- ಮೇಕೆದಾಟು, ಮಹದಾಯಿ ಯೋಜನೆ ಜಾರಿಗೆ ಜಯ ಕರ್ನಾಟಕ ಪ್ರತಿಭಟನೆ
- ಹೇಮಾವತಿಯಿಂದ ಕೆರೆಕಟ್ಟೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಬೃಹತ್ ಮೆರವಣಿಗೆ
ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಡ್ಯ ಮತ್ತು ನಾಗಮಂಗಲದಲ್ಲಿಂದು ಪ್ರತ್ಯೇಕ ಪ್ರತಿಭಟನೆ ನಡೆಯಿತು.
ಮೇಕೆದಾಟು ಹಾಗೂ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಮಂಡ್ಯದಲ್ಲಿ ಪ್ರತಿಭಟಿಸಿದರೆ, ಬಿಂಡಿಗನವಿಲೆ ವ್ಯಾಪ್ತಿಯ ಕೆರೆ ಕಟ್ಟೆಗಳಿಗೆ ಹೇಮಾವತಿಯಿಂದ ನೀರು ತುಂಬಿಸುವಂತೆ ಒತ್ತಾಯಿಸಿ ರೈತರು ನಾಗಮಂಗಲದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.
ಮಂಡ್ಯ: ಮೇಕೆದಾಟು ಹಾಗೂ ಮಹದಾಯಿ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳು ನಾಡು ಹಾಗೂ ಗೋವಾ ಸರ್ಕಾರದ ವಿರುದ್ಧ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.ನಗರದ ಸರ್‍ಎಂವಿ ಪ್ರತಿಮೆ ಎದುರು ಜಮಾಯಿ ಸಿದ ಪ್ರತಿಭಟನಾಕಾರರು ಗೋವಾ ಮತ್ತು ತಮಿಳುನಾಡು ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಮಾತನಾಡಿ, ಮೇಕೆದಾಟು ಯೋಜನೆ ಕಳೆದ ನಾಲ್ಕೈದು ವರ್ಷ ಗಳಿಂದ ಚರ್ಚೆಗೆ ಬಂದಿದೆ. ಅಂದಿನಿಂದಲೂ ತಮಿಳುನಾಡು ಸರ್ಕಾರ ಇದನ್ನು ವಿರೋಧಿಸು ತ್ತಲೇ ಬಂದಿದೆ. ಸುಮಾರು 5900 ಕೋಟಿ ವೆಚ್ಚದ ಈ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಅಡೆತಡೆಗಳನ್ನು ನಿವಾರಿಸಿಕೊಂಡು ಇದೀಗ ಕೇಂದ್ರ ಜಲ ಆಯೋಗದ ಅನುಮತಿಯನ್ನೂ ಸಹ ಪಡೆದಿದೆ. ವಿಸ್ತøತ ಯೋಜನಾ ವರದಿ ಸಿದ್ಧ ಪಡಿಸಿ ಸಲ್ಲಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ತಕರಾರು ಮಾಡುತ್ತಿರುವುದು ಸಮಂಜಸವಲ್ಲ ಎಂದರು.
ಸುಪ್ರೀಂಕೋರ್ಟ್‍ನಲ್ಲಿ ನಮ್ಮ ರಾಜ್ಯದ ಪರ ವಕೀಲರು ಸೂಕ್ತ ರೀತಿಯಲ್ಲಿ ವಕಾಲತ್ತು ವಹಿಸಬೇಕು. ಈ ಯೋಜನೆಗೆ ಕೋರ್ಟ್ ಮಧ್ಯಂತರ ತಡೆ ನೀಡದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಅವರು ಒತ್ತಾಯಿಸಿದರು.
ಮಹದಾಯಿ ಯೋಜನೆಗೆ ಆಗ್ರಹ: ಉತ್ತರ ಕರ್ನಾಟಕ ಭಾಗದ ಮಹದಾಯಿ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳ್ಳ ಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ವನ್ನು ಆಗ್ರಹಿಸಿದರು.
