ಸಂಸ್ಥಾಪಕ ದಿ.ಹರಿಶಂಕರ್ ಸಿಂಘಾನೀಯ ಜನ್ಮ ದಿನ ಪ್ರಯುಕ್ತ ಜೆ.ಕೆ. ಟೈರ್ಸ್ ವತಿಯಿಂದ  ಬೃಹತ್ ರಕ್ತದಾನ ಶಿಬಿರ
ಮೈಸೂರು

ಸಂಸ್ಥಾಪಕ ದಿ.ಹರಿಶಂಕರ್ ಸಿಂಘಾನೀಯ ಜನ್ಮ ದಿನ ಪ್ರಯುಕ್ತ ಜೆ.ಕೆ. ಟೈರ್ಸ್ ವತಿಯಿಂದ  ಬೃಹತ್ ರಕ್ತದಾನ ಶಿಬಿರ

June 21, 2018

ಮೈಸೂರು : ಜೆ.ಕೆ.ಸಮೂಹ ಸಂಸ್ಥೆಯ ಸಂಸ್ಥಾಪಕ ದಿ.ಹರಿಶಂಕರ್ ಸಿಂಘಾನೀಯ ಅವರ 85ನೇ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಹೊರವಲಯದಲ್ಲಿರುವ ಜೆ.ಕೆ.ಟೈರ್ಸ್ ಕಾರ್ಖಾನೆ ವ್ಯಾಪ್ತಿಯ ಸುಮಾರು 5 ಕಡೆ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.

ಮೈಸೂರಿನ ಜೀವಧಾರ ಬ್ಲಡ್‍ಬ್ಯಾಂಕ್, ಲಯನ್ಸ್ ಬ್ಲಡ್‍ಬ್ಯಾಂಕ್, ಸ್ವಾಮಿ ವಿವೇಕಾನಂದ ಬ್ಲಡ್‍ಬ್ಯಾಂಕ್, ಜೀವ ರಕ್ಷಾ ಬ್ಲಡ್‍ಬ್ಯಾಂಕ್ ಸಹಯೋಗದಲ್ಲಿ ಬುದವಾರ ಮುಂಜಾನೆ 6 ಗಂಟೆಗೆ ಪ್ರಾರಂಭವಾದ ರಕ್ತದಾನ ಶಿಬಿರದಲ್ಲಿ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು, ಪತ್ರಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ರೈತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರ ಮೂಲಕ ಮಾನವೀಯತೆ ಮೆರೆದರು.

ಭಾರೀ ಸೇವಾ ಕಾರ್ಯ: ರಕ್ತದಾನ ಶಿಬಿರವನ್ನು ಜೆ.ಕೆ.ಟೈರ್ಸ್‍ನ ಉಪಾಧ್ಯಕ್ಷ(ವಕ್ರ್ಸ್) ಉಮೇಶ್ ಕೆ.ಶೆಣೈ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಜೆ.ಕೆ.ಸಮೂಹ ಸಂಸ್ಥೆ ನಾಡಿನಲ್ಲಿ ಮತ್ತು ವಿದೇಶದಲ್ಲಿ ನೂರಾರು ಕಾರ್ಖಾನೆಗಳನ್ನು ಹೊಂದಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ನೀಡುವುದರ ಮೂಲಕ ಅವರಿಗೆ ಬದುಕು ನೀಡಿದೆ. ಇದರ ಜತೆಗೆ ಸಂಸ್ಥೆಯು ತನ್ನ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನಿಧಿಯ ಕಾರ್ಯಕ್ರಮದ ಮೂಲಕ ಮೈಸೂರಿನ ಬಿಳಿಕೆರೆ ಹೋಬಳಿಯ 10 ಗ್ರಾಮಗಳನ್ನು ಹಾಗೂ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.
ಈಗಾಗಲೇ ರೈತರಿಗೆ 60 ಕೃಷಿ ಹೊಂಡ, 263 ಟಿಸಿಬಿ, 125 ಜನ ಫಲಾನುಭವಿಗಳಿಗೆ ತಲಾ 40 ರಂತೆ ಒಟ್ಟು ಐದು ಸಾವಿರ ಮಾವಿನ ಸಸಿಗಳನ್ನು ವಿತರಿಸುವುದರ ಮೂಲಕ ರೈತರ ನೆರವಿಗೆ ಧಾವಿಸಿದೆ, ಇಂತಹ ಸಾವಿರಾರು ಜನಪರ ಕಾರ್ಯಕ್ರಮಗಳನ್ನು ನಡೆಸಲು ನಮ್ಮ ಸಂಸ್ಥೆಯ ಸಂಸ್ಥಾಪಕ ಹರಿಶಂಕರ್ ಸಿಂಘಾನೀಯ ಅವರೇ ನಮಗೆ ಪ್ರೇರಣೆಯಾಗಿದ್ದು, ಈಗ ಅವರು ನಮ್ಮೊಡನೆ ಇಲ್ಲ.

