ಮೈಸೂರು: ಮೈಸೂರಿನ ರಿಂಗ್ ರಸ್ತೆಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ `ಕಲಾವೈಭವ’ ಹಾಗೂ `ಸಿಲ್ಕ್ ಉತ್ಸವ’ವನ್ನು ಏರ್ಪಡಿಸಲಾಗಿದೆ.
ರಾಜ್ಯ ಬೃಹತ್, ಮೆಗಾ ಕೈಗಾರಿಕಾ ನಿರ್ದೇಶನಾ ಲಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂ ದಿಗೆ ಜಿಲ್ಲಾ ಮಟ್ಟದ ಗುಡಿ ಕೈಗಾರಿಕೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಸಿಲ್ಕ್ ಉತ್ಸವವನ್ನೂ ಏರ್ಪಡಿಸಲಾಗಿದ್ದು, ಇಂದು ಚಾಲನೆ ದೊರಕಿತು.
ಸ್ಥಳೀಯ ಹಾಗೂ ರಾಜ್ಯದ ವಿವಿಧೆಡೆಯ ಕೈಗಾರಿಕೆ ಗಳು, ಗುಡಿ ಕೈಗಾರಿಕೆಗಳು, ಸ್ವ-ಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಆಕರ್ಷಕ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಮೂಲಕ ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಿ ರುವ ಈ ಮೇಳದಲ್ಲಿ, ರೇಷ್ಮೆ, ಕಾಟನ್ ಸೀರೆಗಳು, ಹೊದಿಕೆ ಗಳು, ವಿವಿಧ ಲೋಹ, ಜರಿ ಕಸೂತಿ ವಸ್ತುಗಳು, ಸಿದ್ಧ ಉಡುಪುಗಳು, ಶಿಲ್ಪಗಳು, ಕುಂಬಾರಿಕೆ, ಚರ್ಮ ಹಾಗೂ ಮರದ ಆಟಿಕೆಗಳು, ಬೊಂಬೆಗಳು, ಅತ್ಯಾಕರ್ಷಕ ಗೃಹ ಬಳಕೆ ವಸ್ತುಗಳು, ಉತ್ತರ ಕರ್ನಾಟಕದ ರುಚಿಕರ ತಿಂಡಿ ಪದಾರ್ಥಗಳು, ಕಸೂತಿಯುಳ್ಳ ಬ್ಯಾಗುಗಳು, ಕೃತಕ ಆಭರಣ ಗಳು, ಆಯುರ್ವೇದ ಮತ್ತು ಗಿಡಮೂಲಿಕಾ ಔಷಧಿಗಳು, ರುದ್ರಾಕ್ಷಿ, ಮಣಿಗಳು, ಬುಡಕಟ್ಟು ಜನಾಂಗದ ಆಭರಣ ಗಳು, ಬಿದ್ರಿ, ಕುಂದಣಕಲೆ, ಕಂಚಿನ ವಿಗ್ರಹ, ಕಸೂತಿ ಸೀರೆಗಳು, ಚನ್ನಪಟ್ಟಣದ ಗೊಂಬೆಗಳು, ಮಣ್ಣಿನ ಹೂಜಿಗಳು, ಹೂ-ಕುಂಡಗಳು ಸೇರಿದಂತೆ ಬಗೆ ಬಗೆಯ ವಸ್ತುಗಳನ್ನು ಕಣ್ತುಂಬಿಕೊಳ್ಳುವ ಜೊತೆಗೆ ಖರೀದಿಸಬಹುದು.
ಸಣ್ಣ ಕೈಗಾರಿಕೆ, ಸ್ವ-ಸಹಾಯ ಗುಂಪು, ಸ್ತ್ರೀಶಕ್ತಿ ಸಂಘ, ಸ್ವಯಂ ಉದ್ಯೋಗಿಗಳು, ಕರಕುಶಲ ಕರ್ಮಿಗಳು, ಕೈಮಗ್ಗ ನೇಕಾರರ ಸಹಕಾರ ಸಂಘಗಳ 100ಕ್ಕೂ ಹೆಚ್ಚು ಮಳಿಗೆ ಗಳಲ್ಲಿ ಅತ್ಯಾಕರ್ಷಕ ವಸ್ತುಗಳ ಪ್ರದರ್ಶನ ವiತ್ತು ಮಾರಾಟ ಇರಲಿದ್ದು, ಮಾ.31ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಭೇಟಿ ನೀಡಬಹುದು. ಈ ಬಾರಿ ಎಲ್ಲಾ ವರ್ಗದ ಜನರಿಗೂ ಕೈಗೆಟಕುವ ದರದಲ್ಲಿ ವಸ್ತುಗಳ ಮಾರಾಟವಿರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
10 ದಿನಗಳ `ಕಲಾವೈಭವ’ ಹಾಗೂ `ಸಿಲ್ಕ್ ಉತ್ಸವ’ ವನ್ನು ಶುಕ್ರವಾರ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರ ಮಠ ಉದ್ಘಾಟಿಸಿದರು. ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ, ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ(ಯೋಜನೆಗಳು) ಬಿ.ಆರ್.ಉಮಾಕಾಂತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಬಿ.ಕೆ.ಶಿವಕುಮಾರ್, ಉದ್ಯಮಿ ರಾಕೇಶ್ ಎಸ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.