ಕಳೆದ 50 ವರ್ಷಗಳಿಂದಲೂ ಮಹದಾಯಿ ನೀರಿಗಾಗಿ ಹೋರಾಟ ಮಾಡಲಾಗುತ್ತಿದೆ. ಆದರೆ ಇದರ ಇತ್ಯರ್ಥ ಈವರೆಗೆ ಆಗಿಲ್ಲ. ಸುಖಾಸುಮ್ಮನೆ ಗೋವಾ ರಾಜ್ಯ ಸರ್ಕಾರ ಕ್ಯಾತೆ ತೆಗೆಯುತ್ತಿದೆ. ಮಹದಾಯಿ ನಮ್ಮ ನೆಲದಲ್ಲೂ ಹರಿಯುತ್ತಿರುವು ದರಿಂದ ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಬವಣೆ ನೀಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿನಯ್, ರವೀಂದ್ರ, ಬೋರೇಗೌಡ, ಉಮೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ನಾಗಮಂಗಲ: ಹೇಮಾವತಿ ಜಲಾಶಯದಿಂದ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ನಾಗ ಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿ ರೈತರು ಪಟ್ಟಣದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.ಬಿಂಡಿಗನವಿಲೆಯಿಂದ ನಾಗಮಂಗಲದ ಮಿನಿ ವಿಧಾನಸೌಧದವರೆಗೆ ಜಾಥಾ ನಡೆಸಿದ ರೈತರು, ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಬೀದರ್-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ಕುಳಿತು ಪ್ರತಿಭಟಿಸಿದರು. ಬಳಿಕ ಮಿನಿವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‍ಗೆ ಮನವಿ ಪತ್ರ ಸಲ್ಲಿಸಿದರು.
ಹೇಮಾವತಿ ನೀರಿಗಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿ ಬಿಂಡಿಗನವಿಲೆ ಪಟ್ಟಣ ಬಂದ್ ಆಗಿತ್ತು. ಟ್ರಾಕ್ಟರ್, ಬೈಕ್ ಮತ್ತು ಆಟೋಗಳಲ್ಲಿ ಪಟ್ಟಣಕ್ಕೆ ಆಗಮಿಸಿದ ಸಹಸ್ರಾರು ಪ್ರತಿಭಟನಾಕಾರರು ಮೆರವಣಿಗೆ ನಡೆಸಿದ ಪರಿಣಾಮ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು.
ಬಿಂಡಿಗನವಿಲೆ ವೈನತೇಯ ಭಕ್ತ ಮಂಡಳಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಬಿಂಡಿಗನವಿಲೆ ಹೋಬಳಿಯಲ್ಲಿ ಹಲವು ವರ್ಷ ಗಳಿಂದ ಮಳೆಯಿಲ್ಲದೇ ಬರಗಾಲ ಎದುರಿಸು ವಂತಾಗಿದೆ. ಜನಪ್ರತಿನಿಧಿಗಳು ಚುನಾವಣಾ ಸಮಯ ಹೊರತುಪಡಿಸಿ ಯಾವ ಕಾಲದಲ್ಲೂ ತಿರುಗಿ ನೋಡುವುದಿಲ್ಲ. ಒಂದು ಕಾಲದಲ್ಲಿ ತೆಂಗಿನರಫ್ತಿಗೆ ಹೆಸರು ವಾಸಿಯಾಗಿದ್ದ ಹೋಬಳಿ ಇಂದು ನೀರಿನ ಕೊರತೆಯಿಂದಾಗಿ ಲಕ್ಷಾಂತರ ತೆಂಗಿನ ಮರಗಳು ಒಣಗಿ ಕೃಷಿಯನ್ನೇ ನಂಬಿಕೊಂಡಿದ್ದ ರೈತರು ವಲಸೆ ಹೋಗುತ್ತಿದ್ದಾರೆ. ಕೆರೆಗಳಲ್ಲಿ ನೀರಿಲ್ಲದೇ ವಿದ್ಯಾವಂತ ಯುವಕರು ಮರಳು ಮಾಫಿಯಾ ದತ್ತ ಮುಖ ಮಾಡುತ್ತಿದ್ದಾರೆ ಎಂದು ದೂರಿದರು.
ದೇವಲಾಪುರ, ಹೊಣಕೆರೆ, ಬೆಳ್ಳೂರು ಕೆರೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ತುಂಬಿಸುತ್ತಿರುವಂತೇ ಬಿಂಡಿಗನವಿಲೆ ಕೆರೆಗಳಿಗೂ ನೀರು ತುಂಬಿಸುವಂತೆ ಆಗ್ರಹಿಸಿದರು.ಮೆರವಣಿಗೆ ನೇತೃತ್ವವನ್ನು ತಾಪಂ ಸದಸ್ಯ ಗಿರೀಶ್, ಎಪಿಎಂಸಿ ಸದಸ್ಯ ಮಂಜೇಶ್, ಹೊನ್ನಾವರ ಗ್ರಾಪಂ ಮಾಜಿ ಉಪಾಧ್ಯಕ್ಷ ಕೃಷ್ಣೇ ಗೌಡ, ಬಿಂಡಿಗನವಿಲೆ ಗ್ರಾಪಂ ಮಾಜಿ ಅಧ್ಯಕ್ಷ ಶಂಕರ್ ಮುಂತಾದವರು ವಹಿಸಿದ್ದರು.