ಅವರು ನಮ್ಮನ್ನಗಲಿ ಐದು ವರ್ಷಗಳಾಗಿವೆ. ಅವರ ಜನ್ಮ ದಿನಾಚರಣೆ ಪ್ರಯುಕ್ತ ಕಳೆದ ಐದು ವರ್ಷದಿಂದ ನಮ್ಮ ಸಂಸ್ಥೆಯಿಂದ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಿಕೊಂಡು ಬರುತ್ತಿದ್ದೇವೆ. 2004ರಲ್ಲಿ ಕೇವಲ 350 ಜನರಿಂದ ಪ್ರಾರಂಭವಾದ ಈ ರಕ್ತದಾನ ಶಿಬಿರದಲ್ಲಿ ಕಳೆದ ವರ್ಷ 1030 ಜನರು ರಕ್ತದಾನ ಮಾಡಿದ್ದರು. ಈ ವರ್ಷ 1200 ಜನ ರಕ್ತದಾನ ಮಾಡಲಿದ್ದಾರೆ. ರಕ್ತದಾನದ ಮೂಲಕ ಹರಿಶಂಕರ್ ಸಿಂಘಾನೀಯ ಅವರು ಈ ನಾಡಿಗೆ ನೀಡಿರುವ ಕೊಡುಗೆಗಳನ್ನು ನಾವು ಸ್ಮರಿಸುತ್ತಿದ್ದೇವೆ ಎಂದರು.

ಸರ್ವರಿಂದ ರಕ್ತದಾನ: ಜೆ.ಕೆ.ಟೈರ್ಸ್‍ನ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಕ್ರಂ ಹೆಬ್ಬಾರ್ ಮಾತನಾಡಿ, ಜೆ.ಕೆ.ಟೈರ್ಸ್ ಸಂಸ್ಥೆಯಿಂದ ನಡೆಯುತ್ತಿರುವ ಈ ರಕ್ತದಾನ ಶಿಬಿರದಲ್ಲಿ ಸಂಸ್ಥೆಯ ಕಾರ್ಮಿಕರಲ್ಲದೆ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳೂ ರಕ್ತದಾನ ಮಾಡುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಬಡ ರೋಗಿಗಳ ಜೀವ ಉಳಿಸಲು ರಕ್ತದ ಅಗತ್ಯತೆ ಹೆಚ್ಚಾಗಿದ್ದು, ನಮ್ಮ ರಾಜ್ಯದಲ್ಲಿ ಒಂದು ದಿನಕ್ಕೆ ಅಂದಾಜು 1400 ಯುನಿಟ್ ರಕ್ತದ ಬೇಡಿಕೆ ಇದೆ. ಇದರಲ್ಲಿ ಶೇ.80ರಷ್ಟು ರಕ್ತ ಮಾತ್ರ ಪೂರೈಕೆಯಾಗುತ್ತಿದ್ದು, ಉಳಿದ ಶೇ.20 ರಷ್ಟು ರಕ್ತದ ಕೊರತೆ ಇದೆ. ಇದನ್ನು ಸರಿದೂಗಿಸಿ ಅಪಘಾತ, ಶಸ್ತ್ರ ಚಿಕಿತ್ಸೆ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ರೋಗಿಗಳ ಪ್ರಾಣ ಕಾಪಾಡಲು ಬೇಕಿರುವ ರಕ್ತವನ್ನು ಸಂಗ್ರಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಜೆ.ಕೆ.ಟೈರ್ಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗ ಈ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿ, ಸಾರ್ವಜನಿಕ ಸೇವೆಯಲ್ಲಿ ಭಾಗಿಯಾಗಿದೆ ಎಂದರು.

