ಆತಂಕಕ್ಕೆ ಎಡೆ ಮಾಡಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಈಗಲೂ ಜೀವ ಭಯವಿದೆ: ನಮಗೆ ಕಾನೂನು ಮೇಲೆ ನಂಬಿಕೆ ಹೋಗಿದೆ ಎಂದು ಕೊಲೆಯಾದ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಅವರ ಅಣ್ಣ ಗುರುರಾಜ್ ಬೇಸರ ವ್ಯಕ್ತಪಡಿಸಿದರು.

ಕೊಲೆ ಸಂಬಂಧ 4 ಅಲ್ಲ 10 ಆರೋಪಿಗಳನ್ನು ಬಂಧಿಸಿದರೂ, ಕೊಲೆ ಯಾದ ನನ್ನ ತಮ್ಮನ್ನು ಕರೆದುಕೊಂಡು ಬರಲು ಸಾಧ್ಯನಾ ಎಂದು ಕಣ್ಣೀರು ಹಾಕಿ ನೋವು ತೋಡಿಕೊಂಡರು. ನಮಗೆ ಈಗಲೂ ಜೀವಭಯವಿದೆ ಎಂದು ತೊಪ್ಪನಹಳ್ಳಿಯ ಅವರ ನಿವಾಸದಲ್ಲಿ ಆತಂಕ ವ್ಯಕ್ತಪಡಿಸಿದರು.

ಕೊಲೆ ಮಾಡಿದವರು ಬೇಲ್ ಮೇಲ್ ಈಚೆಗೆ ಬರುತ್ತಾರೆ. ಕೊಲೆಯಾದ ಕುಟುಂಬದವರು ಪ್ರಾಣಭಯದಲ್ಲಿ ಜೀವನ ದೂಡಬೇಕಾದ ದುಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Translate »