ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ
ಮಂಡ್ಯ

ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ

August 17, 2018

ಮಂಡ್ಯ: ಕಾವೇರಿ ನದಿ ಪ್ರವಾಹ ದಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಕೃಷ್ಣರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವ ಕಾರಣ, ಜಲಾಶಯದಿಂದ 1.25 ಲಕ್ಷ ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಿ ರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕಿನ ಪ್ರವಾಹ ಭೀತಿ ಎದುರಿಸುತ್ತಿರುವ ಗ್ರಾಮಗಳಲ್ಲಿ ಒಂದಾದ ಎಣ್ಣೆಹೊಳೆಕೊಪ್ಪಲಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಧೈರ್ಯ ತುಂಬಿದರು.

ಗ್ರಾಮದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚರಿಸಿದ ಸಚಿವರು, ಗ್ರಾಮಸ್ಥರು ಬಹಳ ಎಚ್ಚರದಿಂದಿರಬೇಕು. ಪ್ರವಾಹ ಎದುರಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಯಾವುದೇ ಕಾರಣಕ್ಕೂ ನದಿ ಸಮೀಪ ಯಾರೂ ಸುಳಿಯದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಗ್ರಾಮಸ್ಥರಲ್ಲಿ ಧೈರ್ಯ ತುಂಬಿದ ಸಚಿವರು, ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಪ್ರವಾಹದ ನೀರು ನುಗ್ಗದಂತೆ ತಡೆಯಲು ತಡೆಗೋಡೆ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿ ಕೈಗೆತ್ತಿ ಕೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಬಸವರಾಜೇ ಗೌಡರಿಗೆ ದೂರವಾಣಿ ಮೂಲಕ ಮಾತ ನಾಡಿದ ಸಚಿವರು, ಕೆಆರ್‌ಎಸ್‌ಗೆ ಬರುತ್ತಿರುವ ಒಳಹರಿವಿನ ಪ್ರಮಾಣ ನೋಡಿಕೊಂಡು ಸಾಧ್ಯವಾದಲ್ಲಿ 1.25 ರಿಂದ 1.30 ಲಕ್ಷ ಕ್ಯೂಸೆಕ್ಸ್ ಹೊರ ಹರಿವಿನ ಪ್ರಮಾಣ ಕಾಪಾಡಿ ಕೊಳ್ಳಲು ತಿಳಿಸಿದರು. ಅದಕ್ಕಿಂತ ಹೆಚ್ಚು ನೀರನ್ನು ಬಿಡಬೇಕಾದ ಸಂದರ್ಭ ಉದ್ಭವಿಸಿದರೆ, ಮುಂಚಿತವಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಇದರಿಂದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುಕೂಲವಾಗುತ್ತದೆ ಎಂದರು.

ಪಾಂಡವಪುರ ತಾಲೂಕು ತಹಶೀಲ್ದಾರ್ ಹನುಮಂತರಾಯಪ್ಪ, ಶ್ರೀರಂಗಪಟ್ಟಣ ಡಿವೈಎಸ್ಪಿ ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇ ಶಕರಾದ ರಾಜಮೂರ್ತಿ, ಇನ್ಸ್‍ಪೆಕ್ಟರ್ ದೀಪಕ್ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಚಿವರು ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಿಮಿಷಾಂಬ ದೇವ ಸ್ಥಾನ ಹಾಗೂ ವೆಲಸ್ಲಿ ಸೇತುವೆ ಭೇಟಿ ನೀಡಿ ಪ್ರವಾಹದ ಸ್ಥಿತಿಗತಿ ಆಲಿಸಿದರು.

Translate »