ಅನ್ನದಾತ ಸಂಸ್ಥೆ: ಜೆ.ಕೆ.ಟೈರ್ಸ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಜೆ.ಕೆ.ಸಮೂಹ ಸಂಸ್ಥೆ ನಮ್ಮ ಅನ್ನದಾತ ಸಂಸ್ಥೆಯಾಗಿದೆ. ಜತೆಗೆ ರಕ್ತದಾನದಂತಹ ಅತ್ಯುತ್ತಮ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಪ್ರಾಣ ಕಾಪಾಡುವ ಹೊಣೆಯನ್ನು ಹೊತ್ತಿರುವುದು ಶ್ಲಾಘನೀಯವಾಗಿದ್ದು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವುದರ ಮೂಲಕ ಸಂಸ್ಥೆಯ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಜೆ.ಕೆ. ಟೈರ್ಸ್‍ನ ವಿಟಿಪಿ-1, ಟಿಆರ್‍ಪಿ-2, ಓಟಿಆರ್-3, ಜೆ.ಕೆ.ಅತಿಥಿ ಗೃಹ, ಜೆ.ಕೆ. ಟೈರ್ಸ್‍ನ ದತ್ತು ಗ್ರಾಮವಾದ ಹುಣಸೂರು ತಾಲ್ಲೂಕು ಮೈದನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ನಡೆಯಿತು.

ಇದೇ ವೇಳೆ ಸುಮಾರು 57 ಬಾರಿ ರಕ್ತದಾನ ಮಾಡಿದ ಜೆ.ಕೆ.ಟೈರ್ಸ್ ಅಧಿಕಾರಿಯಾದ ಮುತ್ತುರಾಜ್ ಅವರನ್ನು ಗೌರವಿಸಲಾಯಿತು.
ಜೆ.ಕೆ. ಟೈರ್ಸ್‍ನ ಜನರಲ್ ಮ್ಯಾನೇಜರ್‍ಗಳಾದ ಬಿ.ಶಿವಶಂಕರ್, ಎಚ್.ಕೆ.ಸುಬ್ರಹ್ಮಣ್ಯ, ಆನಂದ್ ಸ್ಟಾನ್ಲಿ, ಲಯನ್ಸ್ ಸಂಸ್ಥೆಯ ಜಿಲ್ಲಾ ಮೊದಲನೆ ರಾಜ್ಯಪಾಲ ನಾಗರಾಜು ಬೈರಿಗೆ, ಜೆ.ಕೆ. ಟೈರ್ಸ್‍ನ ಎಚ್.ಆರ್.ವಿಭಾಗದ ಅಧಿಕಾರಿಗಳಾದ ನಾಗರಾಜು, ಪ್ರಭುದೇವ್, ಆನಂದ್, ರವೀಂದ್ರ, ಅಶ್ವಥ್ ರಾಜ್, ಅಜೀತ್, ರಂಗಸ್ವಾಮಿ, ಸುರಕ್ಷಾ ವಿಭಾಗದ ಅರವಿಂದ್ ಪೀಕ್ಲೆ, ಕಾರ್ಮಿಕ ಸಂಘದ ಅಧ್ಯಕ್ಷ ಭರತ್ ರಾಜ್, ಪದಾಧಿಕಾರಿಗಳಾದ ಅಣ್ಣಪ್ಪ, ಟಿ.ಎಲ್.ನಾಗರಾಜು, ಮಲ್ಲೇಶ್, ಮುರಳಿಧರ್, ಕಾಂತರಾಜು ಮುಂತಾದವರು ಇದ್ದರು.

Translate »