ಸುತ್ತಮುತ್ತ ಪ್ರವಾಹವಿದ್ದರೂ ಕಾರಂಜಿ ಕೆರೆಗೆ ದಕ್ಕದ ಜಲಭಾಗ್ಯ
ಮೈಸೂರು

ಸುತ್ತಮುತ್ತ ಪ್ರವಾಹವಿದ್ದರೂ ಕಾರಂಜಿ ಕೆರೆಗೆ ದಕ್ಕದ ಜಲಭಾಗ್ಯ

August 13, 2019

ಮೈಸೂರು,ಆ.12(ಎಂಟಿವೈ)- ಕೇರಳ ಹಾಗೂ ಕಾವೇರಿ ಕಣಿವೆಯಲ್ಲಿ ಭಾರಿ ಮಳೆ ಸುರಿದು ಮೈಸೂರು, ಕೊಡಗು, ಮಂಡ್ಯ ಚಾಮರಾಜನಗರ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ನೆರೆ ಹಾವಳಿ ಮಿತಿ ಮೀರಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ಮೈಸೂ ರಿನ ಕಾರಂಜಿ ಕೆರೆ ಹಾಗೂ ಲಿಂಗಾಂಬುದಿ ಕೆರೆ ನೀರಿಲ್ಲದೆ ಬಣಗುಡುತ್ತಿವೆ.

ಕಾರಂಜಿ ಕೆರೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿರುವ ಮೃಗಾಲಯ ಇದೀಗ ಕೆರೆಗೆ ನೀರು ತುಂಬಿಸುವ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಕಳೆದ ಒಂದು ವಾರ ದಿಂದ ಸುರಿದ ಅಲ್ಪ ಪ್ರಮಾಣದ ಮಳೆಯಿಂ ದಾಗಿ ಕಾರಂಜಿಕೆರೆಗೆ ಸ್ವಲ್ಪ ಪ್ರಮಾಣದ ನೀರು ಬಂದಿದೆ. ಕೆರೆಯಲ್ಲಿ ಸಂಗ್ರಹವಾಗಿ ರುವ ನೀರು ಶುದ್ಧವಾಗಿದೆ. ಇದರಿಂದಾಗಿ ಪಕ್ಷಿ ಸಂಕುಲ ಲವಲವಿಕೆಯಿಂದ ಕೂಡಿದೆ.

ಕಳೆದೊಂದು ವಾರದಿಂದ ಮೈಸೂರಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆಯಷ್ಟೇ ಬಂದಿದೆ. ಚಾಮುಂಡಿ ಬೆಟ್ಟದ ಮೇಲೆ ಹೆಚ್ಚು ಮಳೆಯಾದರೆ ನೀರು ರಾಜಕಾಲುವೆ ಮೂಲಕ ಕಾರಂಜಿಕೆರೆಗೆ ಹರಿದು ಬರಲಿದೆ. ಆದರೆ ಈ ಬಾರಿ ರಾಜ ಕಾಲುವೆಯಲ್ಲಿ ಹರಿದು ಬರುವಷ್ಟು ಪ್ರಮಾಣ ದಲ್ಲಿ ಮಳೆ ಬಿದ್ದಿಲ್ಲ. ಇದರಿಂದಾಗಿ ಕೆರೆ ಗಳಲ್ಲಿ ನೀರಿನ ಕೊರತೆ ಎದುರಾಗಿದೆ.

ಶುದ್ಧೀಕರಿಸಿದ ನೀರು: ಇತ್ತೀಚಿನ ದಿನ ಗಳಲ್ಲಿ ಮಳೆ ವ್ಯತ್ಯಯವಾಗುತ್ತಿರುವುದನ್ನು ಮನಗಂಡು ಮೃಗಾಲಯದ ಅಧಿಕಾರಿ ಗಳು ವಿದ್ಯಾರಣ್ಯಪುರಂನಲ್ಲಿರುವ ಒಳ ಚರಂಡಿ ನೀರು ಶುದ್ಧಿಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಕಾರಂಜಿಕೆರೆಗೆ ತುಂಬಿಸುವ ಚಿಂತನೆ ನಡೆಸಿದ್ದಾರೆ. ಈ ಕುರಿತು ಮೃಗಾಲಯದ ವತಿಯಿಂದ ಸಲ್ಲಿಕೆ ಯಾಗಿರುವ ಪ್ರಸ್ತಾವನೆಗೆ ಮೈಸೂರು ನಗರ ಪಾಲಿಕೆ ಸಮ್ಮತಿಸಿದ್ದು, ಪೈಪ್‍ಲೈನ್ ವ್ಯವಸ್ಥೆ ಮಾಡಿದರೆ ಶುದ್ಧೀಕರಿಸಿದ ನೀರು ನೀಡಲು ಪಾಲಿಕೆ ಒಪ್ಪಿಗೆ ಸೂಚಿಸಿದೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ಅಗತ್ಯ: ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಕಾರಂಜಿಕೆರೆಗೆ ತುಂಬಿ ಸಲು ಅನುಮತಿ ನೀಡುವಂತೆ ಮೃಗಾ ಲಯದ ಅಧಿಕಾರಿಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕೋರಿ ದ್ದಾರೆ. ಶುದ್ಧೀಕರಿಸಿದ ನೀರಿನಲ್ಲಿ ಪಕ್ಷಿ ಸಂಕುಲ ಹಾಗೂ ಜಲಚರಗಳಿಗೆ ತೊಂದರೆ ಯಾಗುವ ಅಂಶಗಳಿವೆಯೇ? ಎಂಬು ದನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ನೀರಿನ ಸ್ಯಾಂಪಲ್ ಕಳುಹಿಸಲಾಗಿದೆ. ಇದರ ವರದಿ ಬಂದ ನಂತರವಷ್ಟೇ ಶುದ್ಧೀಕರಿಸಿದ ನೀರನ್ನು ಕೆರೆಗೆ ತುಂಬಿಸಬೇಕೋ ಅಥವಾ ಪ್ರಸ್ತಾವನೆ ನಿರಾಕರಿಸಬೇಕೋ ಎನ್ನುವುದು ನಿರ್ಧಾರವಾಗಲಿದೆ. ನಾಳೆ(ಆ.13) ಸಂಜೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಭೆ ಜರುಗಲಿದ್ದು, ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆ.

