ಮತ್ತೆ ಉಕ್ಕಿ ಹರಿಯುತ್ತಿರುವ ಕಪಿಲಾ ನದಿ: ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್ ಸಾಧ್ಯತೆ
ಮೈಸೂರು

ಮತ್ತೆ ಉಕ್ಕಿ ಹರಿಯುತ್ತಿರುವ ಕಪಿಲಾ ನದಿ: ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಬಂದ್ ಸಾಧ್ಯತೆ

August 17, 2018

ನಂಜನಗೂಡು: ವೈನಾಡು ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಕಬಿನಿ ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಇಂದು ಕಬಿನಿ ಜಲಾಶಯದಿಂದ 55.000 ಕ್ಯುಸೆಕ್ಸ್ ನೀರನ್ನು ಹೊರಬಿಟ್ಟಿರುವ ಪರಿಣಾಮ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು, ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ಕಳೆದ ಎರಡು ತಿಂಗಳಲ್ಲಿ ಮೂರನೇ ಬಾರಿ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಇತ್ತೀಚೆಗೆ ಮಲ್ಲನಮೂಲೆ ಮಠದ ಬಳಿ ರಾಷ್ಟ್ರೀಯ ಹೆದ್ದಾರಿ ಮೈಸೂರು -ನಂಜನ ಗೂಡು ರಸ್ತೆಗೆ ನೀರು ಹರಿದ ಪರಿಣಾಮ ಮೂರು ದಿನಗಳ ಕಾಲ ರಸ್ತೆ ಬಂದ್ ಆಗಿ ಬದಲಿ ಸಂಚಾರ ವ್ಯವಸ್ಥೆ ಮಾಡಿದ ಕಾರಣ ವಾಹನ ಓಡಾಟ ಮತ್ತು ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದರು.

ಈಗ ಮತ್ತೆ ರಸ್ತೆಯ ತನಕ ಈ ಸಂಜೆ ಯಿಂದ ನೀರು ಹರಿದು ಬರುತ್ತಿದ್ದು, ರಾತ್ರಿ ಅಥವಾ ನಾಳೆ ಡ್ಯಾಂನಿಂದ ಹೆಚ್ಚುವರಿ ನೀರು ಹರಿಸಿದರೆ ರಸ್ತೆ ಬಂದ್ ಆಗುವ ಲಕ್ಷಣ ಕಾಣುತ್ತಿದೆ ಎಂದು ತಾಲೂಕಿನ ತಹಸೀಲ್ದಾರ್ ದಯಾನಂದ ಪತ್ರಕರ್ತರಿಗೆ ತಿಳಿಸಿದ್ದಾರೆ.
ಈಗಾಗಲೇ ಸ್ಥಾನಘಟ್ಟ, ಮುಡಿಕಟ್ಟೆ, ಅಯ್ಯಪ್ಪಸ್ವಾಮಿ ದೇಗುಲ, ಪರುಶುರಾಮ ದೇವಸ್ಥಾನ, ಜಲಾವೃತವಾಗಿದ್ದು ತಗ್ಗು ಪ್ರದೇಶಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಅನೇಕ ಮನೆಗಳು ಮುಳುಗಡೆ ಯಾಗಿದ್ದು ಮತ್ತೆ ತಾಲೂಕು ಆಡಳಿತ ಪ್ರವಾಹದಿಂದಾಗುವ ಅನಾಹುತ ತಪ್ಪಿಸಲು ಮುಂಜಾಗೃತ ಕ್ರಮವನ್ನು ಕೈಗೊಳ್ಳುತ್ತಿದೆ.

Translate »