ವಿಷಕಾರಕ ಅಂಶ ಹೀರುವ ಸಸ್ಯಗಳು: ಶುದ್ಧೀಕರಿಸಿದ ನೀರು ತುಂಬಿಸಲು ಅನು ಮತಿ ದೊರೆತರೆ ವಿದ್ಯಾರಣ್ಯಪುರಂನಲ್ಲಿ ರುವ ಒಳಚರಂಡಿ ನೀರು ಶುದ್ಧೀಕರಣ ಘಟಕದಿಂದ ಚಾಮುಂಡಿಬೆಟ್ಟದ ತಪ್ಪಲಿ ನವರೆಗೆ ಸುಮಾರು 8 ಕಿ.ಮೀ ದೂರ ಪೈಪ್ ಲೈನ್ ಅಳವಡಿಸಲಾಗುತ್ತದೆ. ಅಲ್ಲಿಂದ ಸುಮಾರು 2 ಕಿ.ಮೀ ದೂರ ಆ ನೀರು ರಾಜ ಕಾಲುವೆಯಲ್ಲಿ ಹರಿದು ನೀರು ಕೆರೆ ಸೇರ ಲಿದೆ. ರಾಜಕಾಲುವೆಯಲ್ಲಿ ನೀರಿನಲ್ಲಿರುವ ವಿಷಕಾರಿ ಅಂಶವನ್ನು ಹೀರಿಕೊಳ್ಳುವ ಕೆಲವು ಬಗೆಯ ಪಾಚಿ ಹಾಗೂ ಸಸ್ಯಗಳನ್ನು ಬೆಳೆಸ ಲಾಗುತ್ತದೆ. ಶುದ್ಧೀಕರಿಸಿದ ನೀರು ಈ ಗಿಡಗಳ ನಡುವೆ ಹಾದು ಬರುವುದರಿಂದ ಮಾರ್ಗ ಮಧ್ಯೆ ವಿಷಕಾರಿ ಅಂಶಗಳಿದ್ದರೆ ಅವು ಶುದ್ಧಗೊಳ್ಳುತ್ತವೆ. ಅಲ್ಲದೆ ಸೂರ್ಯನ ಕಿರಣ ನೀರಿಗೆ ಬೀಳುವುದರಿಂದ ಮತ್ತಷ್ಟು ಪೂರಕ ಅಂಶ ಸೇರ್ಪಡೆಗೊಳ್ಳುತ್ತದೆ. ಇದು ಕೆರೆ ಪರಿಸರಕ್ಕೆ ಪೂರಕವಾಗಲಿದೆ.

ಅಂತರ್ಜಲವೂ ವೃದ್ಧಿ: ಕಾರಂಜಿಕೆರೆಗೆ ನೀರು ತುಂಬಿಸುವುದರಿಂದ ಕೆರೆಯ ಸುತ್ತಲೂ 2 ಕಿ.ಮೀ ದೂರದವರೆಗೂ ಅಂತರ್ಜಲದ ಪ್ರಮಾಣ ಹೆಚ್ಚಾಗಲಿದೆ. ಈಗಾಗಲೇ ಹಲವು ಬೋರ್‍ವೆಲ್‍ಗಳು ನೀರಿನ ಕೊರತೆಯಿಂದಾಗಿ ಬತ್ತಿ ಹೋಗಿವೆ. ಕೆರೆಯಲ್ಲಿ ಸದಾ ನೀರಿ ದ್ದರೆ ಅಂಜರ್ತಲ ವೃದ್ಧಿಯಾಗಲಿದೆ.

 

Translate »